ಸೋಮವಾರ, ಆಗಸ್ಟ್ 26, 2019
21 °C

ಪರಿಸರ ಇಲಾಖೆಗೆ ಪ್ರಸ್ತಾವವೇ ಬಂದಿಲ್ಲ: ಸಚಿವ ರೈ

Published:
Updated:

ಮಂಗಳೂರು: `ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ಬಗ್ಗೆ ಪರಿಸರ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇನ್ನೂ ಯಾವುದೇ ಪ್ರಸ್ತಾವನೆ ಬಂದಿಲ್ಲ. ಕರಾವಳಿಯ ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೆ, ಸೂಕ್ತ ಅಧ್ಯಯನ ನಡೆಸದೆ ಅನುಮತಿ ನೀಡುವುದಿಲ್ಲ' ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ. ಕ್ಷೀರ ಭಾಗ್ಯ ಯೋಜನೆಗೆ ನಗರದಲ್ಲಿ ಗುರುವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.`ಘೋಷಣೆ ಆದ ಕೂಡಲೇ ಯಾವುದೇ ಯೋಜನೆ ಜಾರಿಯಾಗ ಬೇಕೆಂದೇನೂ ಇಲ್ಲ. ಈ ಹಿಂದೆ ಕರಾವಳಿಯಲ್ಲಿ ಸ್ಥಾಪಿಸಲಾಗುತ್ತದೆ ಎನ್ನಲಾದ ಕೊಜೆಂಟ್ರಿಕ್ಸ್ ಯೋಜನೆ ಬಳಿಕ ಸ್ಥಗಿತಗೊಂಡಿತು. ಕೊಜೆಂಟ್ರಿಕ್ಸ್ ಯೋಜನೆಯನ್ನು ವಿರೋಧಿಸುವ ಹೋರಾಟದಲ್ಲಿ ಭಾಗಿಯಾದವರೇ ಕೊನೆಗೆ ಅದರ ಪರವಾಗಿ ನಿಂತರು. ಹೋರಾಟಗಾರರು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು' ಎಂದರು.`ಯಾವುದೇ ಯೋಜನೆಗೆ ಭೂಸ್ವಾಧೀನ ನಡೆಸುವ ಮುನ್ನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಭೂಮಿ ನೀಡಲು ಮುಂದಾಗುವ ರೈತರಿಗೆ ಮಾರುಕಟ್ಟೆ ದರದಲ್ಲೇ ಅವರ ಜಮೀನಿಗೆ ಪರಿಹಾರ ನೀಡಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಹಾಗಾಗಿ ರೈತರಿಂದ ಭೂಮಿ ಪಡೆಯುವ ಪ್ರಕ್ರಿಯೆಯೂ ಸುಲಭವಲ್ಲ' ಎಂದರು.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಬೆಳ್ತಂಗಡಿ ತಾಲ್ಲೂಕಿನ ನಾಯಿದಗುರಿ ಎಂಬಲ್ಲಿ ವಾಸಿಸುತ್ತಿರುವ ಮಲೆಕುಡಿಯ ಕುಟುಂಬಗಳಿಗೆ ಜಮೀನು ಒದಗಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, `ಈ ವಿಷಯದ ಬಗ್ಗೆ ಸಮರ್ಪಕವಾಗಿ ತಿಳಿದಿಲ್ಲ. ಮಾಹಿತಿ ಪಡೆದ ಬಳಿಕ ಉತ್ತರಿಸುತ್ತೇನೆ' ಎಂದರು.`ಅರಣ್ಯ ಅತಿಕ್ರಮಣದ ಬಗ್ಗೆಯೂ ಈಗ ಚರ್ಚೆಯಾಗುತ್ತಿದೆ. ಅರಣ್ಯವನ್ನು ಕಾಪಾಡುವುದು ತೀರಾ ಅಗತ್ಯ. ಹಾಗಾಗಿ 10 ಎಕರೆಗಿಂತ ಹೆಚ್ಚು ಜಾಗ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಮೂರು ತಲೆಮಾರುಗಳಿಂದ (70 ವರ್ಷ) ಅರಣ್ಯದೊಳಗೆ ವಾಸಿಸುತ್ತಿರುವವರಿಗೆ ಕೇಂದ್ರ ಸರ್ಕಾರವೇ ಅರಣ್ಯ ಹಕ್ಕನ್ನು ದಯಪಾಲಿಸಿದೆ. ಸ್ವ ಇಚ್ಛೆಯಿಂದ ಅರಣ್ಯದಿಂದ ಹೊರಬರುವವರಿಗೆ ಪರಿಹಾರ ಒದಗಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 35 ಕೋಟಿ ರೂಪಾಯಿ ಕಾಯ್ದಿರಿಸಿದೆ' ಎಂದು ರೈ ತಿಳಿಸಿದರು.`ಆನೆಗಳು ಹಾದುಹೋಗುವ ದಾರಿ ಛಿದ್ರವಾದ ಕಾರಣ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ನಿವಾರಿಸುವ ಸಲುವಾಗಿಯೇ ಆನೆ ಕಾರಿಡಾರ್ ರೂಪಿಸಲಾಗುತ್ತಿದೆ' ಎಂದರು.

ನಿಡ್ಡೋಡಿಗೆ ನಿಯೋಗ- ಸಚಿವರಿಗೆ ಅರಿವಿಲ್ಲ!

ನಿಡ್ಡೋಡಿ ಗ್ರಾಮಸ್ಥರ ಅಹವಾಲು ಆಲಿಸಲು ಕಾಂಗ್ರೆಸ್ ಪಕ್ಷದಿಂದ ನಿಯೋಗ ಹೋದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಸಚಿವ ರಮಾನಾಥ ರೈ ತಿಳಿಸಿದರು.`ನಿಡ್ಡೋಡಿಗೆ ಪಕ್ಷದಿಂದ ನಿಯೋಗ ಕರೆದೊಯ್ಯುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾದ ನನಗೆ ಯಾರೂ ತಿಳಿಸಿಲ್ಲ' ಎಂದು ರೈ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಕರಾವಳಿ ಮೇಲಿನ ಪರಿಣಾಮ ಅಧ್ಯಯನ'

`ಎತ್ತಿನಹೊಳೆ ಯೋಜನೆಗೆ ಅವಕಾಶ ಕಲ್ಪಿಸುವ ಮುನ್ನ ಈ ಯೋಜನೆಯಿಂದ ಕರಾವಳಿಯ ಮೇಲಾಗುವ ಪರಿಣಾಮದ ಬಗ್ಗೆಯೂ ವೈಜ್ಞಾನಿಕ ಅಧ್ಯಯನ ನಡೆಸಬೇಕು' ಎಂದು ರಮಾನಾಥ ರೈ ತಿಳಿಸಿದರು.`ಪರಮಶಿವಯ್ಯ ಅವರ ವರದಿ ಆಧರಿಸಿ ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಿಂದ ಕರಾವಳಿಗೆ ಯಾವುದೇ ಬಾಧಕ ಇಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಮಗ್ರ ಅಧ್ಯಯನ ಆಗಬೇಕು. ಅದೇ ರೀತಿ ಕರಾವಳಿ ಭಾಗದ ನೀರಿನ ಸಮಸ್ಯೆ ನಿವಾರಣೆಗೂ ಕ್ರಮ ಕೈಗೊಳ್ಳಬೇಕು. ಪಶ್ಚಿಮ ವಾಹಿನಿ ನದಿಗಳ ಜೋಡಣೆ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು' ಎಂದು ಸಚಿವ ರಮಾನಾಥ್ ರೈ  ಹೇಳಿದರು.

Post Comments (+)