ಪರಿಸರ ಸ್ನೇಹಿ ನಡಿಗೆಗೆ ಸಜ್ಜಾಗಿದೆ ಕಬ್ಬನ್ ವನ

7

ಪರಿಸರ ಸ್ನೇಹಿ ನಡಿಗೆಗೆ ಸಜ್ಜಾಗಿದೆ ಕಬ್ಬನ್ ವನ

Published:
Updated:
ಪರಿಸರ ಸ್ನೇಹಿ ನಡಿಗೆಗೆ ಸಜ್ಜಾಗಿದೆ ಕಬ್ಬನ್ ವನ

ಬೆಂಗಳೂರು: ಕಬ್ಬನ್ ಉದ್ಯಾನವನದಲ್ಲಿ ನೂತನ ವರ್ಷದ ಅಂಗವಾಗಿ ಮಣ್ಣಿನ ಪರಿಸರ ಸ್ನೇಹಿ `ನಡಿಗೆದಾರರ ರಸ್ತೆ', ತೂಗು ಸೇತುವೆಗಳ ಉದ್ಘಾಟನೆ ಮತ್ತು ಅಪರೂಪದ ವಿವಿಧ ಸಸ್ಯ ಪ್ರಭೇದಗಳನ್ನು ನೆಡುವ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದವು.ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶಂಕರಲಿಂಗೇಗೌಡ ಮಾತನಾಡಿ, `ಜನರ ಮನಸ್ಸನ್ನು ಆಹ್ಲಾದಗೊಳಿಸುವಂತಹ ಮತ್ತು ಸಂತಸವನ್ನು ನೀಡುವಂತಹ ಗಿಡಗಳನ್ನು ಇದುವರೆಗೂ ನೆಡಲಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಪರಿಸರದಲ್ಲಿನ ವೈರಸ್ ನಿಯಂತ್ರಿಸಲು ಉದ್ಯಾನವನದಲ್ಲಿ ನೂತನ ವರ್ಷದ ಸಂಭ್ರಮದಂದು ಆಯುರ್ವೇದ ಗಿಡ ನೆಡಲಾಗಿದೆ' ಎಂದರು.ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಮಾತನಾಡಿ `ಜನರಿಗೆ ಪರಿಸರದ ಕಾಳಜಿಯ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಜನರು ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಬೇಕು. ಎಲ್ಲೆಂದರಲ್ಲಿ ಕಸವನ್ನು ಹಾಕಿ ಮಾಲಿನ್ಯ ಮಾಡಬಾರದು' ಎಂದು ಕಿವಿ ಮಾತು ಹೇಳಿದರು.`ಉದ್ಯಾನ ಅಥವಾ ಪರಿಸರವು ಒಬ್ಬರಿಗೆ ಸಂಬಂಧಿಸಿದ್ದಲ್ಲ. ಎಲ್ಲರಿಗೂ ಕಾಳಜಿ ಇರಬೇಕು. ಉದ್ಯಾನಕ್ಕೆ ಬಂದವರು ಸ್ವಚ್ಛತೆಯನ್ನು ಕಾಪಾಡಬೇಕು. ಎಲ್ಲೆಂದರಲ್ಲಿ ಕಸವನ್ನು ಹಾಕಿ, ಗಿಡ ಅಥವಾ ಹೂವುಗಳನ್ನು ಮುರಿಯುವ ಪ್ರವೃತ್ತಿ ಜನರಲ್ಲಿ ಕಡಿಮೆಯಾಗಬೇಕು' ಎಂದರು.

ತೂಗು ಸೇತುವೆಗಳ ಉದ್ಘಾಟನೆಯಲ್ಲಿ ಮೊದಲ ತೂಗುಸೇತುವೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರಕುಮಾರ್ ಉದ್ಘಾಟಿಸಿದರು. 2ನೇ ತೂಗು ಸೇತುವೆಯನ್ನು ಹಲಸೂರಿನ ಎಂಇಜಿ ಕೇಂದ್ರದ ಮುಖ್ಯಸ್ಥ ಬ್ರಿಗೇಡಿಯರ್ ಪವನ್ ಆನಂದ್ ಹಾಗೂ ಕೊನೆಯ  ತೂಗು ಸೇತುವೆಯನ್ನು ಶಂಕರಲಿಂಗೇಗೌಡ ಉದ್ಘಾಟಿಸಿದರು.ಪರಿಸರ ಸ್ನೇಹಿ `ನಡಿಗೆದಾರರ ರಸ್ತೆ': ಪ್ರಥಮ ಹಂತವಾಗಿ ಕಬ್ಬನ್ ಉದ್ಯಾನವನದ ಸಿದ್ದಲಿಂಗಯ್ಯ ವೃತ್ತದ ಬಳಿಯಿಂದ ಹಡ್ಸನ್ ವೃತ್ತದವರೆಗೆ ಹಾಗೂ ರಿಸರ್ವ್ ಬ್ಯಾಂಕ್, ಯವನಿಕ ಹಾಗೂ ಸೆಂಚುರಿ ಕ್ಲಬ್‌ನ ಹಿಂಭಾಗದಲ್ಲಿ ಹಾದು ಹೋಗಿ ರಾಜ್ಯ ಕೇಂದ್ರ ಗ್ರಂಥಾಲಯ ಪ್ರದೇಶದವರೆಗೆ 2 ಕಿ.ಮೀ ಪ್ರದೇಶದಲ್ಲಿ ಮಣ್ಣಿನಿಂದ ಭದ್ರಪಡಿಸಿದ, ಹೊಸಕೋಟೆ ಕಲ್ಲಿನ ಪುಡಿಯಿಂದ ನಿರ್ಮಿಸಿದ ಪರಿಸರ ಸ್ನೇಹಿ `ನಡಿಗೆದಾರರ ರಸ್ತೆ' ನಿರ್ಮಿಸಲಾಗಿದೆ.ವಿಶೇಷತೆಗಳು: ಮಳೆ ಅಥವಾ ತುಂತುರು ನೀರಾವರಿಯಿಂದ ನೀರು ರಸ್ತೆಯಲ್ಲಿ ನಿಲ್ಲುವುದಿಲ್ಲ. ನೀರನ್ನು ತಕ್ಷಣ ಹೀರಿಕೊಳ್ಳುವ ಸಾಮರ್ಥ್ಯ ಕಲ್ಲಿನ ಪುಡಿಗಿದೆ. ವಾಕಿಂಗ್ ಅಥವಾ ಜಾಗಿಂಗ್ ಮಾಡುವವರಿಗೆ ಪೂರ್ಣ ಹಿಡಿತವನ್ನು ಒದಗಿಸುತ್ತದೆ. ಇದರಿಂದ ಜಾರಿ ಬೀಳುವ ಸಂಭವವಿರುವುದಿಲ್ಲ.ತೂಗು ಸೇತುವೆಗಳು: `ನಡಿಗೆದಾರರ ರಸ್ತೆ' ಗೆ ಅಡ್ಡಲಾಗಿ ಎರಡು ಕಡೆ ನೀರಿನ ಕಾಲುವೆಗಳು ಹಾಗೂ ಒಂದು ಕಡೆ ಕರಗದ ಕುಂಟೆ ಕೊಳದ ನೀರಿನ ಒಳಹರಿವು ಕಾಲುವೆ ಇದ್ದು, ಇವುಗಳಿಗೆ ಅಡ್ಡಲಾಗಿ ಸಿಮೆಂಟ್ ಸೇತುವೆಯ ಬದಲಾಗಿ ಮೂರು ವಿಶೇಷ ಆಕರ್ಷಣೆಯಿಂದ ಕೂಡಿದ, ಮೂರು ವಿನ್ಯಾಸಗಳ ತೂಗು ಸೇತುವೆಗಳನ್ನು ನಿರ್ಮಿಸಲಾಗಿದೆ.

`ನಡಿಗೆದಾರರ ರಸ್ತೆ' ಯಲ್ಲಿ ಸಂಚರಿಸುವ ಜನರಿಗೆ, ಕಬ್ಬನ್ ಉದ್ಯಾನವನದ ತಾಜಾ ಹಸುರಿನ ಜತೆಗೆ ತೂಗು ಸೇತುವೆಗಳು ನೈಸರ್ಗಿಕ ಸೊಬಗನ್ನು ನೀಡುತ್ತವೆ. ವಿವಿಧ ವಿನ್ಯಾಸದ ತೂಗು ಸೇತುವೆಗಳನ್ನು ಹೊಂದಿರುವ ಉದ್ಯಾನವನಗಳಲ್ಲಿ ಕಬ್ಬನ್ ಉದ್ಯಾನವನ ರಾಜ್ಯದಲ್ಲೇ ಪ್ರಥಮವಾಗಿದೆ.ಸಸ್ಯ ಪ್ರಭೇದಗಳು: ಕಬ್ಬನ್ ಉದ್ಯಾನವನದಲ್ಲಿ 2013 ರ ನೂತನ ವರ್ಷಾಚರಣೆಯ ಸಂದರ್ಭದಲ್ಲಿ 55 ಪ್ರಭೇದಗಳಿಗೆ ಸೇರಿದ 275 ಅಪರೂಪದ ಆಯ್ದ ಗಿಡಗಳನ್ನು ರಿಂಗ್‌ವುಡ್ ವೃತ್ತ, ಕೇಂದ್ರ ಗ್ರಂಥಾಲಯದ ಹಿಂಭಾಗ, ಗೆಜಬೋ ಪ್ರದೇಶ, ಕೋತಿ ತೋಪು, ನೆರಳು ಉದ್ಯಾನವನ ಹೀಗೆ ಆಯ್ದ ಏಳು ಪ್ರದೇಶಗಳಲ್ಲಿ ಗಿಡಗಳನ್ನು ನೆಡಲಾಯಿತು.`ಕಬ್ಬನ್ ಉದ್ಯಾನವನವನ್ನು ಇನ್ನೂ ಶೇ 20 ರಷ್ಟು ಹಸಿರುಗೊಳಿಸಬೇಕಾಗಿದೆ. ಇದಕ್ಕಾಗಿ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ಉದ್ಯಾನದ ರಸ್ತೆಯ ಇಕ್ಕೆಲಗಳಲ್ಲಿ ಚೆನ್ನಾಗಿ ಕಾಣಲೆಂದು `ಆ್ಯಕ್ಟಿಕ್ ವಿದ್ಯುತ್ ಕಂಬ' ಗಳ ಅಳವಡಿಕೆ, ಉದ್ಯಾನದಲ್ಲಿರುವ ಕಾರಂಜಿಗಳನ್ನು ಆಧುನೀಕರಿಸಿ ನವೀಕರಣ ಮಾಡುವುದು ಮುಂದಿನ ಯೋಜನೆಗಳಾಗಿವೆ'                                             - ಡಾ.ಎಂ. ಜಗದೀಶ,   ತೋಟಗಾರಿಕೆ ಉಪನಿರ್ದೇಶಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry