ಪರಿಷ್ಕೃತ ಸೀಟು ಹಂಚಿಕೆ ಪಟ್ಟಿಯಲ್ಲೂ ಅಕ್ರಮ

ಶುಕ್ರವಾರ, ಜೂಲೈ 19, 2019
23 °C

ಪರಿಷ್ಕೃತ ಸೀಟು ಹಂಚಿಕೆ ಪಟ್ಟಿಯಲ್ಲೂ ಅಕ್ರಮ

Published:
Updated:

ಬೆಂಗಳೂರು:  ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾದ ಸೇವಾನಿರತ ವೈದ್ಯರ ಪರಿಷ್ಕೃತ ಪಟ್ಟಿಯಲ್ಲೂ ಹಲವು ಲೋಪಗಳು ಆಗಿರುವುದು ಬೆಳಕಿಗೆ ಬಂದಿದೆ.ಹೈಕೋರ್ಟ್ ಆದೇಶದಂತೆ ಅರ್ಹರಲ್ಲದ 32 ಜನ ಸೇವಾನಿರತ ವೈದ್ಯರನ್ನು ಪಟ್ಟಿಯಿಂದ ಕೈಬಿಟ್ಟಿರುವ ವೈದ್ಯಕೀಯ ಶಿಕ್ಷಣ ಇಲಾಖೆ, ಪರಿಷ್ಕೃತ ಪಟ್ಟಿಯನ್ನು ತಯಾರಿಸಿ ಅದಕ್ಕೆ ಅನುಗುಣವಾಗಿ ಮರು ಕೌನ್ಸೆಲಿಂಗ್ ನಡೆಸುವಂತೆ ಕಳೆದ ತಿಂಗಳ 31ರಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.ಆದರೆ ವಿಶ್ವವಿದ್ಯಾಲಯವು ಮರು ಕೌನ್ಸೆಲಿಂಗ್ ನಡೆಸುವ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮೇ 31ರ ಒಳಗೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಹೀಗಾಗಿ ಈಗ ಕೌನ್ಸೆಲಿಂಗ್ ನಡೆಸುವುದು ಕಷ್ಟ. ಆದ್ದರಿಂದ ಮುಂದೆ ಏನು ಮಾಡಬೇಕು ಎಂಬುದನ್ನು ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಕುಲಸಚಿವ ಪ್ರೇಮಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.ಹೈಕೋರ್ಟ್ ಆದೇಶದಂತೆ ಕಳೆದ ತಿಂಗಳ 29ರಂದು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸೇವಾನಿರತ ವೈದ್ಯರಿಗೆ ಮರು ಕೌನ್ಸೆಲಿಂಗ್ ನಡೆಸಲಾಗಿತ್ತು. ಆದರೆ ಕೌನ್ಸೆಲಿಂಗ್‌ಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಲೋಪಗಳು ಇವೆ. ನಿಯಮಾವಳಿ ಪ್ರಕಾರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾಯಂಗೊಂಡ ನಂತರ ಆರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿಲ್ಲ ಎಂದು ಕೆಲವರು ಮತ್ತೆ ಹೈಕೋರ್ಟ್ ಮೊರೆ ಹೋದರು.ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರ ವಾದವನ್ನು ಎತ್ತಿಹಿಡಿಯಿತು. ನಿರಂತರವಾಗಿ ಆರು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸದ 32 ವೈದ್ಯರನ್ನು ಪಟ್ಟಿಯಿಂದ ಕೈಬಿಟ್ಟು, ಮರು ಕೌನ್ಸೆಲಿಂಗ್ ನಡೆಸಿ ಎಂದು ಆದೇಶಿಸಿತು. ಇದನ್ನು ಪಾಲಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಹೆಜ್ಜೆ ಇಟ್ಟಿದೆ. ಆದರೆ ಪರಿಷ್ಕೃತ ಪಟ್ಟಿಯಲ್ಲೂ ಲೋಪಗಳು ಇವೆ. ಸೇವಾನಿರತ ವೈದ್ಯರಿಗೆ ಕೃಪಾಂಕ ನೀಡುವಾಗ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಪೋಷಕರ ದೂರು.ಆರು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ವೈದ್ಯರನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ನಿರಂತರವಾಗಿ ಆರು ವರ್ಷ ಸೇವೆ ಸಲ್ಲಿಸದ ವೈದ್ಯರಿಗೆ ಮನಬಂದಂತೆ ಕೃಪಾಂಕ ನೀಡಲಾಗಿದೆ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಸರ್ಕಾರದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಸೀಟುಗಳನ್ನು ಹಂಚಿಕೆ ಮಾಡಿಲ್ಲ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಪೋಷಕರು, ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ನಿರಂತರವಾಗಿ ಸೇವೆ ಸಲ್ಲಿಸಿದ ನಂತರ ಕಾಯಂಗೊಂಡಿದ್ದರೆ, ಅಂದಿನಿಂದ ಆರು ವರ್ಷಗಳ ಸೇವಾವಧಿ ಪೂರ್ಣಗೊಳಿಸಿರಬೇಕು. ಅಂತಹ ವೈದ್ಯರಿಗೆ ವರ್ಷಕ್ಕೆ ನಾಲ್ಕು ಅಂಕಗಳಂತೆ ಗರಿಷ್ಠ 30 ಅಂಕಗಳನ್ನು ನೀಡಲು ಅವಕಾಶವಿದೆ. ಆದರೆ ನಿರಂತರವಾಗಿ ಸೇವೆ ಸಲ್ಲಿಸದ ಹಲವು ವೈದ್ಯರು ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೆಲವರು ಕಾಯಂಗೊಂಡು ಕೇವಲ ಮೂರು ವರ್ಷವಾಗಿದೆ. ಅಂತಹವರಿಗೂ ಅವಕಾಶ ನೀಡಲಾಗಿದೆ.ಈ ಪಟ್ಟಿ ಪ್ರಕಾರ ಮರು ಕೌನ್ಸೆಲಿಂಗ್ ನಡೆಸಿದರೆ ಹೆಚ್ಚಿನ ಸೇವಾ ಅನುಭವ ಹೊಂದಿರುವ ವೈದ್ಯರಿಗೆ ಅನ್ಯಾಯವಾಗುತ್ತದೆ. ಹೈಕೋರ್ಟ್ ಆದೇಶವನ್ನು ಕೇವಲ 32 ವೈದ್ಯರಿಗೆ ಅನ್ವಯಿಸುವುದು ಸರಿಯಲ್ಲ. ಆರು ವರ್ಷ ಸೇವಾವಧಿ ಪೂರೈಸದ ಪಟ್ಟಿಯನ್ನು ಅರ್ಜಿದಾರರು ನೀಡಿದ ಕಾರಣ 32 ಜನರನ್ನು ಅನರ್ಹರು ಎಂದು ಘೋಷಿಸಲಾಗಿದೆ ಅಷ್ಟೇ. ನ್ಯಾಯಾಲಯದ ಆದೇಶ ಆರು ವರ್ಷ ಪೂರೈಸದ ಉಳಿದ ವೈದ್ಯರಿಗೂ ಅನ್ವಯವಾಗುತ್ತದೆ.ಸರ್ಕಾರ ಆದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಪರಿಷ್ಕೃತ ಪಟ್ಟಿಯನ್ನು ತಯಾರಿಸಿದೆ. ಇದನ್ನು ಪ್ರಶ್ನಿಸಿ ಮತ್ತೆ ಯಾರಾದರೂ ಕೋರ್ಟ್‌ಗೆ ಹೋದರೆ ತೊಂದರೆಯಾಗುತ್ತದೆ. ಸರ್ಕಾರ ಮಾಡುವ ತಪ್ಪುಗಳಿಂದಾಗಿಯೇ 2-3 ಬಾರಿ ಕೌನ್ಸೆಲಿಂಗ್ ನಡೆಯುವಂತಾಗಿದೆ. ಇಷ್ಟಾದರೂ ಪಾಠ ಕಲಿಯದ ವೈದ್ಯಕೀಯ ಶಿಕ್ಷಣ ಇಲಾಖೆ ಪದೇ ಪದೇ ತಪ್ಪುಗಳನ್ನು ಮಾಡುತ್ತಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಆರು ವರ್ಷ ಸೇವೆ ಸಲ್ಲಿಸದವರನ್ನೂ ಪಟ್ಟಿಯಲ್ಲಿ ಸೇರಿಸಿರುವುದರಿಂದ ಅಭ್ಯರ್ಥಿಗಳ ರ‌್ಯಾಂಕಿಂಗ್‌ನಲ್ಲಿ ಏರುಪೇರುಗಳು ಆಗಿವೆ. ಅನರ್ಹರನ್ನು ಕೈಬಿಟ್ಟರೆ ಅರ್ಹರಿಗೆ ಸೀಟು ಸಿಗುತ್ತದೆ. ಆದ್ದರಿಂದ ಸರ್ಕಾರ ಪಟ್ಟಿಯನ್ನು ಮರು ಪರಿಶೀಲಿಸಬೇಕು. ಮಧ್ಯದಲ್ಲಿ ಬಿಡುವು ಪಡೆದು ಸೇವೆ ಸಲ್ಲಿಸಿರುವ ವೈದ್ಯರನ್ನು ಪರಿಗಣಿಸಬಾರದು ಎಂಬುದು ಅರ್ಹ ಅಭ್ಯರ್ಥಿಗಳ ಆಗ್ರಹ.ಸೇವಾ ನಿರತ ವೈದ್ಯರಿಗೆ ಒಟ್ಟು 181 ಸೀಟುಗಳು ಮೀಸಲಿವೆ. ಸರ್ಕಾರದ ಮೀಸಲಾತಿ ಪ್ರಕಾರ ಪರಿಶಿಷ್ಟ ಜಾತಿಗೆ 27, ಪಂಗಡಕ್ಕೆ ಐದು ಹಾಗೂ ಪ್ರವರ್ಗ-1ಕ್ಕೆ ಏಳು ಸೀಟುಗಳನ್ನು ನೀಡಬೇಕು. ಆದರೆ ಪರಿಶಿಷ್ಟ ಜಾತಿಗೆ 22, ಪಂಗಡ ಮತ್ತು ಪ್ರವರ್ಗ-1ಕ್ಕೆ ತಲಾ ನಾಲ್ಕು ಸೀಟುಗಳನ್ನು ಮಾತ್ರ ನೀಡಲಾಗಿದೆ. ಮರು ಕೌನ್ಸೆಲಿಂಗ್ ಸಂದರ್ಭದಲ್ಲಿ ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry