ಪರಿಷತ್: ಅಲ್ಪ ಮತ ಅಂತರದಿಂದ ರಾಮಚಂದ್ರಗೌಡ ಜಯ

7

ಪರಿಷತ್: ಅಲ್ಪ ಮತ ಅಂತರದಿಂದ ರಾಮಚಂದ್ರಗೌಡ ಜಯ

Published:
Updated:
ಪರಿಷತ್: ಅಲ್ಪ ಮತ ಅಂತರದಿಂದ ರಾಮಚಂದ್ರಗೌಡ ಜಯ

ಬೆಂಗಳೂರು:  ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಪದವೀಧರರ ಕ್ಷೇತ್ರದ ಫಲಿತಾಂಶ ಗುರುವಾರ ಬೆಳಿಗ್ಗೆ 9ಕ್ಕೆ ಪ್ರಕಟವಾಗಿದ್ದು, ಬಿಜೆಪಿಯ ರಾಮಚಂದ್ರಗೌಡ ಅವರು 244 ಮತಗಳ ಅಲ್ಪ ಅಂತರದಿಂದ ಜಯ ಗಳಿಸಿದ್ದಾರೆ.ಬುಧವಾರ ಬೆಳಿಗ್ಗೆ 8ಕ್ಕೆ ಆರಂಭವಾದ ಮತ ಎಣಿಕೆ ಗುರುವಾರ ಬೆಳಿಗ್ಗೆ 9ರವರೆಗೂ ಮುಂದುವರಿಯಿತು. ಗೆಲುವಿಗೆ ಅಗತ್ಯವಿರುವ ಮತಗಳನ್ನು ಯಾವ ಅಭ್ಯರ್ಥಿಯೂ ಮೊದಲ ಸುತ್ತಿನಲ್ಲಿ ಪಡೆಯದ ಕಾರಣ ಎರಡನೇ ಆದ್ಯತೆ ಮತಗಳನ್ನು 16 ಸುತ್ತುಗಳಲ್ಲಿ ಎಣಿಕೆ ಮಾಡಿ ಅಂತಿಮವಾಗಿ ಫಲಿತಾಂಶ ಪ್ರಕಟಿಸಲಾಯಿತು.ಮೊದಲ ಆದ್ಯತೆ ಮತಗಳ ಎಣಿಕೆ ಮುಗಿದ ನಂತರ ಜೆಡಿಎಸ್‌ನ ಎ.ದೇವೇಗೌಡ ಅವರು ಬಿಜೆಪಿಯ ರಾಮಚಂದ್ರಗೌಡ ಅವರಿಗಿಂತ 159 ಮತಗಳನ್ನು ಹೆಚ್ಚಿಗೆ ಪಡೆದಿದ್ದರು. ಆದರೆ ಗೆಲುವಿಗೆ 12,669 ಮತಗಳನ್ನು ಪಡೆಯುವುದು ಅನಿವಾರ್ಯವಾಗಿದ್ದ ಕಾರಣ ಎರಡನೇ ಆದ್ಯತೆ ಮತಗಳ ಎಣಿಕೆ ಮಾಡಲಾಯಿತು.
ದೇವೇಗೌಡ ಮತ್ತು ರಾಮಚಂದ್ರಗೌಡ ನಡುವೆ ಕೊನೆಯವರೆಗೂ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಜಯದ ಮಾಲೆ ರಾಮಚಂದ್ರಗೌಡ ಅವರ ಕೊರಳಿಗೆ ಬಿತ್ತು. ಈ ಮೂಲಕ ಅವರು 5ನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. 2006ರಲ್ಲಿ ಮೊದಲ ಸುತ್ತಿನಲ್ಲೇ ಜಯಗಳಿಸಿದ್ದ ರಾಮಚಂದ್ರಗೌಡ ಈ ಬಾರಿ ಎರಡನೇ ಆದ್ಯತೆ ಮತ ಎಣಿಕೆಯ ಕೊನೆ ಸುತ್ತಿನವರೆಗೂ ಕಾಯಬೇಕಾಯಿತು.ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಜಯ ಗಳಿಸಿದೆ.ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರಗೌಡ, ಗಣೇಶ್ ಕಾರ್ಣಿಕ್, ಮರಿತಿಬ್ಬೇಗೌಡ ಅವರ ಅವಧಿ ಇದೇ 21ಕ್ಕೆ ಮುಕ್ತಾಯವಾಗಲಿದೆ. ಇವರೆಲ್ಲ ಪುನರಾಯ್ಕೆಯಾಗಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ವೈ.ಎ.ನಾರಾಯಣಸ್ವಾಮಿ ಚುನಾವಣೆಗೂ ಮೊದಲೇ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.ಈ ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಅವರು ಸಹ ಮೇಲ್ಮನೆಗೆ ಹಳಬರು. ಈಶಾನ್ಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿಯ ಅಮರನಾಥ ಪಾಟೀಲ ಮಾತ್ರ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry