ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಅರ್ಜಿ ಆಹ್ವಾನ

7

ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಅರ್ಜಿ ಆಹ್ವಾನ

Published:
Updated:

ಮಡಿಕೇರಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡಿರುವ ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಕೊಡಗು ಜಿಲ್ಲಾ  ಶಾಲಾ ಶಿಕ್ಷಕರ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಈ ಸ್ಫರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಯಲ್ಲಿ ಆಯ್ದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆ ಸೇರಿ ತಮ್ಮ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಮೌಲ್ಯಮಾಪನ ಮಾಡಿ ತಾವು ಪರಿಸರ ನಿರ್ವಹಣೆಯಲ್ಲಿ ಸ್ಫರ್ಧಾತ್ಮಕ ಪ್ರಗತಿ ಹೊಂದಿದ್ದೆವೆಯೇ ಎಂದು ನಿರ್ಣಯಿಸಿ ನಿಗದಿತ ಪ್ರಶ್ನಾವಳಿಯಲ್ಲಿ ತಮ್ಮ ಪ್ರಯತ್ನ ಮತ್ತು ಸಾಧನೆಗಳನ್ನು ವಿವರಿಸಬೇಕಾಗುತ್ತದೆ.ಇಲ್ಲಿ ವಿಶ್ಲೇಷಿಸಬೇಕಾದ ವಿಷಯಗಳೆಂದರೆ ಮಣ್ಣು, ನೀರು, ಗಾಳಿ, ಶಕ್ತಿ, ಘನತ್ಯಾಜ್ಯ, ಪ್ಲಾಸ್ಟಿಕ್, ಇತ್ಯಾದಿ ಮಾಲಿನ್ಯಕಾರಕಗಳ ಸೂಕ್ತ ನಿರ್ವಹಣೆ, ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆಗಳಂತಹ ಚಟುವಟಿಕೆಗಳು ಹಾಗೂ ಶಾಲೆಯಲ್ಲಿ ಮತ್ತು ಸಮುದಾಯದ ಜೊತೆಗೆ ಕೈಗೊಂಡ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಅನುಸರಿಸುತ್ತಿರುವ ಕ್ರಮಗಳಾಗಿವೆ.ಸ್ಫರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಗಳ ಮುಖ್ಯೋಪಾದ್ಯಾಯರು ಸೆ.30 ರೊಳಗೆ ದೂರವಾಣಿ, ಎಸ್ ಎಮ್ ಎಸ್,  ಪೋಸ್ಟ್ ಕಾರ್ಡ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಆಸಕ್ತ ಇಬ್ಬರು ಶಿಕ್ಷಕರನ್ನು ಆ ಶಾಲೆಯ ವಿದ್ಯಾರ್ಥಿಗಳ ಉತ್ತಮ ತಂಡವನ್ನು ಸ್ವಮೌಲ್ಯಮಾಪನಕ್ಕಾಗಿ ಸೆ.30 ರೊಳಗೆ ರಚಿಸಬೇಕು.  ಇಬ್ಬರು ಶಿಕ್ಷಕರಿಗೆ ಅಕ್ಟೋಬರ್ 10 ರೊಳಗಾಗಿ ತರಬೇತಿ ನೀಡಿ ಪ್ರಶ್ನಾವಳಿಯನ್ನು ಹಂಚಲಾಗುವುದು. ಶಾಲೆಗಳಿಂದ ಸ್ವಮೌಲ್ಯಮಾಪನ ಮಾಹಿತಿ ತುಂಬಿದ ಪ್ರಶ್ನಾವಳಿಯನ್ನು ನವೆಂಬರ್ 30ರೊಳಗೆ ಮರಳಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಕೊಡಗು ಅವರಿಗೆ ನೀಡಬೇಕು. ಮೌಲ್ಯಮಾಪಕರನ್ನು ಆಯ್ದು ಮೌಲ್ಯಮಾಪನ ಮಾಡಿ 30 ಶಾಲೆಗಳ ಯಾದಿಯನ್ನು ಡಿಸೆಂಬರ್ 10ರಂದು ಸಿದ್ದಪಡಿಸಲಾಗುವುದು. ಆಯ್ದ ಶಾಲೆಗಳಿಗೆ ಮೌಲ್ಯಮಾಪನ ಮಾಡಿದ ಪರಿಣಿತರು ಭೇಟಿ ನೀಡಿ 21 ಶಾಲೆಗಳನ್ನು ಪ್ರಶಸ್ತಿಗಾಗಿ ಡಿಸೆಂಬರ್ 30ರೊಳಗೆ ಆಯ್ಕೆ ಮಾಡುವರು.  ಈ ಪ್ರಕ್ರಿಯೆಯಲ್ಲಿ ಮೊದಲನೇ ಸ್ಥಾನ ಪಡೆದ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಶಾಲೆ ಎಂದು ಕರೆಯಲಾಗುವುದು ಹಾಗೂ ಆ ಶಾಲೆಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು.ಬಹುಮಾನದ ವಿವರ ಮತ್ತು ಮೊತ್ತ: ರಾಜ್ಯ ಮಟ್ಟದಲ್ಲಿ ಪರಿಸರ ಮಿತ್ರ ಶಾಲೆಗೆ ರೂ. 70 ಸಾವಿರ ನಗದು ಬಹುಮಾನವನ್ನು ವಿಶ್ವ ಭೂಮಿ ದಿನಾಚರಣೆಯಂದು ಬೆಂಗಳೂರಿನಲ್ಲಿ ನೀಡಲಾಗುವುದು.ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೊದಲ ಪರಿಸರ ಮಿತ್ರ ಶಾಲೆಗೆ ರೂ. 20 ಸಾವಿರ ನಗದು ಬಹುಮಾನ ನೀಡಲಾಗುವುದು. ಜಿಲ್ಲೆಯಲ್ಲಿ 2 ರಿಂದ 11 ನೇ ಸ್ಥಾನದವರೆಗೆ ಆಯ್ಕೆಯಾದವರಿಗೆ ಹಸಿರು ಶಾಲೆಗಳು (10 ಶಾಲೆಗಳು) ಎಂದು ಕರೆಯಲಾಗುವುದು ಹಾಗೂ ತಲಾ ರೂ.  2 ಸಾವಿರ ಬಹುಮಾನ ನೀಡಲಾಗುವುದು.ಜಿಲ್ಲೆಯಲ್ಲಿ 12 ರಿಂದ 21ನೇ ಸ್ಥಾನದವರೆಗೆ ಆಯ್ಕೆಯಾದವರಿಗೆ ಕಿತ್ತಳೆ ಶಾಲೆಗಳು (10 ಶಾಲೆಗಳು) ಎಂದು ಕರೆಯಲಾಗುವುದು ಹಾಗೂ ತಲಾ ರೂ.  1ಸಾವಿರ ನೀಡಲಾಗುವುದು. ಭಾಗವಹಿಸಿದ ಉಳಿದ ಎಲ್ಲಾ ಶಾಲೆಗಳಿಗೂ ಹಳದಿ ಶಾಲೆಗಳು ಎಂದು ಕರೆದು ಪ್ರಶಸ್ತಿ ಪತ್ರ ನೀಡಲಾಗುವುದು.ಶ್ರೀ ಕೆ.ಟಿ.ಬೇಬಿ ಮ್ಯಾಥ್ಯು, ಜಿಲ್ಲಾ ಪ್ರಧಾನ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಕೊಡಗು ಪೊನ್ನಮ್ಮ ಕುಶಾಲಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಭವನ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ, ಕೊಡಗು ಜಿಲ್ಲೆ, ದೂರವಾಣಿ ಸಂಖ್ಯೆ: 08272-225500, ಮೊಬೈಲ್: 9448060466 ಈ  ವಿಳಾಸಕ್ಕೆ ಪತ್ರದ ಮೂಲಕ ತಮ್ಮ ಒಪ್ಪಿಗೆಯನ್ನು ಕಳುಹಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry