ಶನಿವಾರ, ಮಾರ್ಚ್ 6, 2021
19 °C

ಪರಿಷತ್‌ನಲ್ಲಿ ಸೂಟುಬೂಟಿನ ಗಮ್ಮತ್ತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಷತ್‌ನಲ್ಲಿ ಸೂಟುಬೂಟಿನ ಗಮ್ಮತ್ತು!

ಬೆಂಗಳೂರು: ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಬುಧವಾರ ವಿಧಾನಪರಿಷತ್‌ನಲ್ಲಿ ಹಲವು ಸದಸ್ಯರು ಸೂಟು ಬೂಟು ಧರಿಸಿ ಸದನದ ಗಮನ ಸೆಳೆದರು.ಸಭಾನಾಯಕ ಎಸ್‌.ಆರ್‌. ಪಾಟೀಲ, ಜೆಡಿಎಸ್‌ ನಾಯಕ ಎಂ.ಸಿ. ನಾಣಯ್ಯ, ಮುಖ್ಯ ಸಚೇತಕ ಆರ್‌.ವಿ. ವೆಂಕಟೇಶ್‌, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ವಿರೋಧ ಪಕ್ಷದ ಉಪನಾಯಕ ಕೆ.ಬಿ. ಶಾಣಪ್ಪ, ಬಿಜೆಪಿಯ ಗಣೇಶ ಕಾರ್ಣಿಕ್‌, ಅಶ್ವತ್ಥನಾರಾಯಣ, ಪ್ರೊ. ಕೃಷ್ಣಭಟ್‌, ಪ್ರೊ.ಎಂ.ಆರ್‌. ದೊರೆಸ್ವಾಮಿ ಅವರು ಸೂಟುಬೂಟಿನಲ್ಲಿ ಸದನಕ್ಕೆ ಹಾಜರಾಗಿದ್ದರು. ನಾರಾಯಣಸಾ ಭಾಂಡಗೆ ಅವರು ಟೋಪಿ ಹಾಕಿಕೊಂಡು ಬಂದಿದ್ದು ವಿಶೇಷವಾಗಿತ್ತು.‘ಇಂದು ಬಿಜೆಪಿಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವೇ? ಮದುವೆ, ಮುಂಜಿ ಏನಾದರೂ ಇದೆಯೇ’ ಎಂದು ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷದ ಸದಸ್ಯರನ್ನು ಕಿಚಾಯಿಸುವ ಪ್ರಯತ್ನ ಮಾಡಿದರು.ಕಾಂಗ್ರೆಸ್ ಸದಸ್ಯೆ ಮೋಟಮ್ಮ ಪ್ರತಿಕ್ರಿಯಿಸಿ, ‘ಹಲವು ಸದಸ್ಯರು ಸೂಟುಬೂಟು ಧರಿಸಿದ್ದಾರೆ. ಇದರಿಂದ ಸದನ ಇಂಗ್ಲೆಂಡ್‌ನ ಹೌಸ್‌ ಆಫ್‌ ಲಾರ್ಡ್ಸ್‌ನಂತೆ ಕಾಣುತ್ತಿದೆ. ಸಭಾಪತಿಗಳು ನೀವೇನಾದರೂ ಸೂಟು ಹಾಕಿಕೊಂಡು ಬರಲು ಸೂಚಿಸಿದ್ದೀರಾ. ಹಾಗಾದರೆ ನಮಗೆ ಏಕೆ ಡ್ರೆಸ್‌ ಕೋಡ್‌ ಬಗ್ಗೆ ತಿಳಿಸಲಿಲ್ಲ’ ಎಂದರು.ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಪ್ರತಿಕ್ರಿಯಿಸಿ, ‘ಸೂಟು ಹಾಕಿಕೊಂಡು ಬರುವುದು ಸದಸ್ಯರ ವಿವೇಚನೆಗೆ ಬಿಟ್ಟಿದ್ದು. ಆದರೆ, ಅಧಿವೇಶನದ ಪ್ರಥಮ ಮತ್ತು ಕೊನೆ ದಿನ ಈ ರೀತಿ ಸೂಟುಬೂಟು ಹಾಕಿಕೊಂಡು ಬಂದರೆ ಉತ್ತಮ’ ಎಂದು ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.