ಮಂಗಳವಾರ, ಅಕ್ಟೋಬರ್ 15, 2019
26 °C

ಪರಿಷ್ಕೃತ ಪಠ್ಯಕ್ರಮ: ಪ್ರಾಯೋಗಿಕ ಶಿಕ್ಷಣಕ್ಕೆ ಪ್ರಾಧಾನ್ಯ

Published:
Updated:

ಉದ್ಯೋಗ ಆಧಾರಿತ ಶಿಕ್ಷಣ ವಿದ್ಯಾರ್ಥಿಗಳ ಅಗತ್ಯ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಬಿ.ಕಾಂ, ಬಿಬಿಎಂ ಮತ್ತು ಬಿಎಚ್‌ಎಂ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ಪಠ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿರುವುದು ಪರಿಷ್ಕೃತ ಪಠ್ಯಕ್ರಮದ ವಿಶೇಷ.ಬಿ.ಕಾಂ ಮುಗಿಸಿದ ಎಷ್ಟೋ ವಿದ್ಯಾರ್ಥಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವಿಧಾನ ಗೊತ್ತಿರುವುದಿಲ್ಲ ಎಂದರೆ ನಂಬಲೇಬೇಕು. ಇದನ್ನು ವಾಣಿಜ್ಯ ಬೋಧಿಸುವ ಪ್ರಾಧ್ಯಾಪಕರೇ ಒಪ್ಪಿಕೊಳ್ಳುತ್ತಾರೆ.  ಶಿಕ್ಷಣ ಮತ್ತು ಪ್ರಾಯೋಗಿಕ ಜ್ಞಾನದ ನಡುವೆ ಇರುವ ಅಂತರ ಇದಕ್ಕೆಲ್ಲ ಕಾರಣ. ಆದ್ದರಿಂದಲೇ ಹೊಸ ಪಠ್ಯಕ್ರಮದಲ್ಲಿ ಈ ಕಂದಕವನ್ನು ಮುಚ್ಚಲು ಯತ್ನಿಸಲಾಗಿದೆ. ಅಂತರರಾಷ್ಟ್ರೀಯ ಹಣಕಾಸು ವರದಿ ದರ್ಜೆಗೆ (ಇಂಟರ್‌ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ ಐಎಫ್‌ಆರ್‌ಎಸ್) ಅನುಗುಣವಾಗಿ ಪಠ್ಯಕ್ರಮ ರೂಪಿಸಲಾಗಿದೆ.ಏನಿದು ಐಎಫ್‌ಆರ್‌ಎಸ್?


ಯಾವುದೇ ಸಂಸ್ಥೆಯ ಲೆಕ್ಕ ಪತ್ರ ದಾಖಲೆಗಳನ್ನು ತಯಾರು ಮಾಡಲು ಅನುಸರಿಸಬೇಕಾದ ತತ್ವಗಳ ಸಂಕಲನ ಐಎಫ್‌ಆರ್‌ಎಸ್ ಎಂದು ವ್ಯಾಖ್ಯಾನಿಸಬಹುದು.

ಅಂತರರಾಷ್ಟ್ರೀಯ ಲೆಕ್ಕಪತ್ರ ಮಂಡಳಿ (ಇಂಟರ್‌ನ್ಯಾಷನಲ್ ಅಕೌಂಟಿಂಗ್ ಬೋರ್ಡ್, ಐಎಎಸ್‌ಬಿ) ಈ ತತ್ವಗಳನ್ನು ರೂಪಿಸಿದೆ. ಇದು ವಿಶ್ವ ಮಾನ್ಯವಾದ ತತ್ವವಾಗಿದೆ.2015ರಿಂದ ಐಎಫ್‌ಆರ್‌ಎಸ್ ಭಾರತದಲ್ಲಿ ಜಾರಿಗೆ ಬರಲಿದೆ. 2015ರ ನಂತರ ಎಲ್ಲ ಲೆಕ್ಕ- ಪತ್ರಗಳನ್ನು ಈ ತತ್ವದ ಆಧಾರದ ಮೇಲೆಯೇ ಸಿದ್ಧಪಡಿಸಬೇಕಾಗುತ್ತದೆ. ಬೆಂಗಳೂರಿನ ಕೆಲವು ಪ್ರತಿಷ್ಠಿತ ಕಂಪೆನಿಗಳು ಈಗಾಗಲೇ ಐಎಫ್‌ಆರ್‌ಎಸ್ ಆಧಾರದ ಮೇಲೆಯೇ ಲೆಕ್ಕ ಪತ್ರಗಳನ್ನು ತಯಾರು ಮಾಡುತ್ತಿವೆ ಎಂಬುದು ಗಮನಾರ್ಹ.ಐಎಫ್‌ಆರ್‌ಎಸ್ ದರ್ಜೆಯ ಬಗ್ಗೆ ಬಿ.ಕಾಂನ ಈಗಿನ ಪಠ್ಯಕ್ರಮದಲ್ಲಿ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಪದವಿ ಮುಗಿಸಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಲ್ಲ. ಆದರೆ 2012ಜೂನ್‌ನಿಂದ ಜಾರಿಗೆ ಬರುವ ಪಠ್ಯಕ್ರಮವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಐಎಫ್‌ಆರ್‌ಎಸ್ ದರ್ಜೆಯ ಬಗ್ಗೆ ಅಭ್ಯಾಸ ಮಾಡುತ್ತಾರೆ. ಹೊಸ ಬ್ಯಾಚ್‌ನ ವಿದ್ಯಾರ್ಥಿಗಳು 2015ರ ಹೊತ್ತಿಗೆ ಪದವಿ ಮುಗಿಸುತ್ತಾರೆ. ಅವರಿಗೆ ಉದ್ಯೋಗದ ಅವಕಾಶಗಳೂ ಹೇರಳವಾಗಿರುತ್ತವೆ. ಇದೆಲ್ಲ ಹೊಸ ಪಠ್ಯಕ್ರಮದಿಂದ ಸಾಧ್ಯವಾಗಲಿದೆ ಎಂಬ ನಂಬಿಕೆ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರದ್ದು.ಆರ್ಥಿಕ ಸ್ಥಿತಿಯ ಮಾಹಿತಿ, ಒಟ್ಟಾರೆ ಆದಾಯದ ಮಾಹಿತಿ ಪತ್ರ, ಕಂಪೆನಿಯ ನಗದು ಹಣ ಹರಿವಿನ ಮಾಹಿತಿ, ಕಂಪೆನಿಯ ಈಕ್ವಿಟಿ, ಬ್ಯಾಲೆನ್ಸ್ ಶೀಟ್, ಆದಾಯ ತೆರಿಗೆ ಸೇರಿದಂತೆ ಎಲ್ಲವನ್ನೂ ಐಎಫ್‌ಆರ್‌ಎಸ್ ಆಧಾರದಲ್ಲಿ ತಯಾರು ಮಾಡುವ ಬಗ್ಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. ಪ್ರಾಯೋಗಿಕ ತರಗತಿಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಸಹ ಹೊಸ ಪಠ್ಯಕ್ರಮದ ಮತ್ತೊಂದು ವಿಶೇಷ ಎನ್ನಬಹುದು. ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಪಠ್ಯವನ್ನು ಐದು ವರ್ಷಗಳಿಂದ ಪರಿಷ್ಕರಿಸಿರಲಿಲ್ಲ. ದೂರ ಶಿಕ್ಷಣ ಕೋರ್ಸ್‌ಗಳ ಪಠ್ಯವೂ ಹತ್ತು ವರ್ಷಗಳಿಂದ ಬದಲಾಗಿಲ್ಲ. ಈಗ ಸಿದ್ಧಪಡಿಸಿರುವ ಪಠ್ಯ ದೂರ ಶಿಕ್ಷಣಕ್ಕೂ ಅನ್ವಯವಾಗಲಿದೆ. ಹೋಟೆಲ್ ನಿರ್ವಹಣಾ ಕೋರ್ಸ್‌ನ (ಬಿಎಚ್‌ಎಂ) ಪಠ್ಯವೂ ಇಂದಿನ ಅಗತ್ಯಕ್ಕೆ ತಕ್ಕಂತೆ ಬದಲಾಗಿದೆ. ಪ್ರಾಯೋಗಿಕ ಕಲಿಕೆಗೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇದೆ.

Post Comments (+)