ಮಂಗಳವಾರ, ನವೆಂಬರ್ 12, 2019
27 °C
ಕುದುರೆಮುಖ: ಪರಿಸರ ಸೂಕ್ಷ್ಮ ಪ್ರದೇಶ

ಪರಿಸರ ಪ್ರವಾಸೋದ್ಯಮಕ್ಕೆ ವಿರೋಧ

Published:
Updated:

ಚಿಕ್ಕಮಗಳೂರು: ಕುದುರೆಮುಖದಲ್ಲಿ ಹಿಂದೆ 30 ವರ್ಷಗಳ ಕಾಲ ಗಣಿಗಾರಿಕೆ ಮಾಡಿ ನಂತರ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅನಿವಾರ್ಯವಾಗಿ ಗಣಿಗಾರಿಕೆ ಸ್ಥಗಿತಗೊಳಿಸಿದ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಈಗ `ಪರಿಸರ ಪ್ರವಾಸೋದ್ಯಮ'ದ ನೆಪದಲ್ಲಿ ಮತ್ತೆ ಅಲ್ಲೆ ತಳವೂರಲು ಮುಂದಾಗಿದೆ ಎಂದು ವೈಲ್ಡ್ ಕ್ಯಾಟ್-ಸಿ, ಭದ್ರಾ ಸಂರಕ್ಷಣಾ ಟ್ರಸ್ಟ್ ದೂರಿವೆ.ಕುದುರೆಮುಖದಲ್ಲಿರುವ ಕಂಪೆನಿಯ ಮೂಲಸೌಲಭ್ಯಗಳನ್ನು ಬಳಸಿಕೊಂಡು ಪರಿಸರ ಪ್ರವಾಸೋದ್ಯಮವನ್ನು ನಡೆಸಲು ಕುದುರೆಮುಖ ಕಬ್ಬಿಣ ಅದಿರು ಕಂಪನಿ ಯೋಜನೆಯೊಂದನ್ನು ರೂಪಿಸುತ್ತಿರುವುದರ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಶ್ರೀದೇವ್ ಹುಲಿಕೆರೆ, ಡಿ.ವಿ.ಗಿರೀಶ್ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ.ಗಿರಿಜಾಶಂಕರ ಅವರು, ಕುದುರೆಮುಖದಂತಹ 6217 ಅಡಿ ಎತ್ತರದ ಬೆಟ್ಟಶ್ರೇಣಿಯ, ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿರುವ, ತುಂಗಾ, ಭದ್ರಾ ಮತ್ತು ನೇತ್ರಾವತಿ ಯಂತಹ ಜೀವ ನದಿಗಳ ಉಗಮಸ್ಥಾನವೂ ಆದ, ಎಲ್ಲಕ್ಕಿಂತ ಮುಖ್ಯವಾಗಿ ಪರಿಸರದ ದೃಷ್ಟಿಯಲ್ಲಿ ಅತಿ ಸೂಕ್ಷ್ಮ ಪ್ರದೇಶವಾದ ಇಲ್ಲಿ ಪರಿಸರ ಪ್ರವಾ ಸೋದ್ಯ ಮಕ್ಕೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಕುದುರೆಮುಖ ಪರ್ವತ ಶ್ರೇಣಿ ಅತ್ಯಂತ ಪ್ರಶಸ್ತ ಹಾಗೂ ಪಾರಿಸಾರಿಕವಾಗಿ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಪ್ರದೇಶವೆಂದೇ ಪರಿಸರಾಸಕ್ತ ಸಂಘಟನೆಯಾದ ವೈಲ್ಡ್ ಲೈಫ್ ಫಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಗಣಿಗಾರಿಗೆ ನಿಲುಗಡೆಗೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿತ್ತು ಎಂಬು ದನ್ನು ಪ್ರಮುಖವಾಗಿ ಗಮನಿಸಬೇಕು ಎಂದಿದ್ದಾರೆ.ಕುದುರೆಮುಖವನ್ನು ಒಂದು ಕೈಗಾರಿಕಾ ಪ್ರದೇಶ ಅಥವಾ ಮನೋಲ್ಲಾಸದ ತಾಣವಾಗಿಸಿ, ಅದರ ಸೂಕ್ಷ್ಮ ಪರಿಸರವನ್ನು ಹಾಳುಗೆಡವ ಬಾರದೆಂದೆ ವೈಲ್ಡ್ ಲೈಫ್ ಫಸ್ಟ್ ಗಣಿಗಾರಿಕೆಯಿಂದ 3 ದಶಕಗಳಲ್ಲಿ ಈ ಪ್ರದೇಶದಲ್ಲಿ ಆಗಿರುವ ಹಾನಿಯನ್ನು ದಾಖಲೆ ಸಹಿತ ಒದಗಿಸಿದ್ದು, ಅದನ್ನು ನ್ಯಾಯಾಲಯ ಪರಾಮರ್ಶಿಸಿ ಗಣಿಗಾರಿಕೆ ನಡೆಸದಂತೆ ಆದೇಶ ನೀಡಿತ್ತು ಎಂದು ಹೇಳಿದ್ದಾರೆ. ಆದರೆ ಕುದುರೆ ಮುಖ ಅದಿರು ಕಂಪನಿ ತನ್ನ ಗುತ್ತಿಗೆಯ ಅವಧಿ ಮುಗಿದ ನಂತರವೂ 6 ವರ್ಷಗಳ ಕಾಲ ಗಣಿಗಾರಿಕೆ ಮಾಡಿದೆ. ಗುತ್ತಿಗೆ ಅವಧಿ 1999 ರ ಜುಲೈನಿಂದಲೇ ಮುಕ್ತಾಯವಾಗಿತ್ತು.

ಆ ನಂತರ ನ್ಯಾಯಾಲಯ ನೀಡಿದ ಆದೇಶದಂತೆ 2005 ರ ಡಿ.31 ಕ್ಕೆ ಗಣಿಗಾರಿಕೆ ಸೇರಿದಂತೆ ಎಲ್ಲಾ ಚಟುವ ಟಿಕೆಯನ್ನು ಸ್ಥಗಿತಗೊಳಿಸಬೇಕಾಗಿತ್ತು. ಅದರಂತೆ ಗಣಿಗಾರಿಕೆ ಸ್ಥಗಿತಗೊಳಿಸಿದರೂ ಕಂಪೆನಿ ತಾನು ಅಳವಡಿಸಿದ್ದ ಭಾರಿ ಯಂತ್ರಗಳನ್ನು ಇನ್ನೂ ಸಾಗಿಸಿಲ್ಲ. ಅದಿರು ಬೇರ್ಪಡಿಸುವ ಘಟಕವನ್ನು ಹಾಗೆಯೇ ಇಟ್ಟುಕೊಂಡಿದೆ. ನ್ಯಾಯಾಲಯದ ಆದೇಶ ಬಂದು 8 ವರ್ಷಗಳ ನಂತರವೂ ರಾಷ್ಟ್ರೀಯ ಉದ್ಯಾನದಿಂದ ಸುತ್ತುವರೆದಿರುವ ಈ ಪ್ರದೇಶದಲ್ಲಿ ಕಂಪೆನಿ  ಅಸ್ತಿತ್ವ ಉಳಿಸಿಕೊಂಡಿದೆ.  ಯಾವುದೇ ರೀತಿ ಅಧಿಕಾರ ಅಥವಾ ಹಕ್ಕು ಇಲ್ಲದೆ ಕಂಪನಿ ಮುಂದುವರೆಯು ತ್ತಿರುವುದರ ಬಗ್ಗೆ ಸರ್ಕಾರ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.ಒಟ್ಟು 600 ಚದರ ಕಿ.ಮೀ. ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನವನ್ನು ಹೊಂದಿರುವ ಕುದುರೆಮುಖ ಶ್ರೇಣಿಯಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮ ನಡೆಸುವ ಕಂಪನಿಯ ಪ್ರಯತ್ನವನ್ನು ಮೂವರು ಖಂಡಿಸಿ, ತನ್ನದಲ್ಲದ ಭೂಮಿಯಲ್ಲಿ  ಅಗಾಧ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಿದ್ದೆ ಹಾಸ್ಯಾಸ್ಪದ ಹಾಗೂ ಅನವಶ್ಯಕ ಎಂದು ಹೇಳಿದ್ದಾರೆ.ರಾಜ್ಯ ಸರ್ಕಾರ ಕುದುರೆಮುಖ ಅದಿರು ಕಂಪೆನಿಯ ಈ ಪ್ರಯತ್ನಕ್ಕೆ ಯಾವ ಕಾರಣದಿಂದಲೂ ಒಪ್ಪ ಬಾರದು. ಸಾರಾಸಗಟಾಗಿ ಕಂಪೆನಿಯನ್ನು ಅಲ್ಲಿಂದ ಪೂರ್ಣವಾಗಿ ಕಾಲ್ತೆಗೆಯಲು ಸೂಚಿಸಬೇಕು. ಪರಿಸರ ಪ್ರವಾಸೋದ್ಯಮಕ್ಕೆ ಕಂಪನಿ ಸಲ್ಲಿಸಿರುವ ಮನವಿ ಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.ನಿತ್ಯ ಹರಿದ್ವರ್ಣ ಕಾಡು ಹಾಗೂ ಉದರೆಲೆ ಕಾಡನ್ನು ಈ ಅಪರೂಪದ ಮತ್ತು ಅತ್ಯಂತ ಸೂಕ್ಷ್ಮ ವಾದ ಕುದುರೆಮುಖ ಬೆಟ್ಟಶ್ರೇಣಿ ಪ್ರವಾ ಸೋದ್ಯಮದ ಹೆಸರಿನಲ್ಲಿ ಮತ್ತೆ ವಾಹನಗಳ ಭರಾಟೆಗೆ ತನ್ನನ್ನು ತೆರೆದುಕೊಳ್ಳಬಾರದು. ಅಲ್ಲಿನ ಅಪರೂಪದ ಪ್ರಾಣಿ ಹಾಗೂ ಸಸ್ಯಪ್ರಭೇದಗಳ ರಕ್ಷಣೆಯ ದೃಷ್ಟಿಯಿಂದ ಕೇವಲ ಅಧ್ಯಯನಕ್ಕೆ ಮಾತ್ರ ಅವಕಾಶ ಇರಬೇಕೆಂದು ಸಲಹೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)