ಶುಕ್ರವಾರ, ಮೇ 14, 2021
27 °C

ಪರಿಸರ ನ್ಯಾಯಾಲಯ ಆರಂಭಿಸಲು ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅರಣ್ಯ ಇಲಾಖೆಗೆ ಸಂಬಂಧಿಸಿದ ವ್ಯಾಜ್ಯಗಳ ಶೀಘ್ರ ಇತ್ಯರ್ಥಕ್ಕೆ ಅನುಕೂಲ ಆಗುವಂತೆ ಪರಿಸರ ನ್ಯಾಯಾಲಯ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ~ ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.ರಾಜ್ಯ ಅರಣ್ಯ ಇಲಾಖೆ, ಪಶ್ಚಿಮಘಟ್ಟ ಕಾರ್ಯಪಡೆ ಹಾಗೂ ರಾಷ್ಟ್ರೀಯ ಕಾನೂನು ಶಾಲೆ ಆಶ್ರಯದಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ `ಪಶ್ಚಿಮಘಟ್ಟಗಳ ಸಂರಕ್ಷಣೆಯಲ್ಲಿ ಕಾನೂನಿನ ಸವಾಲುಗಳು, ಸಮಸ್ಯೆಗಳು, ಪರಿಹಾರಗಳು ಮತ್ತು ಭವಿಷ್ಯದ ಸಾಧ್ಯತೆಗಳು~ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದ ಎಲ್ಲ ನ್ಯಾಯಾಲಯಗಳು ಸಾಮಾನ್ಯವಾಗಿ ಪರಿಸರದ ಪರವಾಗಿಯೇ ತೀರ್ಪು ನೀಡುತ್ತ ಬಂದಿವೆ. ಅಷ್ಟಾದರೂ ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಬಗೆಯ 75 ಸಾವಿರಕ್ಕೂ ಅಧಿಕ ಮೊಕದ್ದಮೆಗಳಿವೆ. ಈ ಎಲ್ಲ ಮೊಕದ್ದಮೆಗಳು ಒಂದಲ್ಲ ಒಂದು ರೀತಿಯಲ್ಲಿ ನ್ಯಾಯಾಲಯಕ್ಕೆ ಹೋಗುತ್ತವೆ.

 

ಅಲ್ಲಿಯೇ ಅದರ ಇತ್ಯರ್ಥಗಳಾಗಬೇಕು. ಅದನ್ನು ತಪ್ಪಿಸಲು ಆಂಧ್ರಪ್ರದೇಶದ ಮಾದರಿಯಲ್ಲಿ ನಮ್ಮಲ್ಲಿ ಪರಿಸರ ನ್ಯಾಯಾಲಯ ಅಸ್ತಿತ್ವಕ್ಕೆ ಬಂದರೆ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಮೊಕದ್ದಮೆಗಳನ್ನು ಈ ನ್ಯಾಯಾಲಯದಲ್ಲೇ ಇತ್ಯರ್ಥ ಮಾಡಬಹುದು~ ಎಂದು ಅವರು ಅಭಿಪ್ರಾಯಪಟ್ಟರು.`ರಾಜ್ಯದಲ್ಲಿ ಅರಣ್ಯ ಸಂರಕ್ಷಣೆಗೆ ಪ್ರಬಲ ಕಾನೂನು ಇಲ್ಲ. ಅರಣ್ಯ ರಕ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಕಾನೂನು ಜಾರಿಗೆ ಬಂದರೆ ಸ್ವಲ್ಪಮಟ್ಟಿಗಾದರೂ ಅರಣ್ಯ ನಾಶ ತಡೆಯಬಹುದು. ಪಶ್ಚಿಮಘಟ್ಟದಲ್ಲಿ ಕಾನೂನಿನ ಕಲ್ಪನೆ ಇಲ್ಲದೆ ಅರಣ್ಯ ನಾಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆ ಭಾಗದಲ್ಲಿ ಅರಣ್ಯ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ಇಲಾಖೆಯಿಂದ ಆಗಬೇಕು~ ಎಂದರು.ಪಶ್ಚಿಮಘಟ್ಟದ  ನಿರ್ಲಕ್ಷ್ಯ: `ರಾಜ್ಯದ ಬಹುತೇಕ ಕಡೆಗಳಲ್ಲಿ ಬರದ ವಾತಾವರಣ ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬರದ ಛಾಯೆ ಕಾಣುತ್ತದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಾಗುವುದಿಲ್ಲ. ಪಶ್ಚಿಮಘಟ್ಟಗಳ ನಿರ್ಲಕ್ಷ್ಯ ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಎಚ್ಚರ ವಹಿಸದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬರ ಕಾಣಿಸಿಕೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಅತ್ಯಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ~ ಎಂದು ಎಚ್ಚರಿಸಿದರು.ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಎನ್.ಯಲ್ಲಪ್ಪರೆಡ್ಡಿ ಮಾತನಾಡಿ, `ರಾಜ್ಯದಲ್ಲಿ ಅರಣ್ಯ ರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಬಂದಿವೆ. ಕಾನೂನು ರೂಪಿಸುವುದು ಎಲ್ಲ ಸಮಸ್ಯೆಗಳಿಗೂ ಪರಿಹಾರ ಅಲ್ಲ. ಕಾನೂನಿನ ಜತೆಯಲ್ಲಿ ನೈತಿಕ ಜವಾಬ್ದಾರಿ ಹಾಗೂ ನೀತಿ ನಿಯಮಗಳು ಬಹಳ ಮುಖ್ಯ~ ಎಂದರು.ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವನಿ ಕುಮಾರ್ ವರ್ಮ ಮತ್ತಿತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.