ಪರಿಷತ್ ಗ್ರಂಥಾಲಯ ಈಗ ಮುಕ್ತ ಮುಕ್ತ

ಶನಿವಾರ, ಮೇ 25, 2019
26 °C

ಪರಿಷತ್ ಗ್ರಂಥಾಲಯ ಈಗ ಮುಕ್ತ ಮುಕ್ತ

Published:
Updated:

ಅದು 1915ರ ಮೇ ಆರನೇ ತಾರೀಕು. ಹಿಂದಿನ ದಿನವಷ್ಟೇ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿತ್ತು. ಎರಡನೇ ದಿನ ನಡೆದ ಸಭೆಯಲ್ಲಿ ಗ್ರಂಥಾಲಯವೊಂದನ್ನು ತೆರೆದರೆ ಹೇಗೆ ಎಂಬ ಪ್ರಶ್ನೆ ಮೂಡಿಬಂತು. ಅಂದಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಒಪ್ಪಿಗೆಯೂ ಸಿಕ್ಕಿ, ಅದೇ ದಿನ ನಾಲ್ಕು ಪುಸ್ತಕಗಳನ್ನು ಸಂಗ್ರಹಿಸಲಾಯಿತು. 1917ರ ಮಾರ್ಚ್ 31ರಂದು ಪುಸ್ತಕ ಭಂಡಾರದಲ್ಲಿದ್ದ ಒಟ್ಟು ಗ್ರಂಥಗಳು 376. ಅದೇ ಗ್ರಂಥಭಂಡಾರದಲ್ಲಿ 97 ವಸಂತಗಳ ಬಳಿಕ ಇದೀಗ ಎಪ್ಪತ್ತು ಸಾವಿರ ಪುಸ್ತಕಗಳು ಸಂಗ್ರಹವಾಗಿವೆ. ಮೂರು ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿರುವ ಸಾಹಿತ್ಯ ಪರಿಷತ್ತಿನ `ಸರಸ್ವತಿ ಭಂಡಾರ~ಕ್ಕೆ ಇದೀಗ ಹೊಸರೂಪ ನೀಡಲು ಸಾರ್ವಜನಿಕ ಗ್ರಂಥಾಲಯ ಮುಂದಾಗಿದೆ.

ನಗರ ಕೇಂದ್ರ ಗ್ರಂಥಾಲಯದ ಪಶ್ಚಿಮ ವಲಯದ ನೆರವಿನಿಂದ ಈ ಗ್ರಂಥಾಲಯ ನವೀಕೃತಗೊಂಡಿದೆ. ಇಲ್ಲಿ 3000 ಅಪರೂಪದ ಗ್ರಂಥಗಳಿದ್ದು, 600ಕ್ಕೂ ಅಧಿಕ ತಾಳೆಗರಿ ಹಾಗೂ ಹಸ್ತಪ್ರತಿಗಳಿವೆ. ನೂರಾರು ವರ್ಷ ಹಳೆಯದಾದ ಈ ತಾಳೆಗರಿಗಳಿಗೆ ನಿಯತಕಾಲಿಕೆಗಳನ್ನು ರಟ್ಟುಗಟ್ಟಿಸಿ ಸಂರಕ್ಷಿಸಿಡಲಾಗಿದೆ. ಸುವ್ಯವಸ್ಥಿತ ರೀತಿಯಲ್ಲಿ ವರ್ಗೀಕರಿಸಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಇಡಲಾಗಿದೆ. 1941ರಲ್ಲಿ ಎ. ಶಾಮರಾಯರು ದಿ. ದೇವಶಿಖಾಮಣಿ ಅಳಸಿಂಗಾಚಾರ್ಯ ಅವರ ರಾಮಾಯಣ, ಭಾರತ, ಭಾಗವತ ಗ್ರಂಥಗಳನ್ನು ಹಾಗೂ 1945ರಲ್ಲಿ ರಾವ್‌ಸಾಹೇಬ ರಾಮರಾಯರ ಮಕ್ಕಳು ಹಾಗೂ ಅವರ ಕುಟುಂಬದವರು ಅಮೂಲ್ಯವಾದ 300 ಗ್ರಂಥಗಳನ್ನು ದಾನವಾಗಿ ನೀಡಿದ್ದರು. 1870ರ ಬಳಿಕ ಮುದ್ರಣವಾದ ನೂರಕ್ಕೂ ಅಧಿಕ ಅಪರೂಪದ ಪುಸ್ತಕಗಳ ಏಕಮಾತ್ರ ಪ್ರತಿಗಳು ಈ ಸಂಗ್ರಹದಲ್ಲಿವೆ. ಇವೆಲ್ಲವೂ ಶುಕ್ರವಾರದಿಂದ ಸಾರ್ವಜನಿಕರ ಓದಿಗೆ ಲಭ್ಯವಾಗಲಿವೆ.

`ಅಷ್ಟು ವರ್ಷಗಳಿಂದ ಸಾಹಿತ್ಯ ಪರಿಷತ್ತಿನಲ್ಲಿ ಗ್ರಂಥಾಲಯವಿದ್ದರೂ ಅದು ಸಾರ್ವಜನಿಕರಿಗೆ ಮುಕ್ತವಾಗಿರಲಿಲ್ಲ. ಪರಿಷತ್ತಿನ ಸದಸ್ಯತ್ವ ಹೊಂದಿದವರಷ್ಟೇ ಪುಸ್ತಕಗಳನ್ನು ಬಳಸಬಹುದಿತ್ತು. ಇದೀಗ ಸಾರ್ವಜನಿಕ ಗ್ರಂಥಾಲಯ ಇಲಾಖೆಯೂ ಕೈಜೋಡಿಸಿದ್ದರಿಂದ ಜನಸಾಮಾನ್ಯರಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ. ಇದರಿಂದ ಸಾಹಿತ್ಯ ಪರಿಷತ್ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಲಿದೆ~ ಎಂದರು ಪರಿಷತ್‌ನ ಗ್ರಂಥಪಾಲಕಿ ಜಯಂತಿ.

`ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರನ್ನು ಸಮಾರಂಭವೊಂದರಲ್ಲಿ ಭೇಟಿಯಾದಾಗ ಪರಿಷತ್ತಿನ ಆವರಣದಲ್ಲೂ ಗ್ರಂಥಾಲಯ ತೆರೆಯಲು ನಿರ್ಧರಿಸಿದೆವು. ಪರಿಷತ್ತಿನಲ್ಲಿ ಅಮೂಲ್ಯವಾದ ಪುಸ್ತಕಗಳಿದ್ದರೂ ಅವು ಸಾಮಾನ್ಯ ಓದುಗನಿಗೆ ಲಭ್ಯವಾಗಿರಲಿಲ್ಲ. 77 ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದರೂ, ಅಧ್ಯಕ್ಷರ ಭಾಷಣ ಬೇಕೆಂದರೆ ಅದನ್ನು ಸಂಗ್ರಹಿಸುವುದು ಕಷ್ಟದ ಕೆಲಸವೇ ಆಗಿತ್ತು. 20 ವರ್ಷಗಳ ಹಿಂದೆ ಪುಸ್ತಕ ಪ್ರಾಧಿಕಾರದಲ್ಲೂ ಕೆಲಸ ಮಾಡಿದ್ದ ನನಗೆ ಅಲ್ಲಿರುವ ಅಪರೂಪದ ಪುಸ್ತಕಗಳ ಬಗ್ಗೆ ಅರಿವಿತ್ತು. ಹೊಸದಾಗಿ ಗ್ರಂಥಾಲಯ ತೆರೆಯುವ ಬದಲು ಇರುವುದನ್ನೇ ನವೀಕರಿಸಿದ್ದು ಒಳಿತು ಎಂದು ನಿರ್ಧರಿಸಿದೆವು. ಆರಂಭಿಕವಾಗಿ 5000 ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ವತಿಯಿಂದ ನೀಡಿದ್ದು ಮುಂದೆ ಓದುಗರ ಬೇಡಿಕೆ ಆಧರಿಸಿ ಹೆಚ್ಚಿನ ಪುಸ್ತಕ ಒದಗಿಸಲಾಗುವುದು~ ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ನಿರ್ದೇಶಕ ವೆಂಕಟೇಶ್.

ಪಶ್ಚಿಮ ವಲಯದ ಎಲ್ಲಾ 17 ಶಾಖೆಗಳ ಜವಾಬ್ದಾರಿ ಹೊತ್ತಿರುವ ಉಪನಿರ್ದೇಶಕ ವೆಂಕಟೇಶ್ ಅವರ ಅಭಿಪ್ರಾಯವೂ ಇದೇ. `ಇದು 3200 ಚದರ ಅಡಿಗಳ ಎರಡು ಮಹಡಿಗಳ ಕಟ್ಟಡ. ಓದುಗರಿಗೆ ಹಾಗೂ ಪುಸ್ತಕಗಳ ಸಂರಕ್ಷಣೆಗೆ ಇಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ಮುಂದಿನ ದಿನಗಳಲ್ಲಿ ಅಂತರ್ಜಾಲ ಬ್ರೌಸಿಂಗ್ ಸೆಂಟರ್ ತೆರೆಯುವ ಉದ್ದೇಶವೂ ಇದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು ಅಲ್ಲೂ ಸಾಕಷ್ಟು ಪುಸ್ತಕಗಳಿವೆ. ಹೊರರಾಜ್ಯಗಳಿಂದ ಬರುವ ಸಂಶೋಧಕರಿಗೂ ಈ ಗ್ರಂಥಾಲಯ ಮುಕ್ತ~ ಎಂದು ವಿವರಿಸಿದರು.

`ಒಂದೇ ಪ್ರತಿ ಇರುವಂಥ ಸಾವಿರ ಪುಸ್ತಕಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ. ಅವುಗಳ ಮರುಮುದ್ರಣವೂ ಸಾಧ್ಯವಿಲ್ಲವಾದ್ದರಿಂದ ಡಿಜಿಟಲೈಸ್ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಆದ್ದರಿಂದ ಕನ್ನಡ ಪುಸ್ತಕಗಳಿಗೇ ಪ್ರಥಮ ಆದ್ಯತೆ ನೀಡಿದ್ದೇವೆ. ಇಲ್ಲಿರುವ ಎಲ್ಲಾ ಪುಸ್ತಕಗಳನ್ನೂ ಶಾಸ್ತ್ರೀಯವಾಗಿ ವಿಂಗಡಿಸಿ ಓದುಗರಿಗೆ ನೆರವಾಗುವಂತೆ ಮಾಡಿದ್ದೇವೆ~ ಎಂದರು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸಂಗಮೇಶ್ ಬಾದವಾಡಗಿ.

ಶತಮಾನೋತ್ಸವ ಸಂಭ್ರಮಕ್ಕೆ ಸಾಹಿತ್ಯ ಪರಿಷತ್ ಯೋಜನೆಗಳನ್ನು ಹಮ್ಮಿಕೊಂಡಿದ್ದು ಮುಖ್ಯಮಂತ್ರಿಗಳ ಅನುಮತಿಗಾಗಿ ಕಾಯುತ್ತಿದೆ. ಆ ಯೋಜನೆಗಳು

ಹಿರಿಯ ಲೇಖಕರಿಂದ ಪ್ರಾಚೀನ ಸಾಹಿತ್ಯಕ್ಕೆ ಸಂಬಂಧಿಸಿದ 100 ಮೌಲಿಕ ಗ್ರಂಥಗಳನ್ನು ಹೊರತರುವ ಬೃಹತ್ ಯೋಜನೆ.

ಆಧುನಿಕ ಸಾಹಿತ್ಯ ಚರಿತ್ರೆಯ ಹತ್ತು ಸಂಪುಟಗಳನ್ನು ಹೊರತರುವ ಉದ್ದೇಶ

ಕಳೆದ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಮಂಜೂರಾಗಿರುವ ಐದು ಕೋಟಿಯೊಂದಿಗೆ ಮತ್ತಷ್ಟು ಸಹಾಯಧನ ಸೇರಿಸಿಕೊಂಡು ವಿಶ್ವೇಶ್ವರ ಲೇಔಟ್ ಸಮೀಪ ಹೊಸ ಗ್ರಂಥಾಲಯವೊಂದನ್ನು ತೆರೆಯಲು ಅನುಮತಿ ಕೇಳಿದೆ.

ಹಸ್ತಪ್ರತಿ ವಿಭಾಗ

ಕೇಂದ್ರ ಸರ್ಕಾರದ ಆರ್ಥಿಕ ನೆರವಿನಿಂದ ಸರಸ್ವತಿ ಭಂಡಾರದಲ್ಲಿ ಹಸ್ತಪ್ರತಿ ವಿಭಾಗವನ್ನು ತೆರೆಯಲಾಯಿತು. ಡಾ. ಹಂಪ ನಾಗರಾಜಯ್ಯ, ಪದ್ಮರಾಜಯ್ಯ ಮೊದಲಾದ ಹಿರಿಯ ಸಾಹಿತಿಗಳು ಉಚಿತವಾಗಿ ನೀಡಿದ ಅಪೂರ್ವ ಹಸ್ತಪ್ರತಿ ಹಾಗೂ ತಾಳೆಗರಿಗಳು ಈ ಸಂಗ್ರಹದಲ್ಲಿವೆ. 1983ರಲ್ಲಿ ಒಂದು ಸಾವಿರ ರೂಪಾಯಿ ಮೌಲ್ಯದ ಹಸ್ತಪ್ರತಿಗಳನ್ನು ಈ ವಿಭಾಗಕ್ಕೆ ಸೇರಿಸಲಾಗಿದೆ. ಪ್ರಭುಲಿಂಗಲೀಲೆ, ರಾಮಚಂದ್ರಚರಿತ ಪುರಾಣ, ಮಹಾಲಿಂಗರಂಗನ ಅನುಭವಾಮೃತ, ಬತ್ತಲೇಶ್ವರನ ವಾಲ್ಮೀಕಿ ರಾಮಾಯಣ, ಪಂಪನ ಆದಿಪುರಾಣ ಮೊದಲಾದ ಹಸ್ತಪ್ರತಿ ಮತ್ತು ತಾಡೋಲೆಗಳ ಸಂಗ್ರಹವಿದೆ.

ಇಂದು ಉದ್ಘಾಟನೆ

ಉದ್ಘಾಟನೆ: ನವೀಕೃತ ಸರಸ್ವತೀ ಭಂಡಾರವನ್ನು ಮಧ್ಯಾಹ್ನ 12.30ಕ್ಕೆ ಉಪಮುಖ್ಯಮಂತ್ರಿ ಆರ್.ಅಶೋಕ್ ಉದ್ಘಾಟಿಸಲಿದ್ದಾರೆ. ಗ್ರಂಥಾಲಯ ಸಚಿವ ರೇವುನಾಯಕ್ ಬೆಳಮಗಿ, ಮೇಯರ್ ಡಿ. ವೆಂಕಟೇಶ್‌ಮೂರ್ತಿ, ಪಾಲಿಕೆ ಸದಸ್ಯ ಬಿ.ವಿ. ಗಣೇಶ್, ಇಲಾಖೆ ನಿರ್ದೇಶಕ ಕೆ.ಜಿ. ವೆಂಕಟೇಶ್, ಹಿರಿಯ ಪತ್ರಕರ್ತ ಇ.ವಿ. ಸತ್ಯನಾರಾಯಣ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry