ಮಂಗಳವಾರ, ಮಾರ್ಚ್ 9, 2021
23 °C

ಪರಿಸರ ಸ್ನೇಹಿ ಮದುವೆಗಳು!

ಅನಿತಾ ಈ. Updated:

ಅಕ್ಷರ ಗಾತ್ರ : | |

ಪರಿಸರ ಸ್ನೇಹಿ ಮದುವೆಗಳು!

ವಿವಾಹ ಸೇರಿದಂತೆ ಅನೇಕ ಅದ್ದೂರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್‌ ಹಾಗೂ ಥರ್ಮಾಕೋಲ್‌ನಿಂದ ತಯಾರಾದ ವಸ್ತುಗಳ ಬಳಕೆ ಇದ್ದೇ ಇರುತ್ತದೆ.  ಕಾರ್ಯಕ್ರಮಕ್ಕೆ ಬಂದವರಿಗೆ ಊಣಬಡಿಸಲು ಪ್ಲಾಸ್ಟಿಕ್‌ ಅಥವಾ ವ್ಯಾಕ್ಸ್ ಲೇಪನದ ತಟ್ಟೆ–ಲೋಟಗಳ ಬಳಕೆ ಸಾಮಾನ್ಯ. ಜೊತೆಗೆ ಮದುವೆ ಮಂಟಪ ಹಾಗೂ ಹಾಲ್‌ನ ಅಲಂಕಾರ ಮಾಡಲು ವಿದೇಶಿ ಹೂವುಗಳು, ಪ್ಲಾಸ್ಟಿಕ್‌, ಥರ್ಮಾಕೋಲ್‌ ಬಳಸುತ್ತಾರೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ.ಮಾಲಿನ್ಯಕಾರಕಗಳು ಭೂಮಿಯ ಒಡಲು ಸೇರುವುದನ್ನು ತಪ್ಪಿಸಲು ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ‘ಹಸಿರು ದಳ’ ಸಂಘಟನೆಯು ‘ಪರಿಸರ ಸ್ನೇಹಿ ವಿವಾಹ ಹಾಗೂ ಸಮಾರಂಭ’ ಎಂಬ ಹೊಸ ಪರಿಕಲ್ಪನೆ ಹುಟ್ಟು ಹಾಕಿದೆ. ಇಲ್ಲಿಯವರೆಗೆ 10 ಪರಿಸರ ಸ್ನೇಹಿ ಮದುವೆಗಳು ಹಾಗೂ ಹಲವಾರು ಮ್ಯಾರಥಾನ್‌ ಮತ್ತು ಸಭೆ, ಸಮಾರಂಭಗಳನ್ನು ಪ್ಲಾಸ್ಟಿಕ್‌ ಬಳಕೆ ಇಲ್ಲದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ‘ಪರಿಸರ ಸ್ನೇಹಿ ವಿವಾಹ’ ಮಾಡಿಕೊಳ್ಳಲು ಇಚ್ಛಿಸುವವರು ಹಸಿರು ದಳ ಸಂಘಟನೆಯನ್ನು ಸಂಪರ್ಕಿಸಿದರೆ, ಅವರು ವಿವಾಹ ಮಾಡುವವರಿಗೆ ಮೊದಲು ಪಾಲಿಸಬೇಕಾದ ನಿಯಮಗಳ ಬಗ್ಗೆ ವಿವರಿಸುತ್ತಾರೆ. ಮದುವೆ ಊಟದಲ್ಲಿ ಪ್ಲಾಸ್ಟಿಕ್‌ ಕಪ್‌ಗಳ ಬಳಕೆ ಕಡಿಮೆ ಮಾಡಬಹುದಾದ ಪರ್ಯಾಯ ತಿನಿಸುಗಳ ಬಗ್ಗೆ ಮಾಹಿತಿ ನೀಡುತ್ತಾರೆ. ನೀರು ಕುಡಿಯಲು ಪ್ಲಾಸ್ಟಿಕ್‌ ಬಾಟೆಲ್‌ಗಳ ಬಳಕೆ ಮಾಡದಂತೆ ಮನವೊಲಿಸುತ್ತಾರೆ.

ಕುಡಿಯುವ ನೀರಿಗಾಗಿ ನೀರಿನ ಕೇಂದ್ರಗಳನ್ನು ತೆರೆಯುತ್ತಾರೆ. ವಿವಾಹ ನಡೆಯುವ ಪ್ರದೇಶದ ವಿಸ್ತೀರ್ಣ ಹಾಗೂ ಬರುವ ಜನರ ಆಧಾರದ ಮೇಲೆ ಎಷ್ಟು ಕೇಂದ್ರಗಳನ್ನು ಎಲ್ಲೆಲ್ಲಿ ತೆರೆಯಬೇಕು ಎಂದು ನಿರ್ಧರಿಸುತ್ತಾರೆ. ನಂತರ ಮದುವೆಗೆ ಕೇಟರಿಂಗ್‌ ಜವಾಬ್ದಾರಿ ವಹಿಸಿಕೊಂಡಿರುವವರೊಂದಿಗೆ ಮಾತನಾಡಿ ಪ್ಲಾಸ್ಟಿಕ್‌ ತಟ್ಟೆ, ಪ್ಲಾಸ್ಟಿಕ್‌ ಕಪ್‌ ಹಾಗೂ ಲೋಟಗಳನ್ನು ಬಳಸದಂತೆ ಹೇಳಲಾಗುತ್ತದೆ.ಅದಕ್ಕಾಗಿ ಕೇಟರಿಂಗ್‌ ಸಂಸ್ಥೆಯವರು ಕುಡಿಯುವ ನೀರನ್ನು ಸ್ಟೀಲ್‌ ಅಥವಾ ಗಾಜಿನ ಲೋಟಗಳಲ್ಲಿ ನೀಡಲು ಲೋಟಗಳನ್ನು ಖರೀದಿಸುವಂತೆ ಅಥವಾ ಬಾಡಿಗೆಗೆ ಪಡೆಯುವಂತೆ ಮನವೊಲಿಸಲಾಗುತ್ತದೆ. ಇದಕ್ಕೆ ಕೆಲವರು ಒಪ್ಪಿದರೆ, ಮತ್ತೆ ಕೆಲವರು ಒಪ್ಪುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾತ್ರ ತಮ್ಮ ಬಳಿ ಇರುವ ಲೋಟಗಳನ್ನು ಸಂಘಟನೆಯವರೇ ತೆಗೆದುಕೊಂಡು ಹೋಗುತ್ತಾರೆ. ನಂತರ ಒಬ್ಬರು ನೀರು ಕುಡಿದ ತಕ್ಷಣ ಅದನ್ನು ತೊಳೆದು ಬಿಸಿ ನೀರಿನಲ್ಲಿ ಇಟ್ಟು ಮತ್ತೊಬ್ಬರಿಗೆ ನೀರನ್ನು ಕುಡಿಯಲು ನೀಡುವ ವ್ಯವಸ್ಥೆ ಕಲ್ಪಿಸುತ್ತಾರೆ.ಪ್ಲಾಸ್ಟಿಕ್‌ ತಟ್ಟೆಗಳು ಹಾಗೂ ಕಪ್‌ಗಳ ಬದಲಿಗೆ ಬಾಳೆ ಎಲೆ, ಸ್ಟೀಲ್‌ ತಟ್ಟೆಗಳು, ಮೆಲ್ಮೊವೇರ್‌, ಶುಗರ್‌ ಬಗಾಸ್‌ ಅಥವಾ ದೊನ್ನೆಗಳ ಬಳಕೆ ಮಾಡುತ್ತಾರೆ. ಮದುವೆಗಳಲ್ಲಿ ಸಭಾಂಗಣವನ್ನು ಅಲಂಕಾರ ಮಾಡುವ ಡೆಕೊರೇಟರ್ಸ್‌ ಜೊತೆ ಒಂದು ಸುತ್ತು ಮಾತನಾಡಿ, ಮದುವೆ ಮಂಟಪ ಹಾಗೂ ಸಭಾಂಗಣವನ್ನು ಸಿಂಗಾರ ಮಾಡಲು ಥರ್ಮಾಕೋಲ್‌ ಹಾಗೂ ವಿದೇಶಿ ಹೂಗಳನ್ನು ಬಳಸದಂತೆ ಮನವರಿಕೆ ಮಾಡಿಕೊಡುತ್ತಾರೆ.

ಅದಕ್ಕೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ಹೂಗಳು, ಮರುಬಳಕೆ ಮಾಡುವ ಕಾಗದದಿಂದ ತಯಾರಿಸಿದ ಹೂಗಳು, ಬಟ್ಟೆ ಹಾಗೂ ಹೂವಿನ ಗಿಡಗಳಿರುವ ಪಾಟ್‌ಗಳನ್ನು ಬಾಡಿಗೆಗೆ ಪಡೆದು ಅಲಂಕಾರ ಮಾಡಬಹುದು. ಇನ್ನು ವಿದೇಶಿ ಹೂಗಳಿಗಾಗಿ ಇಂಧನ, ಹಣ ಹಾಗೂ ಸಮಯ ವ್ಯಯಿಸುವ ಬದಲು ಸ್ಥಳೀಯವಾಗಿ ಹತ್ತಿರದಲ್ಲಿ ಸಿಗುವ ಹೂಗಳನ್ನು ಖರೀದಿಸಿ ಅಲಂಕರಿಸುವಂತೆ ತಿಳಿಹೇಳುತ್ತಾರೆ.   ಯಾವುದೇ ಸಮಾರಂಭಗಳಲ್ಲಿ ಕೇವಲ ಕುಡಿಯುವ ನೀರಿನ ಲೋಟಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ವಹಿಸಿಕೊಳ್ಳುವ ಹಸಿರು ದಳದ ಕಾರ್ಯಕರ್ತರು, ಊಟದ ತಟ್ಟೆಗಳಲ್ಲಿ ಉಳಿಯುವ ಆಹಾರವನ್ನು ತೆಗೆಯುವುದು ಹಾಗೂ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.ಇತ್ತೀಚೆಗೆ ನಗರದ ಅರಮನೆ ಮೈದಾನದಲ್ಲಿ ನಡೆದ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳ ವಿವಾಹದಲ್ಲೂ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಹಸಿರು ದಳ ತನ್ನ ಉದ್ದೇಶ ಈಡೇರಿಸುವಲ್ಲಿ ಯಶಸ್ವಿಯಾಯಿತು. ‘ತನ್ನ ಮದುವೆ ಪರಿಸರ ಸ್ನೇಹಿಯಾಗಿ ಆಗಬೇಕು ಎಂದು ರಾಮಲಿಂಗಾರೆಡ್ಡಿ ಅವರ ಮಗಳು ನಮ್ಮ ಸಂಘಟನೆಯನ್ನು ಸಂಪರ್ಕಿಸಿದ್ದರು.

ಹೀಗಾಗಿ ಅವರ ಮದುವೆಗೆ ತಾಜಾ ಹೂಗಳನ್ನು ಕಡಿಮೆ ಬಳಸಿ, ಮರುಬಳಕೆ ಮಾಡಿದ ಕಾಗದದಿಂದ ತಯಾರಿಸಿದ ಹೂಗಳು, ಬಾಡಿಗೆಗೆ ಪಡೆದ ಗಿಡಗಳಿರುವ ಪಾಟ್‌ಗಳು ಹಾಗೂ ಬಟ್ಟೆಗಳಿಂದ ಮದುವೆ ಮನೆಯನ್ನು ಅಲಂಕಾರ ಮಾಡಿದ್ದೆವು. ಮದುವೆಯಲ್ಲಿ ಪ್ಲಾಸ್ಟಿಕ್‌ ತಟ್ಟೆ–ಲೋಟಗಳ ಬಳಕೆಯನ್ನು ನಿಷೇಧಿಸಿದ್ದೆವು.

ಸ್ವಲ್ಪ ಪ್ರಮಾಣದಲ್ಲಿ ನೀರಿನ ಬಾಟಲಿಗಳನ್ನು ಬಳಕೆ ಮಾಡಲಾಗಿತ್ತು. ಊಟದ ವ್ಯವಸ್ಥೆ ಮಾಡಿದ್ದ ಕಡೆಗಳಲ್ಲಿ ಕುಡಿಯುವ ನೀರಿನ ಕೇಂದ್ರಗಳನ್ನು ತೆರೆದು, ಗಾಜಿನ ಲೋಟಗಳಲ್ಲಿ ನೀರು ನೀಡಿದ್ದೆವು. ಅಲ್ಲದೆ ಸಾವಿರಾರು ಜನ ಬಂದಿದ್ದ ಅರಮನೆ ಮೈದಾನದಲ್ಲಿ ಮದುವೆ ಮುಗಿದ ನಂತರ ಒಂದುಚೂರೂ ಕಸ ಉಳಿಯದಂತೆ ಸ್ವಚ್ಛಗೊಳಿಸಿ, ಎಲ್ಲವನ್ನೂ ಗೊಬ್ಬರ ಮಾಡಲು, ಬಯೊ ಗ್ಯಾಸ್‌ ಪ್ಲಾಂಟ್‌ ಹಾಗೂ ಒಣತ್ಯಾಜ್ಯವನ್ನು ಪುನರ್‌ಬಳಕೆ ಮಾಡಲು ಕಳುಹಿಸಿದ್ದೆವು. ಈ ವಿವಾಹದಲ್ಲಿ 120 ಮಂದಿ ಕಾರ್ಯಕರ್ತರು ಕೆಲಸ ಮಾಡಿದ್ದರು’ ಎನ್ನುತ್ತಾರೆ ನಳಿನಿ ಶೇಖರ್‌. ಮದುವೆಗಳಲ್ಲದೆ ಸಭೆ–ಸಮಾರಂಭಗಳು, ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳು, ಪ್ರತಿಭಟನೆ, ಮ್ಯಾರಥಾನ್‌ ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಯಾವುದೇ ಕಾರ್ಯಕ್ರಮಗಳಲ್ಲಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಅಗತ್ ಕಾರ್ಯಕರ್ತರ ಸಂಖ್ಯೆಯ ಆಧಾರದ ಮೇಲೆ ಈ ಕಾರ್ಯಕ್ರಮಗಳಿಗೆ ಸಂಘಟನೆ ಶುಲ್ಕ ನಿಗದಿ ಮಾಡುತ್ತದೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳೂ ತ್ಯಾಜ್ಯ ನಿರ್ವಹಣೆಗೆ ಪರಿಸರ ದಳದವರನ್ನು ಸಂಪರ್ಕಿಸುತ್ತಿದ್ದಾರೆ.

ಸಂಪರ್ಕಕ್ಕೆ: 9742112362

ಪರಿಕಲ್ಪನೆಯ ಹುಟ್ಟು

ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಲ್ಲೇಶ್ವರದ ಮೀನಾಕ್ಷಿ ಭರತ್‌  ತಮ್ಮ ಮನೆಯಲ್ಲಿ ನಡೆದ ವಿವಾಹವೊಂದನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಸ್ನೇಹಿ ವಿವಾಹವನ್ನಾಗಿ ಮಾಡಲು ಪಯತ್ನಿಸಿ ಸಫಲರಾಗಿದ್ದರು. ಸ್ನೇಹಿತರು ಹಾಗೂ ಸಂಬಂಧಿಕರ ಸಹಾಯ ಪಡೆದು ಮದುವೆ ಮನೆಯಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್‌ ನೀರಿನ ಬಾಟಲಿ, ಕಪ್‌ ಹಾಗೂ ಗ್ಲಾಸ್‌ಗಳ ಬಳಕೆಯನ್ನು ನಿಲ್ಲಿಸಿದ್ದರು.ಈ ವಿಷಯ ತಿಳಿದ ಹಸಿರು ದಳದವರು ಮೀನಾಕ್ಷಿ ಅವರಿಂದ ಸಂಘಟನೆಯ ಕಾರ್ಯಕರ್ತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದರು. ಅದರಲ್ಲಿ ಅವರು ತಮ್ಮ ಅನುಭವ ಹಾಗೂ ಅನುಸರಿಸದ ನಿಯಮಗಳನ್ನು ಕುರಿತು ಮಾಹಿತಿ ನೀಡಿದ್ದರು. ಇದಾದ ನಂತರ ನಮ್ಮ ಸಂಘನೆಯಲ್ಲಿರುವ ಸಿಬ್ಬಂದಿ ಸೇರಿ ಪರಿಸರ ಸ್ನೇಹಿ ವಿವಾಹದಲ್ಲಿ ಯಾವ ಯಾವ ರೀತಿಯಲ್ಲಿ ಪ್ಲಾಸ್ಟಿಕ್‌ ಹಾಗೂ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುವುದನ್ನು ನಿಲ್ಲಿಸಬಹುದು ಎಂದು ಯೋಚಿಸಿ ಹಲವಾರು ಮಾರ್ಗಗಳನ್ನು ಕಂಡುಕೊಂಡರು.

ನಂತರ ಸ್ನೇಹಿತರೇ ಆಗಿದ್ದ ಲಲಿತಾ ತಮ್ಮ ಸಂಬಂಧಿಕರ ವಿವಾಹವನ್ನು ಅದೇ ರೀತಿ ಮಾಡಲು ನಿರ್ಧರಿಸಿ, ನಮ್ಮ ಸಹಾಯ ಕೋರಿದ್ದರು. ಇದು ಹಸಿರು ದಳ ಮಾಡಿಸಿದ ಮೊದಲ ಪರಿಸರ ಸ್ನೇಹಿ ವಿವಾಹ. ಈ ವಿವಾಹ 2.5 ಎಕರೆ ಪ್ರದೇಶದಲ್ಲಿ ನಡೆದಿತ್ತು. ಇದು ಮೊದಲ ಯೋಜನೆಯಾಗಿದ್ದ ಕಾರಣ ಸಂಘಟನೆಯಲ್ಲಿ ತರಬೇತಿ ಪಡೆದ ಮೂವರು ಕಾರ್ಯಕರ್ತರು ಮಾತ್ರ ಕಾರ್ಯನಿರ್ವಹಿಸಿದ್ದರು. ಇಲ್ಲಿ ವಿವಾಹ ಭೋಜನದ ವ್ಯವಸ್ಥೆ ಮಾಡುತ್ತಿದ್ದವರ ಜೊತೆ ಮಾತುಕತೆ ನಡೆಸಿ ಅವರನ್ನು ಒಪ್ಪಿಸುವಷ್ಟರಲ್ಲಿ ಸಾಕುಸಾಕಾಗಿತ್ತು.

ಅವರಿಗೆ ತ್ಯಾಜ್ಯ ನಿರ್ವಹಣೆ ಹಾಗೂ ಮಾಡಬೇಕಾದ ತಿಂಡಿ ತಿನಿಸುಗಳ ಕುರಿತು ಮಾಹಿತಿ ನೀಡಲೂ ಪ್ರಯತ್ನಿಸಿದರೂ ಅವರು ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ತಪ್ಪಾಗಿ ತಿಳಿದು ಸರಿಯಾಗಿ ಸಹಕರಿಸಲಿಲ್ಲ. ಹೀಗಾಗಿ ಆ ವಿವಾಹದಲ್ಲಿ ನಾವೇ ಸಾವಿರ ಸ್ಟೇನ್‌ಲೆಸ್‌ ಸ್ಟೀಲ್‌ ಲೋಟಗಳನ್ನು ಖರೀದಿಸಿ, ಮದುವೆಯಲ್ಲಿ ಬಳಕೆ ಮಾಡಿದೆವು. ಪ್ರತಿಯೊಬ್ಬರು ನೀರು ಕುಡಿದ ತಕ್ಷಣ ಅದನ್ನು ನಾವು ಕಾರ್ಯಕರ್ತರೇ ಸ್ವಚ್ಛಗೊಳಿಸುತ್ತಿದ್ದೆವು. ಆದರೆ ಮದುವೆ 2.5 ಎಕರೆ ಪ್ರದೇಶದಲ್ಲಿ ನಡೆದ ಕಾರಣ ತ್ಯಾಜ್ಯ ಸಂಗ್ರಹ ಹಾಗೂ ಅದರ ನಿರ್ವಹಣೆ ತುಂಬಾ ಕಷ್ಟವಾಗಿತ್ತು. ಉಳಿದಂತೆ ಎಲ್ಲವೂ ಸುಗಮವಾಗಿ ನಡೆದಿತ್ತು.  

– ನಳಿನಿ ಶೇಖರ್‌, ಹಸಿರು ದಳದ ಸಹ ಸಂಸ್ಥಾಪಕಿ

ತರಬೇತಿ

ಮದುವೆ ಮನೆಗಳಲ್ಲಿ ಕೆಲಸ ಮಾಡುವ ಸಂಘಟನೆಯ ಕಾರ್ಯಕರ್ತರಿಗೆ (ಚಿಂದಿ ಆಯುವವರು) ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸುತ್ತಾರೆ. ಅವರಿಗೆ ಮದುವೆ ಮನೆಯಲ್ಲಿ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಯಾವ ರೀತಿಯ ಉಡುಪು ಧರಿಸಬೇಕು ಹಾಗೂ ಅಲ್ಲಿ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಲಾಗುವುದು. ಜೊತೆಗೆ ನೀರಿನ ಲೋಟಗಳನ್ನು ತೊಳೆಯಲು ಆದಿವಾಸಿಗಳು ಉತ್ಪಾದಿಸುವ ಪರಿಸರಸ್ನೇಹಿ ಪುಡಿಯನ್ನು ಸೀಗೇಕಾಯಿ ಪುಡಿಯೊಂದಿಗೆ ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಿ ಬಳಸಬೇಕು ಎಂದು ತರಬೇತಿ ನೀಡುತ್ತಾರೆ. ಸದ್ಯಕ್ಕೆ ಈ ತರಬೇತಿ ಪಡೆದ 200 ಮಂದಿ ಹಸಿರು ದಳದಲ್ಲಿ ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.