ಗುರುವಾರ , ಮೇ 6, 2021
27 °C

`ಪರಿಸರ ಕಾಳಜಿ ಇಂದಿನ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಜಗತ್ತಿನ ಎಲ್ಲ ಜೀವಿಗಳೂ ಆರೋಗ್ಯವಂತವಾಗಿರಲು ಪರಿಸರ ರಕ್ಷಣೆ ಮತ್ತು ಕಾಳಜಿ ಬಗ್ಗೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ ಎಂದು ಕ್ರಿಸ್ತಶರಣ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ತಾರಾ ಕರೆ ನೀಡಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಕ್ರಿಸ್ತಶರಣ ಶಾಲೆಯ ಮಕ್ಕಳು ನಡೆಸಿದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ, ಅದರ ಪರಿಣಾಮ ಇಂದು ಕುಡಿಯುವ ನೀರಿಗೇ ಹಾಹಾಕಾರ ಎದುರಾಗಿದೆ. ಜಲಮೂಲಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು, ಜಲ ಸಂಪನ್ಮೂಲಗಳ ಸಮರ್ಪಕ ಬಳಕೆಯಲ್ಲಿ ವೈಫಲ್ಯ, ನಿರಂತರ ಅರಣ್ಯ ನಾಶ, ಜೀವ ವೈವಿಧ್ಯಗಳ, ಭೂಮಿಯ ಮೇಲಿನ ಅತ್ಯಾಚಾರಕ್ಕೆ ಪ್ರತಿಯಾಗಿ ಪ್ರಕೃತಿ ಇಂದು ಹಲವು ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿದೆ.

ಮುಂದಿನ ಪೀಳಿಗೆಯಲ್ಲಿ ನಮ್ಮ ಬಗ್ಗೆ ಗೌರವ ಉಳಿಯಬೇಕು ಎಂದರೆ ನಾವು ನಡೆಸುತ್ತಿರುವ ಪರಿಸರ ನಾಶವನ್ನು ಕೈಬಿಡಬೇಕು. ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನುಡಿದರು. ಬೀರೂರು ಕ್ರಿಸ್ತಶರಣ ಆಶ್ರಮದ ಜ್ಯೋ ಮೇರಿ ಲೋಬೊ ಗುರೂಜಿ ಮಾತನಾಡಿ, ಪ್ರಕೃತಿ ನಾಶದ ಪರಿಣಾಮವಾಗಿ ಜೀವಿಗಳಲ್ಲಿ ಅಂತಃಸತ್ವ ಮತ್ತು ರೋಗ ನಿರೋಧಕ ಶಕ್ತಿ ನಾಶವಾಗಿದೆ.

ಶಾಲೆಯ ವತಿಯಿಂದ ಹಮ್ಮಿಕೊಂಡಿರುವ ಜಾಗೃತಿ ಜಾಥಾ ನಾಗರಿಕರಿಗೆ ಸ್ವಲ್ಪ ಅರಿವು ಮೂಡಿಸಿ ಪರಿಸರ ಕಾಳಜಿ ಬಗ್ಗೆ ಅವರ ಗಮನ ಹರಿಯುವಂತಾಗಲಿ. ಈ ಜಾಥಾವನ್ನು ಹಳ್ಳಿಗಳಿಗೂ ಕೊಂಡೊಯ್ದು ಆರೋಗ್ಯದ ಅರಿವು ಮೂಡಿಸುವ ಯೋಜನೆ ಇದೆ. ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ಹರಡುತ್ತಿರುವ ಡೆಂಗೆ ಜ್ವರದ ಬಗ್ಗೆಯೂ ಈ ಜಾಥಾದ ಮೂಲಕ ಅರಿವು ಮೂಡಿಸಿ ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.ಶಾಲೆಯ ಮಕ್ಕಳು `ಅಕ್ಷರ ಅನ್ನ, ಪರಿಸರ ಚಿನ್ನ', `ಮಗುವಿಗೊಂದು ಮರ, ಶಾಲೆಗೊಂದು ವನ', `ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ' ಮುಂತಾದ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಬೀದಿಗಳಲ್ಲಿ ಜಾಥಾ ನಡೆಸಿದರು. ಶಾಲಾ ಶಿಕ್ಷಕರು ಮತ್ತು ಆಶ್ರಮದ ಸಹಾಯಕರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.