ಶುಕ್ರವಾರ, ಮೇ 7, 2021
19 °C

ಪರಿಸರ ಮಾಲಿನ್ಯ ಗಂಡಾಂತರ: ಪ್ರೊ. ಬಡಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ನಗರೀಕರಣ ಬೆಳೆದಂತೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಕಾಡು ನಾಶವಾಗುತ್ತಿದೆ. ಇದರಿಂದ ಹಸಿರು ನಶಿಸುತ್ತಿದೆ. ನಮ್ಮನ್ನು ಸೂರ್ಯನ ಅಪಾಯಕಾರಿ ಅತಿನೇರಣೆ ಕಿರಣಗಳಿಂದ ರಕ್ಷಿಸುವ ಓಜೋನ್ ಪದರು ಶಿಥಿಲವಾಗುತ್ತಿದೆ. ಇದೆಲ್ಲವೂ ಮಾನವನಿಗೆ ಗಂಡಾಂತರಕಾರಿಯಾಗಿ ಪರಿಣಮಿಸುತ್ತಿದೆ ಎಂದು ಪ್ರಾಚಾರ್ಯ ಪ್ರೊ. ಬಿ. ಎಸ್. ಬಡಗಾ ಎಚ್ಚರಿಸಿದರು.ಇಲ್ಲಿನ ಪ್ರಭು ಕಲಾ, ವಿಜ್ಞಾನ ಮತ್ತು ಜೆ. ಎಂ. ಬೋಹರಾ ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಸಿ ನೆಡುವುದು, ಪರಿಸರ ರಕ್ಷಣೆ, ಪರಿಸರ ನಾಶದಿಂದ ಉಂಟಾಗುವ ದುಷ್ಪರಿಣಾಮಗಳು ಇತರ ವಿಷಯಗಳ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಬೋಧಿಸುವುದನ್ನು ಕಡ್ಡಾಯಗೊಳಿಸಬೇಕು.

ಕಾಡು ನಾಶ ಮಾಡುವವರ ಮೇಲೆ ಇನ್ನಷ್ಟು ಕಠಿಣ ಕ್ರಮ ಜರುಗಿಸಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಇನ್ನಷ್ಟು ಕಟ್ಟು ನಿಟ್ಟಿನ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು. ತಮ್ಮ ಮನೆಯಲ್ಲಿ ಕನಿಷ್ಠ ಒಂದು ಸಸಿ ನೆಟ್ಟು ಪೋಷಿಸಬೇಕು. ಪರಿಸರ ಮಾಲಿನ್ಯವಾಗದಂತೆ ನಿಗಾ ವಹಿಸಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ರೇವಣಸಿದ್ದ ತಾವರಖೇಡ ಮನವಿ ಮಾಡಿದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹ್ಮದ್ ವಾರಿಸ್ ಕುಂಡಾಲೆ ಮಾತನಾಡಿ, ಪರಿಸರ ನಾಶ ಮಾಡಿದರೆ ನಮ್ಮನ್ನು ನಾವು ನಾಶ ಮಾಡಿಕೊಂಡಂತೆ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಇನ್ನು ಮುಂದೆ ಈ ಬಗ್ಗೆ ಎನ್.ಎಸ್.ಎಸ್. ಶಿಬಿರಗಳಲ್ಲಿ ಹೆಚ್ಚಿನ ಚಟುವಟಿಕೆ ಆಯೋಜಿಸಲಾಗುವುದು ಎಂದು ವಿವರಿಸಿದರು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜು ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು. ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತನಾಡಿದರು. ಬಿ. ಓ. ಬೊಮ್ಮಪ್ಪ ಸ್ವಾಗತಿಸಿದರು. ಧರ್ಮರಾಜ ಪಿಳಬಂಟ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್. ಸಿ. ಶಿರವಾಳ ನಿರೂಪಿಸಿದರು. ರಂಗನಾಥ ಜೇವರ್ಗಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.