ಪರಿಸರಕ್ಕೆ ಪೂರಕ ಸಂಶೋಧನೆ ಅಗತ್ಯ

7

ಪರಿಸರಕ್ಕೆ ಪೂರಕ ಸಂಶೋಧನೆ ಅಗತ್ಯ

Published:
Updated:ಬೆಂಗಳೂರು: ‘ಪರಿಸರಕ್ಕೆ ಪೂರಕವಾದ ಸಂಶೋಧನೆಗಳು ಇಂದು ಅಗತ್ಯವಾಗಿವೆ’ ಎಂದು ನಗರಾಭಿವೃದ್ಧಿ ಹಾಗೂ ಕಾನೂನು ಇಲಾಖೆ ಸಚಿವ ಎಸ್.ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.ನಗರದಲ್ಲಿ ಮಂಗಳವಾರ ಭಾರತೀಯ ತಾಂತ್ರಿಕ ಶಿಕ್ಷಣ ಸೊಸೈಟಿ (ಐಎಸ್‌ಟಿಇ) ಏರ್ಪಡಿಸಿದ್ದ, ಪ್ರೊ.ಆರ್.ನಟರಾಜನ್ ಹಾಗೂ ಡಾ.ಎಂ.ಆನಂದಕೃಷ್ಣನ್ ಅವರು ಸಂಪಾದಿಸಿದ ‘21 ಸೆಂಚುರಿ ಪ್ರಯಾರಿಟೀಸ್ ಇನ್ ಎಂಜಿನಿಯರಿಂಗ್ ಎಜುಕೇಷನ್’ (21ನೇ ಶತಮಾನದಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಆದ್ಯತೆಗಳು) ಎಂಬ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.‘21ನೇ ಶತಮಾನವನ್ನು ಸಂಶೋಧನೆಗಳ ಶತಮಾನ ಎಂದು ಪರಿಗಣಿಸಲಾಗಿದೆ. ರೇಡಿಯೊ, ಟಿವಿ, ಕಂಪ್ಯೂಟರ್, ಅಂತರ್ಜಾಲ, ವಿಮಾನ ಮತ್ತಿತರ ಮಾನವ ಉಪಯೋಗಿ ಸಂಶೋಧನೆಗಳು ಈ ಯುಗದಲ್ಲಿ ಸಂಶೋಧನೆಗಳಾಗಿವೆ. ಇವೆಲ್ಲ ಎಂಜಿನಿಯರಿಂಗ್ ಕ್ಷೇತ್ರದ ಸಾಧನೆಗಳೆಂದೇ ಪರಿಗಣಿಸಬೇಕು. ಪ್ರಸ್ತುತ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಆದರೆ ಪರಿಸರಕ್ಕೆ ಧಕ್ಕೆ ತರುವ ಸಂಶೋಧನೆಗಳೂ ನಡೆಯುತ್ತಿವೆ. ಆದ್ದರಿಂದ ಪರಿಸರಕ್ಕೆ ಪೂರಕವಾದ ಅನ್ವೇಷಣೆಗಳನ್ನು ಹೆಚ್ಚಾಗಿ ಕೈಗೊಳ್ಳಬೇಕಿದೆ’ ಎಂದು ಅವರು ಸಲಹೆ ನೀಡಿದರು.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದ ಸಂಪಾದಕ ಪ್ರೊ.ಆರ್.ನಟರಾಜನ್ ಮಾತನಾಡಿ, ‘ಎಂಜಿನಿಯರಿಂಗ್ ಶಿಕ್ಷಣದಲ್ಲಿ ಗುಣಮಟ್ಟ, ಸಂಶೋಧನಾ ಪ್ರಕ್ರಿಯೆಗೆ ಅವಕಾಶ ಇರುವ ಹಾಗೂ ಉದ್ಯಮದ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ತಯಾರಿಸಬೇಕು’ ಎಂದು ಸಲಹೆ ನೀಡಿದರು.ತಮಿಳುನಾಡು ಮುಖ್ಯಮಂತ್ರಿಗಳಿಗೆ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸಲಹೆಗಾರರಾಗಿದ್ದ, ಇನ್ನೊಬ್ಬ ಸಂಪಾದಕ ಡಾ.ಎಂ.ಆನಂದಕೃಷ್ಣನ್ ಮಾತನಾಡಿ, ‘ಎಂಜಿನಿಯರಿಂಗ್ ಕ್ಷೇತ್ರವೂ ಸೇರಿದಂತೆ ಶಿಕ್ಷಣದಲ್ಲಿ ಆದ್ಯತೆಗಳು ಬದಲಾಗುತ್ತಿರುತ್ತವೆ. ಬದಲಾಗುತ್ತಿರುವ ಆದ್ಯತೆಗಳಿಗೆ ತಕ್ಕಂತೆ ನಾವೂ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಕೌಶಲ ಅಭಿವೃದ್ಧಿ, ವಿನ್ಯಾಸ, ಉತ್ಪಾದಕತೆ ಹೆಚ್ಚಳದ ತಾಂತ್ರಿಕತೆ ಮತ್ತಿತರ ವಿಷಯಗಳ ಕುರಿತು ಈ ಗ್ರಂಥದಲ್ಲಿ ಚರ್ಚಿಸಲಾಗಿದೆ’ ಎಂದರು.‘ಔದ್ಯೋಗಿಕ ಆದ್ಯತೆಯ ಜೊತೆಗೆ ನೈತಿಕತೆಯನ್ನು ಅಳವಡಿಸಿಕೊಂಡು ಎಂಜಿನಿಯರ್‌ಗಳು ಕಾರ್ಯೋನ್ಮುಖರಾಗಬೇಕು. ಭವಿಷ್ಯದಲ್ಲಿ ಉನ್ನತ ಶಿಕ್ಷಣವು ಸಾಮಾಜಿಕ, ಆರ್ಥಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.ಐಎಸ್‌ಟಿಇ ಅಧ್ಯಕ್ಷ ಪ್ರೊ.ಎನ್.ಆರ್.ಶೆಟ್ಟಿ, ಬೆಂಗಳೂರು ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಕೆ.ಆರ್.ಸುರೇಶ್, ಪ್ರಾಧ್ಯಾಪಕ ಎಸ್.ವಿದ್ಯಾಶಂಕರ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry