ಪರಿಸರ ಅನುಮತಿ, ಕಲ್ಲಿದ್ದಲು ಪೂರೈಕೆಗೆ ಆಗ್ರಹ

7

ಪರಿಸರ ಅನುಮತಿ, ಕಲ್ಲಿದ್ದಲು ಪೂರೈಕೆಗೆ ಆಗ್ರಹ

Published:
Updated:

ನವದೆಹಲಿ: 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕ 8,290 ಮೆ. ವಾ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದ್ದು, ಈ ಯೋಜನೆಗಳಿಗೆ ಅಗತ್ಯವಾದ ಪರಿಸರ ಅನುಮತಿಗೆ ಮತ್ತು ಕಲ್ಲಿದ್ದಲು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸದಾನಂದ ಗೌಡ ಕೇಂದ್ರ ಸರ್ಕಾರವನ್ನು ಶನಿವಾರ ಆಗ್ರಹಿಸಿದ್ದಾರೆ.ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯ ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಇದರಿಂದ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುದಾನ ಹೆಚ್ಚಿಸಬೇಕು. ತಾಳೆ ಮತ್ತು ಅಡಿಕೆ ಬೆಳೆಗಳಿಗೆ ಬೆಂಬಲ ಬೆಲೆ ಪ್ರಕಟಿಸಬೇಕು. ಈ ಎರಡೂ ಬೆಳೆ ಬೆಳೆಯುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ರೇಷ್ಮೆ  ಬೆಳೆಗಾರರ ಹಿತ ಕಾಪಾಡಲು ರೇಷ್ಮೆ ಆಮದು ಸುಂಕವನ್ನು ಈ ಮೊದಲಿನಂತೆ ಶೇ.30ಕ್ಕೆ ಹೆಚ್ಚಿಸಬೇಕು. ರೇಷ್ಮೆ ಆಮದು ಸುಂಕ ಶೇ. 5ಕ್ಕೆ ಇಳಿಸಿರುವುದರಿಂದ ಅತೀ ಹೆಚ್ಚು ರೆಷ್ಮೆ ಬೆಳೆಯುವ ರಾಜ್ಯದ ರೈತರಿಗೆ ತೊಂದರೆ ಆಗಿದೆ ಎಂದು ವಿವರಿಸಿದರು.ರಾಜ್ಯದ ಎಂಟು ಸಾವಿರಕ್ಕೂ ಹೆಚ್ಚು ಜನ ವಸತಿಗಳ ಕುಡಿಯುವ ನೀರಿನಲ್ಲಿ ಅಧಿಕ ಪ್ಲೋರೈಡ್, ಆರ‌್ಸೆನಿಕ್ ಅಂಶ ಕಂಡುಬಂದಿದೆ. ಈ ಸಮಸ್ಯೆ ಪರಿಹಾರಕ್ಕೆ ಐದು ಸಾವಿರ ಕೋಟಿ ಅಗತ್ಯವಿದೆ. ಕನಿಷ್ಠ ಎರಡು ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಕೊಡಬೇಕು. ಕೇಂದ್ರ ಸರ್ಕಾರ 14 ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಡಿ ಗುರುತಿಸಿದೆ. ಇದರಲ್ಲಿ ರಾಜ್ಯದ ಒಂದೂ ಯೋಜನೆ ಇಲ್ಲ. ಬರಪೀಡಿತ ಪ್ರದೇಶಕ್ಕೆ ವರದಾನ ಆಗಲಿರುವ ಹಾಗೂ ಕುಡಿಯುವ ನೀರಿಗೆ ಆಸರೆ ಆಗಲಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಇದರಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.ಮೆಟ್ರೊ ರೈಲುಗಳ ನಿರ್ಮಾಣದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ನಗರಸಭೆ ವ್ಯಾಪ್ತಿಗಳಲ್ಲಿ ಮೆಟ್ರೋ ಯೋಜನೆ ಕುರಿತ ತೀರ್ಮಾನ, ಮೆಟ್ರೊ ನಿರ್ವಹಣೆ, ದರ ನಿಗದಿ ಮೊದಲಾದ ತೀರ್ಮಾನ ಕೈಗೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಕೇಂದ್ರದ ಮುಂದಿಟ್ಟರು.ತೀವ್ರ ಗತಿಯಲ್ಲಿ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಹಾಗೂ ಇಂಧನದ ಬೆಲೆ ಬಡವರ ಬದುಕನ್ನು ದುಸ್ತರಗೊಳಿಸಿದ್ದು 12ನೇ ಯೋಜನೆಯಲ್ಲಿ ನಿರ್ದಿಷ್ಟವಾದ ಕ್ರಮ ಕೈಗೊಂಡು ಇದಕ್ಕೆ ಕಡಿವಾಣ ಹಾಕಬೇಕು.ಬಿಪಿಎಲ್ ಫಲಾನುಭವಿಗಳ ಗುರುತಿಸುವಿಕೆಗೆ ಸಂಬಂಧಿಸಿದಂತೆ ಯೋಜನಾ ಆಯೋಗ ಮತ್ತು ರಾಜ್ಯದ ನಡುವೆ ವ್ಯತ್ಯಾಸವಿದ್ದು ಇದನ್ನು ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry