ಭಾನುವಾರ, ನವೆಂಬರ್ 17, 2019
29 °C

ಪರಿಷತ್ ಚುನಾವಣೆ: ಮೋನಪ್ಪ ಭಂಡಾರಿ ಅವಿರೋಧ ಆಯ್ಕೆ

Published:
Updated:

ಬೆಂಗಳೂರು: ಡಾ.ವಿ.ಎಸ್.ಆಚಾರ್ಯ ಅವರ ನಿಧನದಿಂದ ತೆರವಾಗಿರುವ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಬಿಜೆಪಿಯ ಕೆ.ಮೋನಪ್ಪ ಭಂಡಾರಿ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.ಇದೇ 25ಕ್ಕೆ ನಿಗದಿಯಾಗಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿತ್ತು. ಭಂಡಾರಿ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆಗೆ ದಾರಿ ಸುಗಮವಾಗಿದೆ. ಗೆಲುವಿಗೆ ಬೇಕಾದ ಸಂಖ್ಯಾಬಲ ಕೊರತೆಯಿಂದ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.ಸೋಮವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಇದೇ 18 ಕೊನೆಯ ದಿನ. ಅವಿರೋಧ ಆಯ್ಕೆಯನ್ನು ಅಂದು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ಭಂಡಾರಿ, ಸದ್ಯ ಜಿಲ್ಲಾ ಘಟಕದ ವಕ್ತಾರರಾಗಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮುಖಂಡರಾದ ಕೆ.ಎಸ್.ಈಶ್ವರಪ, ಡಿ.ವಿ.ಸದಾನಂದಗೌಡ ಮತ್ತಿತರರು ಉಪಸ್ಥಿತರಿದ್ದರು.ವಿಧಾನ ಸಭೆಯಿಂದ ಪರಿಷತ್‌ಗೆ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ ಆಯ್ಕೆಯಾಗುವವರ ಸದಸ್ಯತ್ವದ ಅವಧಿ 2014ರ ಜೂನ್ 30ರವರೆಗೆ ಇದೆ. ಆಚಾರ್ಯ ಅವರು ಫೆಬ್ರುವರಿ 14ರಂದು ನಿಧನ ಹೊಂದಿದರು. ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ.

ಪ್ರತಿಕ್ರಿಯಿಸಿ (+)