ಭಾನುವಾರ, ಏಪ್ರಿಲ್ 18, 2021
25 °C

ಪರಿಸರ ಜಾಗೃತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವುದು ಸರಿಯಲ್ಲ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಗುಲ್ಬರ್ಗ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎನ್. ಸಂಶಿ ಶುಕ್ರವಾರ ಇಲ್ಲಿ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ  ಸಂಘ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗ ಸಂಯುಕ್ತವಾಗಿ `ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ದಿನಾಚರಣೆ ನಿಮಿತ್ತ~ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನರ ಮನೋಭಾವ ಬದಲಾಗಬೇಕಿದೆ. ಪರಿಸರಕ್ಕೆ ಆಪತ್ತು ಒದಗಿದ ಸಂದರ್ಭದಲ್ಲಿ ಪರಿಸರದ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಕಾನೂನಾತ್ಮಕ ಹೋರಾಟ ನಡೆಸಬೇಕಿದೆ. ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಇಲ್ಲದ್ದಷ್ಟು ದೊಡ್ಡ ಸಂಖ್ಯೆಯ ಕಾನೂನುಗಳು ಭಾರತದಲ್ಲಿವೆ. ಅವುಗಳಿಗೆ ಗೌರವ ನೀಡುವುದು ಕೂಡಾ ಮುಖ್ಯ ಎಂದು  ಹೇಳಿದರು.`ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳುವ ವೇದವಾಕ್ಯ ಈಗ ಬದಲಾಗಿದೆ. ಪರಿಸರ ರಕ್ಷತಿ ರಕ್ಷತಃ ಎಂದಾಗಿದೆ. ಪರಿಸರ ಹಾಗೂ ಅಭಿವೃದ್ಧಿಯಲ್ಲಿ ಸಮತೋಲನ ಕಾಯ್ದುಕೊಂಡು ಜೀವನ ರೂಪಿಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕಿದೆ~ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಕೆ. ಪಠಾಣ ಅಭಿಪ್ರಾಯಪಟ್ಟರು.`ಸಮಾಜದಲ್ಲಿ ಅಸಹಾಯಕರಿಗೆ ಕಾನೂನು ಅರಿವು ಮೂಡಿಸುವುದು ಹಾಗೂ ಅಗತ್ಯ ನ್ಯಾಯದಾನ ನೀಡುವ ಕೆಲಸವನ್ನು ಗುಲ್ಬರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಮಾಡುತ್ತಿದೆ. ವಾರ್ಷಿಕ ರೂ 50 ಸಾವಿರ ಮಿತಿ ಇದ್ದವರಿಗೆ ಉಚಿತ ನ್ಯಾಯದಾನವಿತ್ತು. ಇದೀಗ ಆ ಪ್ರಮಾಣವು ರೂ 1ಲಕ್ಷಕ್ಕೆ ಏರಿಕೆಯಾಗಿದೆ~ ಎಂದರು.`ಹುಟ್ಟಿನಿಂದ ಸಾಯುವ ತನಕ ಮನುಷ್ಯ ಕಾನೂನು ಚೌಕಟ್ಟಿಗೆ ಒಳಪಟ್ಟಿರುತ್ತಾನೆ. ಹೀಗಾಗಿ ತಪ್ಪು ತಿಳಿವಳಿಕೆ ಅಥವಾ ತಿಳಿವಳಿಕೆ ಕೊರತೆಯಿಂದ ಕಾನೂನು ಉಲ್ಲಂಘನೆಯಲ್ಲಿ ಸಾಮಾನ್ಯವಾಗಿ ಜನರು ತೊಡಗಿರುತ್ತಾರೆ. ಹೀಗಾಗಿ ಕಾನೂನು ಅರಿವು ಮೂಡಿಸುವುದು ಬಹಳ ಮುಖ್ಯ~ ಎಂದು ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶ ಪಿ.ಜಿ. ವರ್ಣೆಕರ್ ಹೇಳಿದರು.ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ರಮೇಶ ಲಂಡನಕರ್ ಅಧ್ಯಕ್ಷತೆ ವಹಿಸಿದ್ದರು. ಗುಲ್ಬರ್ಗ ವಕೀಲರ ಸಂಘದ ಅಧ್ಯಕ್ಷ ಬಿ. ಹನುಮಂತರೆಡ್ಡಿ, ವಕೀಲರಾದ ಸರಸಿಜಾ ರಾಜನ್, ಡಾ. ಅಂಬಾರಾಯ ಎಸ್. ಹಾಗರಗಿ ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.