ಸೋಮವಾರ, ಅಕ್ಟೋಬರ್ 21, 2019
21 °C

ಪರಿಷತ್ ಸಭಾನಾಯಕ: ಸಿಎಂ ತಿಳಿಸಿಲ್ಲ- ಸಭಾಪತಿ

Published:
Updated:

ವಿಜಾಪುರ: `ವಿಧಾನ ಪರಿಷತ್ ಸಭಾನಾಯಕರಾಗಿ ತಮ್ಮನ್ನು ಪರಿಗಣಿಸಬೇಕೆ ಅಥವಾ ಈಗಿನ ಸಭಾ ನಾಯಕ ಡಾ.ವಿ.ಎಸ್. ಆಚಾರ್ಯ ಅವರನ್ನೇ ಮುಂದುವರೆಸಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿ ಡಿ.ವಿ. ಸದಾನಂಗೌಡ ಇನ್ನೂ ನನಗೆ ಲಿಖಿತವಾಗಿ ಏನನ್ನೂ ತಿಳಿಸಿಲ್ಲ~ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕಮೂರ್ತಿ ಹೇಳಿದರು.`ಮುಖ್ಯಮಂತ್ರಿ ಸದಾನಂದಗೌಡರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಈ ಪ್ರಶ್ನೆ ಉದ್ಭವಿಸಿದೆ~ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. `ರಾಜ್ಯಸಭೆ ಸದಸ್ಯರಾಗಿರುವ ಪ್ರಧಾನಿ ಡಾ.ಮನಮೋಹನ ಸಿಂಗ್ ರಾಜ್ಯಸಭೆ ಸಭಾನಾಯಕರೂ ಆಗಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿದ್ದು, ಅವರೂ ಅಲ್ಲಿಯ ವಿಧಾನ ಪರಿಷತ್ ಸಭಾನಾಯಕರಾಗಿದ್ದಾರೆ~ ಎಂದರು.`ವಿಧಾನಪರಿಷತ್ ಸದಸ್ಯರಾದವರು ಮುಖ್ಯಮಂತ್ರಿಯಾದರೆ ಅವರೇ ಸಭಾನಾಯಕರು ಆಗಬೇಕೆ ಎಂಬ ನಿಯಮವೇನಿಲ್ಲ. ಅವರೇ ಸಭಾ ನಾಯಕರು ಆಗಬಹುದು ಇಲ್ಲವೆ ವಿಧಾನ ಪರಿಷತ್‌ನ ತಮ್ಮ ಪಕ್ಷದ ಸದಸ್ಯರೊಬ್ಬರನ್ನು ಸಭಾ ನಾಯಕ ಎಂದು ಸೂಚಿಸಲು ಅವಕಾಶವಿದೆ~ ಎಂದು ವಿವರಿಸಿದರು.`ಮುಖ್ಯಮಂತಿಯವರು ಈ ಕುರಿತು ನಮಗೆ ಲಿಖಿತ ತಿಳಿಸಬೇಕು. ವಿಧಾನ ಮಂಡಳ ಅಧಿವೇಶನ ಆರಂಭವಾಗುವುದಕ್ಕಿಂತ ಒಂದು ದಿನ ಮುಂಚಿತವಾಗಿ ತಿಳಿಸಿದರೂ ಸಾಕು~. ತಾವು ಸಭಾಪತಿ ಆಗಿರುವುದರಿಂದ ಬಿಜೆಪಿಯಲ್ಲಿನ ಬಿಕ್ಕಟ್ಟಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Post Comments (+)