ಶನಿವಾರ, ಮಾರ್ಚ್ 6, 2021
32 °C

ಪರಿಸರ ಸಂರಕ್ಷಣೆಗೆ ಸಹಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಸರ ಸಂರಕ್ಷಣೆಗೆ ಸಹಿ ಅಭಿಯಾನ

ಮುಂಬರುವ ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೆ.ಸಿ.ಐ. ಬೆಂಗಳೂರು ಸಿಲಿಕಾನ್ ಸಿಟಿ ಮತ್ತು ಬಾಯರ್ಸ್‌ ಕಾಫೀ ಸಹಯೋಗದಲ್ಲಿ ಆಯೋಜಿಸಿದ್ದ  ಪರಿಸರ ಜಾಗೃತಿ ಅಭಿಯಾನದ ಚಾಲನೆ ಕಾರ್ಯಕ್ರಮ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ನಡೆಯಿತು.

ಕಬ್ಬನ್ ಪಾರ್ಕ್‌ನಲ್ಲಿ ತೂಗು ಹಾಕಲಾಗಿರುವ ಒಂದು ಕಿಲೋಮೀಟರ್ ಉದ್ದದ ಪರಿಸರ ಸ್ನೇಹಿ ಬಟ್ಟೆಯಿಂದ ತಯಾರಿಸಿದ ಬೃಹತ್ ಬ್ಯಾನರ್‌ಗೆ ಸಹಿ ಹಾಕುವ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ಜಿ. ಜ್ಯೋತಿ ಪ್ರಕಾಶ್ ಮಿರ್ಜಿ ಪರಿಸರ ಜಾಗೃತಿಗೆ ಕರೆ ನೀಡಿದರು.

ದೇಶದಾದ್ಯಂತ ಬೇರೆ ಬೇರೆ ಭಾಗದಲ್ಲೂ ಇದೇ ಮಾದರಿಯ ಬ್ಯಾನರ್‌ಗಳನ್ನು ತೂಗು ಹಾಕಲಾಗುತ್ತದೆ. ಪರಿಸರ ತಜ್ಞರು, ವಿವಿಧ ಕ್ಷೇತ್ರದ ಪರಿಣಿತರು, ಸಾರ್ವಜನಿಕರ ಪರಿಸರ ರಕ್ಷಣೆಗೆ ಬದ್ಧರಾಗಿರುವುದಾಗಿ ಒಪ್ಪಿ ರುಜು ಹಾಕುತ್ತಾರೆ.  ಜೂನ್ ಮೊದಲ ವಾರ ಅಭಿಯಾನದ ಅಂಗವಾಗಿ 100 ಕಿ. ಮೀ. ಉದ್ದದ ಬ್ಯಾನರ್ ಅನ್ನು ನೈಸ್ ರಸ್ತೆಯುದ್ದಕ್ಕೂ ತೂಗು ಹಾಕಲಾಗುತ್ತದೆ.

ಇಷ್ಟೇ ಅಲ್ಲ, ಈ ಅಭಿಯಾನದ ಮೂಲಕ ದೇಶದಾದ್ಯಂತ 10 ಲಕ್ಷ ಸಸಿ ನೆಡಲಾಗುವುದು, ಪರಿಸರ ಜಾಗೃತಿಗಾಗಿ ಪ್ರತಿಜ್ಞೆ ಕೈಗೊಳ್ಳುವುದು, ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಲು ಪ್ರಯತ್ನಿಸುವುದು ಮುಂತಾದ ಕಾರ್ಯಕ್ರಮ ಆಯೋಜಿಸಲಾಗುವುದು.

ಅಭಿಯಾನ ಮುಗಿದ ಮೇಲೆ 100 ಕಿ. ಮೀ. ಉದ್ದದ ಬಟ್ಟೆಯ ಬ್ಯಾನರ್ ಅನ್ನು ವೃದ್ಧಾಶ್ರಮ, ಆಸ್ಪತ್ರೆ, ಹಾಸ್ಟೆಲ್‌ಗಳ ಬೆಡ್‌ಶೀಟ್ ತಯಾರಿಗೆ ಮತ್ತು ಬಡವರಿಗೆ ವಿತರಿಸಲಾಗುವುದು.

 ಈ ಬ್ಯಾನರ್‌ನಲ್ಲಿ ಪರಿಸರ ಸಂಬಂಧ ಮಾಹಿತಿ, ಚಿತ್ರ ಶೀರ್ಷಿಕೆ, ಘೋಷಣೆ, ಸಾಧಕರ ಸಹಿ ಇರುತ್ತವೆ.  ಇದಲ್ಲದೇ, ಇಂದಿನಿಂದ ಪರಿಸರ ಜಾಗೃತಿ ಮೂಡಿಸುವ ಬ್ಯಾನರ್‌ಗಳು ಶಾಲೆ, ಕಾಲೇಜುಗಳು, ಖಾಸಗಿ ಮತ್ತು ಸರ್ಕಾರಿ ಕಚೇರಿಗಳ ಎದುರಿಗೂ ಹಾಕಲಾಗುತ್ತದೆ. ಇವೆಲ್ಲವೂ ಜೂನ್ ಮೊದಲವಾರ ಒಂದಾಗಿ, 100 ಕಿ. ಮೀ ಉದ್ದದ ಬೃಹತ್ ಬ್ಯಾನರ್ ರೂಪ ತಾಳುತ್ತದೆ.

ಜಾಗತಿಕ ಮಟ್ಟದಲ್ಲಿ ಅಭಿಯಾನವನ್ನು   ತಲುಪಿಸಲು ಮತ್ತು ಪರಿಸರ ಸಂಬಂಧಿ ಜಾಗೃತಿ ಮೂಡಿಸಲು ಇದು ಸೂಕ್ತ ಮಾಧ್ಯಮ. ದೇಶದಾದ್ಯಂತ ಏಕಕಾಲಕ್ಕೆ ಸಾರ್ವಜನಿಕರನ್ನು ತಲುಪಲು ಮತ್ತು ಈ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣ ಮತ್ತು ಪರಿಹಾರವನ್ನು ತಿಳಿಸುವ ಪ್ರಯತ್ನ ನಮ್ಮದು ಎಂದು ಅಭಿಯಾನ ಮತ್ತು ಜೆ.ಸಿ.ಐ. ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷ ಜೆ.ಸಿ. ಶಂಕರ್ ಪಾಟೀಲ್ ತಿಳಿಸಿದರು.

ಪರಿಸರ ಮತ್ತು ಆರೋಗ್ಯ ಒಂದಕ್ಕೊಂದು ಸಂಬಂಧ ಹೊಂದಿವೆ. ವಾಯು ಮಾಲೀನ್ಯ, ಪ್ಲಾಸ್ಟಿಕ್ ಬಳಕೆ, ಕಲುಷೀತ ನೀರಿನ ಬಳಕೆ, ತಾಪಮಾನ ಏರಿಕೆ ಮುಂತಾದ ಸಂಗತಿಗಳಿಂದಾಗಿ ಮನುಷ್ಯ ತತ್ತರಿಸಿದ್ದಾನೆ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂಬ ಕಾರಣಕ್ಕೆ ಈ ಬೃಹತ್ ಅಭಿಯಾನ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರೂ ಕೈ ಜೋಡಿಸಬೇಕು. ಎಲ್ಲರೂ ಒಂದಾಗಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಾಯರ್ಸ್‌ ಕಾಫೀಯ ನಿರ್ದೇಶಕ ಶ್ರೀಕಾಂತ್ ರಾವ್ ಕರೆ ನೀಡಿದರು.

ಅಭಿಯಾನಕ್ಕೆ ಕೈ ಜೋಡಿಸುವವರು, ಮಾಹಿತಿಗೆ: 94486 14351, 23148816.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.