ಶುಕ್ರವಾರ, ಮೇ 14, 2021
21 °C

`ಪರಿಸರ ಮಾಲಿನ್ಯದಿಂದ ಮನುಕುಲ ನಾಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಕ್ಷಣಿಕ ಸುಖಕ್ಕೆ ಮಾರು ಹೋದ ಮನುಷ್ಯ ಮರ ಗಿಡಗಳನ್ನು ಕಡಿದು ಕಾಂಕ್ರೆಟ್ ಕಾಡುಗಳನ್ನು ನಿರ್ಮಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದಾನೆ. ಈ ಪರಿಸರ ಮಾಲಿನ್ಯದಿಂದ ಮಾನವ ಸಂತತಿ ನಾಶವಾಗುತ್ತದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ ರವೀಂದ್ರ ಕಾರುಬಾರಿ ಎಚ್ಚರಿಸಿದರು.ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ವಲಯ ಅರಣ್ಯ ಇಲಾಖೆ ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಿರಿಯ ಶ್ರೇಣಿಯ ನ್ಯಾಯಾಧೀಶ ಎಂ. ಶಶಿಧರಗೌಡ ಮಾತನಾಡಿ, ಪ್ರತಿಯೊಬ್ಬರ ಮನೆಯಲ್ಲಿ ಕನಿಷ್ಟ ಒಂದು ಸಸಿ ನೆಟ್ಟು ಪೋಷಿಸಬೇಕು. ಪರಿಸರ ಹಾಳು ಮಾಡಬಾರದು. ಇತರರಿಗೆ ಪರಿಸರದ ಬಗ್ಗೆ ತಿಳಿ ಹೇಳಬೇಕು. ಕಾಡು ರಕ್ಷಣೆ ನಮ್ಮ ಮೂಲ ಮಂತ್ರವಾಗಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ತಮ್ಮ ಮಕ್ಕಳಿಗೂ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿಸಬೇಕು ಎಂದು ಕರೆ ನೀಡಿದರು.ಆಧುನಿಕ ಬೇಸಾಯ ಎಂಬ ನೆಪದಲ್ಲಿ ರೈತ ತನ್ನ ಜಮೀನಿನಲ್ಲಿಯ ಗಿಡಗಳನ್ನು ಕಡಿಯುತ್ತಿರುವುದು ಕಳವಳಕಾರಿ. ಇದರಿಂದ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮಳೆ ಬಾರದೆ ಬರಗಾಲ ತಾಂಡವವಾಡುತ್ತಿದೆ. ಜಮೀನಿನ ಬದುವಿನಲ್ಲಿ ನಾಟಿ ಮಾಡಲು ಬೇವು, ಸಾಗವಾನಿ ಇತರ ಗಿಡಗಳನ್ನು ಕೇವಲ ಒಂದು ರೂ.ಗೆ ಒದಗಿಸುತ್ತಿದ್ದೇವೆ. ಈ ಗಿಡಗಳನ್ನು ಮೂರು ವರ್ಷದವರೆಗೂ ಪೋಷಿಸಿದರೆ ಪ್ರತಿ ಮರಕ್ಕೆ ರೂ. 45 ಸಸಿ ಪೋಷಕ ಧನ ನೀಡಲಾಗುತ್ತದೆ. ರೈತರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಿ ಎಂದು ವಲಯ ಅರಣ್ಯಾಧಿಕಾರಿ ಬಸವರಾಜ ಡಾಂಗೆ ಮನವಿ ಮಾಡಿದರು.ಯಾದಗಿರಿ ಆರ್.ಟಿ.ಓ. ಕೆ. ಎಸ್. ಭಾಷಾ ಮಾತನಾಡಿ, ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಯಲು ಆಟೋರಿಕ್ಷಾಗಳಿಗೆ ಎಲ್.ಪಿ.ಜಿ. ಅಳವಡಿಸಲು ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳಿಗೂ ಎಲ್.ಪಿ.ಜಿ. ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ವಾಹನ ಚಾಲಕರು, ಮಾಲಿಕರು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣದ ಬಗ್ಗೆ ಆಗಾಗ ವಾಹನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ವಿ. ಸಿ. ಪಾಟೀಲ, ವಕೀಲರಾದ ನಿಂಗಣ್ಣ ಚಿಂಚೋಡಿ, ವಿ. ಎಸ್. ಜೋಶಿ ಮಾತನಾಡಿದರು. ಮಹ್ಮದ್ ಹುಸೇನ್ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ನಾಯಕ ಪ್ರಾರ್ಥಿಸಿದರು. ಎಂ. ಎಸ್. ಮಠ ಸ್ವಾಗತಿಸಿದರು. ಎನ್. ಎಸ್. ಪಾಟೀಲ ನಿರೂಪಿಸಿದರು. ಎಂ. ಟಿ. ಮಂಗಿಹಾಳ ವಂದಿಸಿದರು.ಬಸವಲಿಂಗಪ್ಪ ಪಾಟೀಲ, ಜಿ. ಎಸ್. ಪಾಟೀಲ, ಉದಯಸಿಂಗ, ಬಸವರಾಜ ಕಿಲ್ಲೇದಾರ, ಎಸ್. ಸಿದ್ರಾಮಪ್ಪ, ರಮಾನಂದ ಕವಲಿ, ಎಸ್. ವ್ಯಾಸರಾಜ, ಬಸವರಾಜ ಅನ್ಸೂರ, ಎನ್. ಜೆ. ಬಾಕ್ಲಿ, ಮನೋಹರ ಕುಂಟೋಜಿ, ಸಂಗಣ್ಣ ಬಾಕ್ಲಿ, ಸಿ. ವೈ. ಸಾಲಿಮನಿ, ಮಂಜುನಾಥ ಹುದ್ದಾರ, ಯಲ್ಲಪ್ಪ ಹುಲಿಕಲ್, ಶರಣಗೌಡ ಪಾಟೀಲ, ಮಂಜುನಾಥ ಗುಡಗುಂಟಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.