ಪರಿಷತ್ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕಸರತ್ತು

7

ಪರಿಷತ್ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕಸರತ್ತು

Published:
Updated:

ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂನ್ 11ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆ ದಿನ. ನಾಮಪತ್ರ ಸಲ್ಲಿಕೆಗೆ ಮೂರು ದಿನ ಮಾತ್ರ ಬಾಕಿ ಇದ್ದು ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಅವರು ಮಂಗಳವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಬುಧವಾರ ನಡೆಯುವ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಹಿರಿಯ ನಾಯಕರ ನಡುವೆ ಒಮ್ಮತ ಮೂಡಿದರೆ ಗೆಲುವಿಗೆ ಅವಕಾಶ ಇರುವ ಆರು ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಇಲ್ಲದಿದ್ದರೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿ, ಅಂತಿಮ ಆಯ್ಕೆಯನ್ನು ಕೇಂದ್ರ ಚುನಾವಣಾ ಸಮಿತಿಯ ವಿವೇಚನೆಗೆ ಬಿಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಯಡಿಯೂರಪ್ಪ  ತಮ್ಮ ಬಣದ ಮೂವರಿಗಾದರೂ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ತಮ್ಮ ಬಣದಿಂದ ಟಿಕೆಟ್ ಆಕಾಂಕ್ಷಿಗಳಾಗಿರುವವರ ಪಟ್ಟಿಯನ್ನು ಅವರು ಪಕ್ಷದ ಅಧ್ಯಕ್ಷರಿಗೆ ನೀಡಿ ಸಭೆಯಿಂದ ಹೊರ ನಡೆದರು ಎನ್ನಲಾಗಿದೆ. ಮಂಗಳವಾರ ರಾತ್ರಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ, `ನಾವೆಲ್ಲ ಒಂದಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಯಡಿಯೂರಪ್ಪ ಅವರ ಮೊಮ್ಮಗಳ ಮದುವೆಗೆ ಹೋಗುತ್ತೇನೆ~ ಎಂದರು.ಮೂಲಗಳ ಪ್ರಕಾರ ಪರಿಷತ್ತಿನ ಹಾಲಿ ಸದಸ್ಯರಾದ ವಿಮಲಾ ಗೌಡ, ಡಿ.ಎಸ್.ವೀರಯ್ಯ ಮತ್ತು ತೋಂಟದಾರ್ಯ ಅವರು ಪುನರಾಯ್ಕೆಯಾಗುವ ಸಾಧ್ಯತೆಗಳಿವೆ. ಶಿವಮೊಗ್ಗದ ಭಾನುಪ್ರಕಾಶ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಾಥ ರಾವ್ ಮಲ್ಕಾಪುರೆ ಅವರಿಗೆ ಟಿಕೆಟ್ ದೊರಕಿಸಿಕೊಡಲು ಪ್ರಭಾವಿ ನಾಯಕರು ಒತ್ತಡ ಹೇರುತ್ತಿದ್ದಾರೆ.ಯಡಿಯೂರಪ್ಪ ಅವರು ತೋಂಟದಾರ್ಯ, ಲಕ್ಷ್ಮೀನಾರಾಯಣ, ವೀರಯ್ಯ ಮತ್ತು ಬಿ.ಜೆ.ಪುಟ್ಟಸ್ವಾಮಿ ಅವರಿಗೆ ಟಿಕೆಟ್ ಕೊಡಿಸಲು ಯತ್ನಿಸಿದ್ದಾರೆ. ಪುಟ್ಟಸ್ವಾಮಿ ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ಕಾರಣ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ. ಅವರನ್ನು ಹೊರತುಪಡಿಸಿದರೂ ಉಳಿದ ಮೂವರು ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂದು ಯಡಿಯೂರಪ್ಪ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.ಗೃಹ ಸಚಿವ ಆರ್.ಅಶೋಕ ಮತ್ತು ಅವರ ಬೆಂಬಲಿಗ ಶಾಸಕರು ವಿಮಲಾ ಗೌಡ ಪರ ಲಾಬಿ ನಡೆಸಿದ್ದಾರೆ. ಮೂರನೇ ಬಾರಿಗೆ ಯಾರೊಬ್ಬರಿಗೂ ಟಿಕೆಟ್ ಕೊಡುವುದಿಲ್ಲ ಎಂದು ಪಕ್ಷದ ಮುಖಂಡರು ಪರೋಕ್ಷವಾಗಿ ಹೇಳಿರುವುದಕ್ಕೆ ಅಶೋಕ ಮತ್ತು ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೆಂಕಯ್ಯ ನಾಯ್ಡು ಅವರಿಗೆ ಅನ್ವಯಿಸದ ನಿಯಮ ವಿಮಲಾ ಗೌಡರಿಗೆ ಹೇಗೆ ಅನ್ವಯಿಸುತ್ತದೆ ಎಂದು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.ಈಶ್ವರಪ್ಪ ಅವರು ತಮ್ಮ ಕ್ಷೇತ್ರದವರೇ ಆದ ಭಾನುಪ್ರಕಾಶ್ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಬೀದರ್‌ನ ಮಲ್ಕಾಪುರೆ ಪರ ಇದ್ದಾರೆ. ಹೀಗಾಗಿ ಅವರ ಆಯ್ಕೆಗೆ ಹಾದಿ ಸುಗಮ ಎನ್ನಲಾಗಿದೆ.ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಮೊದಲೇ ಬಿಡುಗಡೆ ಮಾಡಿದರೆ ಭಿನ್ನಮತ ತಲೆದೋರಬಹುದು ಎಂಬ ಕಾರಣಕ್ಕಾಗಿ ಕೊನೆ ಗಳಿಗೆಯಲ್ಲಿ ಪಟ್ಟಿ ಬಿಡುಗಡೆ ಮಾಡಲು ಮೂರೂ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ ಎಂಬ ಮಾತುಗಳು ಆಯಾ ಪಕ್ಷಗಳ ವಲಯದಲ್ಲೇ ಕೇಳಿಬಂದಿವೆ.ಹೆಚ್ಚುವರಿ ಮತ: ವಾಟಾಳ್ ಮನವಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚುವರಿ ಮತಗಳನ್ನು ತಮಗೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಲ್ಲಿ ಮನವಿ ಮಾಡಿದರು.ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸ್ವಂತ ಬಲದ ಆಧಾರದಲ್ಲಿ ಆರು, ಮೂರು ಹಾಗೂ ಒಂದು ಸ್ಥಾನ ಗೆಲ್ಲಬಲ್ಲವು. ಇನ್ನುಳಿದ ಒಂದು ಸ್ಥಾನಕ್ಕೆ ನನ್ನನ್ನು ಬೆಂಬಲಿಸಬೇಕು~ ಎಂದು ಕೋರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry