ಪರಿಷತ್ ಕಲಾಪಕ್ಕೆ `ತಾರಾ' ಮೆರುಗು

7

ಪರಿಷತ್ ಕಲಾಪಕ್ಕೆ `ತಾರಾ' ಮೆರುಗು

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಪರಿಷತ್ ಸದಸ್ಯೆಯಾಗಿ ನಾಮಕರಣಗೊಂಡ ಬಳಿಕ ಇದೇ ಮೊದಲ ಸಲ ಅಧಿವೇಶನದಲ್ಲಿ ಪಾಲ್ಗೊಂಡ ಕಲಾವಿದೆ ತಾರಾ ಅನುರಾಧ, ತಮ್ಮ ಪ್ರಬುದ್ಧ ವಾದ ಮಂಡನೆ ಮೂಲಕ ಗುರುವಾರ `ಹಿರಿಯರ ಮನೆ'ಯಲ್ಲಿ ಗಮನ ಸೆಳೆದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ತಾರೆಯಾದ ತಾರಾ, ತಮ್ಮ ಮೊದಲ ಪ್ರಶ್ನೆಗೆ ಆಯ್ಕೆಮಾಡಿಕೊಂಡಿದ್ದು ಚಿತ್ರರಂಗದ ವಿಷಯವನ್ನೇ. ಪಟ್ಟುಬಿಡದೆ ವಾದ ಮಂಡಿಸಿದ ಅವರು, ಸಿನಿಮಾ ಚಿತ್ರೀಕರಣದ ಅನುಮತಿ ಪಡೆಯಲು ಏಕಗವಾಕ್ಷಿ ಸೌಲಭ್ಯವನ್ನು ಸರ್ಕಾರದಿಂದ ಘೋಷಣೆ ಮಾಡಿಸುವಲ್ಲಿಯೂ ಯಶಸ್ವಿಯಾದರು.ಬುಧವಾರದಿಂದ ಸದನದಲ್ಲೇ ಕುಳಿತು ಕಲಾಪಗಳನ್ನು ಏಕಾಗ್ರಚಿತ್ತದಿಂದ ಆಲಿಸುತ್ತಿದ್ದ ತಾರಾ, ಒಂದೇ ದಿನದಲ್ಲಿ ಸಮರ್ಥವಾಗಿ ವಾದಿಸುವ ಕಲೆ ಕರಗತ ಮಾಡಿಕೊಂಡರು. ಒಂದಿನಿತೂ ಅಳುಕದೆ ವಿಷಯ ಮಂಡಿಸಿದ ಅವರ ವೈಖರಿಗೆ ಪರಿಷತ್ತಿನ ಸದಸ್ಯರೆಲ್ಲ ಮೆಚ್ಚುಗೆಯಿಂದ ತಲೆದೂಗಿದರು.ಕನ್ನಡ ಚಿತ್ರರಂಗದ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಸಮಸ್ಯೆಯನ್ನು ನಿಲುವಳಿ ಸೂಚನೆ ಮೂಲಕ ತಾರಾ, ಸರ್ಕಾರದ ಗಮನಕ್ಕೆ ತಂದರು. ಚಲನಚಿತ್ರ ಕಲಾವಿದರಿಗೂ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು. ಅವರ ಬೆಂಬಲಕ್ಕೆ ಸಂದೇಶ ನಾಗರಾಜ್, ವೀರಣ್ಣ ಮತ್ತಿಕಟ್ಟಿ ಮತ್ತಿತರರು ನಿಂತರು.ಸರ್ಕಾರದ ಪರವಾಗಿ ಉತ್ತರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ, `ಚಲನಚಿತ್ರ ಕಲಾವಿದರಿಗೆ ಮಾಸಾಶನ ನೀಡುವಂತಹ ಯಾವುದೇ ಯೋಜನೆ ಸದ್ಯ ಜಾರಿಯಲ್ಲಿಲ್ಲ. ಆದರೆ, ಕಳೆದ ವರ್ಷವೇ ಸರ್ಕಾರ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಕಲ್ಯಾಣ ನಿಧಿಯೊಂದನ್ನು ಸ್ಥಾಪಿಸಿದೆ. ರೂ 91 ಲಕ್ಷವನ್ನು ಅದಕ್ಕಾಗಿ ಬಿಡುಗಡೆ ಮಾಡಿದೆ. ತೊಂದರೆಯಲ್ಲಿ ಇರುವವರಿಗೆ ಈ ನಿಧಿಯಿಂದ ಧನಸಹಾಯ ನೀಡಲಾಗುತ್ತದೆ' ಎಂದರು.`ಸಿನಿಮಾ ಚಿತ್ರೀಕಣ ನಡೆಸಲು ಇನ್ನುಮುಂದೆ ನಿರ್ಮಾಪಕರು ಪ್ರತಿ ಇಲಾಖೆಯನ್ನು ಸುತ್ತಬೇಕಿಲ್ಲ. ಅದಕ್ಕಾಗಿ ಸರ್ಕಾರ ಏಕಗವಾಕ್ಷಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಒಮ್ಮೆ ಮಾತ್ರ ಅನುಮತಿ ಪಡೆದರೆ ಸಾಕು' ಎಂದು ತಿಳಿಸಿದರು.`ಪಕ್ಕದ ರಾಜ್ಯಗಳಲ್ಲಿ ಚಲನಚಿತ್ರ ಕಲಾವಿದರಿಗೆ ಗುಂಪು ವಸತಿ ಯೋಜನೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ನಮ್ಮ ಕಲಾವಿದರಿಗೂ ಅಂತಹ ಸೌಕರ್ಯ ನೀಡಬೇಕು. ಈ ವಿಷಯವಾಗಿ ವಸತಿ ಸಚಿವ ವಿ.ಸೋಮಣ್ಣ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು' ಎಂದು ತಾರಾ ಆಗ್ರಹಿಸಿದರು.ಸಚಿವ ಸೋಮಣ್ಣ ಸುಮ್ಮನೇ ಕುಳಿತಾಗ, ಪಟ್ಟು ಸಡಿಲಿಸದ ಅವರು, `ವಸತಿ ಸಚಿವರು ಮಾತನಾಡಲು ಎದ್ದರೆ ನಾನು ಕೂಡುತ್ತೇನೆ' ಎಂದರು. `ಸಚಿವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು' ಎಂದು ಸಭಾಪತಿ ಶಂಕರಮೂರ್ತಿ ಸೂಚಿಸಿದರು.`ಕಲಾವಿದರ ಜೊತೆಯಲ್ಲಿ ಚರ್ಚೆ ನಡೆಸಿ, ನಿವೇಶನ ಗುರುತಿಸಲಾಗುವುದು. ಲಭ್ಯವಿದ್ದ ಪ್ರದೇಶದಲ್ಲಿ ಗುಂಪು ಮನೆ ಕಟ್ಟಲು ಸಹಕಾರ ನೀಡಲಾಗುವುದು' ಎಂದು ಸೋಮಣ್ಣ ಭರವಸೆ ನೀಡಿದರು. `ತಾರಾ ಬೆಂಬಲಕ್ಕೆ ಎಲ್ಲರೂ ನಿಲ್ಲುತ್ತಾರೆ. ಸಚಿವರೂ ಕೆಲಸ ಮಾಡಿಕೊಡುತ್ತಾರೆ' ಎಂದು ಹಿರಿಯ ಸದಸ್ಯ ಜೆಡಿಎಸ್‌ನ ಎಂ.ಸಿ. ನಾಣಯ್ಯ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ಮುಳುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry