ಬುಧವಾರ, ನವೆಂಬರ್ 13, 2019
24 °C

`ಪರಿಸರದ ಪಾಲಿಗೆ ಮಾನವ ಭಸ್ಮಾಸುರ'

Published:
Updated:

ಬೆಂಗಳೂರು: `ಮನುಷ್ಯ ಚೆನ್ನಾಗಿ ಬದುಕುವ ಆತುರದಲ್ಲಿ, ಮಾಡಬಾರದ್ದನ್ನು ಮಾಡುತ್ತಾ ಪರಿಸರದ ಪಾಲಿಗೆ ಭಸ್ಮಾಸುರನಾಗಿದ್ದಾನೆ' ಎಂದು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್.ದ್ವಾರಕೀನಾಥ್ ವಿಷಾದಿಸಿದರು.ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ `ಸಾರ್ವಜನಿಕ ವ್ಯವಹಾರಗಳ ಕೇಂದ್ರ' (ಪಿಎಸಿ) ಆಶ್ರಯದಲ್ಲಿ ನಗರದ ಐಎಎಸ್ ಅಧಿಕಾರಿಗಳ ಸಂಘದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ `ಹಸಿರು ಪ್ರಣಾಳಿಕೆ'ಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಪರಿಸರದ ಪರಿಜ್ಞಾನ ಇಲ್ಲದೆ ಮನುಷ್ಯ ಬೆಳೆಯುತ್ತಿದ್ದಾನೆ. ಸರ್ಕಾರ ರೂಪಿಸುವ ನೀತಿ ನಿರೂಪಣೆಗಳು ಪರಿಸರವನ್ನು ಕಾಯುತ್ತಿರುವ ರೈತರಿಗೆ ತಲುಪುತ್ತಿಲ್ಲ. ಇದೇ ರೀತಿ ರೈತರನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ಎರಡು ತಲೆಮಾರಿನಲ್ಲಿ ರೈತ ಸಮುದಾಯ ಮಾಯವಾದರೂ ಅಚ್ಚರಿಯಿಲ್ಲ' ಎಂದು ಎಚ್ಚರಿಸಿದರು.`ಪ್ರಕೃತಿಯ ಸಮತೋಲನಕ್ಕೆ ಶೇ 30 ರಷ್ಟು ಅರಣ್ಯ ಪ್ರದೇಶ ಇರಬೇಕಿತ್ತು. ಆದರೆ, ಅದಕ್ಕಿಂತ ಕಡಿಮೆ ಇರುವುದರಿಂದ ಸರಿಯಾಗಿ ಮಳೆ ಬರುತ್ತಿಲ್ಲ. 42 ದಿನಗಳು ಮಳೆಯಾಗುತ್ತಿದ್ದ ಪ್ರದೇಶದಲ್ಲಿ ಈಗ 35 ದಿನ ಮಾತ್ರ ಮಳೆ ಬರುತ್ತಿದೆ.  ಹೀಗಿದ್ದರೂ ಬರುವ ಅಲ್ಪಸ್ವಲ್ಪ ಮಳೆ ನೀರನ್ನು ಉಳಿಸುವ ಸಾಮರ್ಥ್ಯ ನಮ್ಮಲ್ಲಿಲ್ಲ. ಭೂಗರ್ಭವನ್ನು 1200 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ನಾವೇ ಕಾರಣ. ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ನಾಗರಿಕರು ಕೈಜೋಡಿಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಪ್ರಣಾಳಿಕೆ ಬಿಡುಗಡೆ ಮಾಡಿ, `ಒಂದು ಕಡೆಯಿಂದ ಜನಸಂಖ್ಯೆ ಪ್ರಮಾಣ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಕಾಡಿನ ಪ್ರಮಾಣ ಇಳಿಮುಖವಾಗುತ್ತಿದೆ. ಮನುಷ್ಯನ ಅನುಭೋಗಕ್ಕಿಂತ ಅರಣ್ಯದ ಪ್ರಮಾಣ ಕಡಿಮೆಯಾಗಿದೆ. ಮನುಷ್ಯ ತನ್ನ ಇತಿಮಿತಿಗಳನ್ನು ಅರಿಯದೆ ಪ್ರಕೃತಿಯ ಮೇಲೆ ನಿರಂತರವಾಗಿ ಸವಾರಿ ಮಾಡುತ್ತಿದ್ದಾನೆ. ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ' ಎಂದರು.ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ `ಹಸಿರು ಪ್ರಣಾಳಿಕೆ'ಯಲ್ಲಿರುವ ಅಂಶಗಳನ್ನು ಅಳವಡಿಸಬೇಕು ಎಂದು `ಪಿಎಸಿ' ಪದಾಧಿಕಾರಿಗಳು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)