ಪರಿಸ್ಥಿತಿ ಕೈಗೊಂಬೆಯಾಗಿ ಕಳ್ಳತನಕ್ಕಿಳಿದ ಅರ್ಚಕ

7

ಪರಿಸ್ಥಿತಿ ಕೈಗೊಂಬೆಯಾಗಿ ಕಳ್ಳತನಕ್ಕಿಳಿದ ಅರ್ಚಕ

Published:
Updated:
ಪರಿಸ್ಥಿತಿ ಕೈಗೊಂಬೆಯಾಗಿ ಕಳ್ಳತನಕ್ಕಿಳಿದ ಅರ್ಚಕ

ಗಂಗಾವತಿ: ಕಿತ್ತು ತಿನ್ನುವ ಬಡತನ ಎಂಥವರನ್ನು ಅಧೀರರನ್ನಾಗಿಸುತ್ತದೆ. ಕೆಟ್ಟ ಪರಿಸ್ಥಿತಿ ವ್ಯಕ್ತಿಯನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳುತ್ತದೆ ಎಂಬುವುದಕ್ಕೆ ಇಲ್ಲಿನ ಇಂದಿರಾನಗರದಲ್ಲಿರುವ ಜೈನ ಮಂದಿರದಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣ ಸಾಕ್ಷಿಯಾಗಿದೆ.ಕಿಡ್ನಿ ವೈಫಲ್ಯದಿಂದ ಬಳಲುವ ತಂದೆಯನ್ನು ರಕ್ಷಿಸಿಕೊಳ್ಳಲು ಹಾಗೂ ಶಸ್ತ್ರಚಿಕಿತ್ಸೆಗೆ ಮಾಡಿದ ಸಾಲದಿಂದ ಮುಕ್ತವಾಗಲು ದಿಕ್ಕು ತೋಚದಂತ ಪರಿಸ್ಥಿತಿ ನಿರ್ಮಾಣವಾದಾಗ ಅರ್ಚಕ, ತಾನು ನಿತ್ಯ ಪೂಜೆ ಮಾಡುವ ದೇವರ ಬೆಳ್ಳಿ ವಿಗ್ರಹಗಳನ್ನು ಒಲ್ಲದ ಮನಸ್ಸಿನಿಂದ ಕದ್ದ.ಕದ್ದ ತಪ್ಪಿಗೆ ಕೊನೆಗೆ ಪೊಲೀಸರಿಗೆ ಸಿಕ್ಕುಬಿದ್ದ ಘಟನೆ ನಡೆದಿದೆ. ಜೈನ ಮಂದಿರದಲ್ಲಿ ಅರ್ಚಕ ವೃತ್ತಿಯಲ್ಲಿದ್ದ ಗುಜರಾತಿನ ದಿಲೀಪ್ ಅಲಿಯಾಸ್ ರಾಕೇಶ, ಆತನ ತಂದೆ ಚತುರ್ ಭಾರಿಯಾರನ್ನು ಬಂಧಿಸಿರುವ ಪೊಲೀಸರು, ರೂ,8 ಲಕ್ಷ ಮೌಲ್ಯದ 13 ಕೆ.ಜಿ. ಬೆಳ್ಳಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.ಘಟನೆಯ ವಿವರ:

ಇಂದಿರಾನಗರದಲ್ಲಿರುವ ಜೈನ ಮಂದಿರದಲ್ಲಿ ಕಳೆದ ಡಿಸೆಂಬರ್ 23ರಂದು ಕಳ್ಳತನ ನಡೆದಿತ್ತು. ಪಾರ್ಶ್ವನಾಥ ಮತ್ತು ಮಹಾವೀರನ ವಿಗ್ರಹಗಳಿಗೆ ಮಾಡಿಸಲಾಗಿದ್ದ ಬೆಳ್ಳಿಯ ಪ್ರಭಾವಳಿ, ಕಿರೀಟ, ಕಿವಿಯೋಲೆ, ಕವಚ, ಅಲಂಕಾರಿಕ ಹೂವಿನ ಆಕೃತಿಗಳು ಕಾಣೆಯಾಗಿದ್ದವು.

ನಿತ್ಯದಂತೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ ಅರ್ಚಕ ದಿಲೀಪ್, ಬೆಳ್ಳಿ ಕವಚ, ಪ್ರಭಾವಳಿ ಕಳ್ಳತಕ್ಕೀಡಾಗಿರುವ ಬಗ್ಗೆ ದೇವಸ್ಥಾನ ಸಮಿತಿಯ ಗಮನಕ್ಕೆ ತಂದ. ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆಯ ಬಳಿಕ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನಿಖೆಗಿಳಿದ ಪೊಲೀಸರು:

ದೂರು ನೀಡಿದ ಅರ್ಚಕನ ಬಗ್ಗೆ ಸಂದೇಹಗೊಂಡ ಪೊಲೀಸರು, ಪಿಐ ಜೆ.ಆರ್. ನಿಕ್ಕಂ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಿದರು. ಆತನನ್ನು ಗುಜರಾತಿಗೆ ಕರೆದೊಯ್ದು ಆತನ ತಂದೆಯನ್ನೂ ತೀವ್ರ ವಿಚಾರಣೆಗೊಳಪಡಿಸಿದಾಗ ಕದ್ದಿದ್ದು ತಾವೆಂದು ಆರೋಪಿಗಳು ಒಪ್ಪಿಕೊಂಡರು.ಚಿಕಿತ್ಸೆಗೆ ಮಾಡಿದ ಸಾಲ:

ಅರ್ಚಕ ದಿಲೀಪ್‌ನ ತಂದೆ ಚತುರ್ ಭಾರಿಯಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸಿದ್ದಾರೆ. ಬಡವರಾಗಿದ್ದರಿಂದ ಚಿಕಿತ್ಸೆಗೆ ಬೇರೆ ದಾರಿ ಕಾಣದೇ ನೆರೆಹೊರೆಯವರ ಬಳಿ ಸಾಲ ಮಾಡಿದ್ದಾರೆ.

ಸಾಲ ಮರು ಪಾವತಿಗೆ ಜನರ ಒತ್ತಡ ಹೆಚ್ಚಾದಾಗ ಹಣ ಹೊಂದಿಸಲಾಗದ ದಿಲೀಪ್, ವಿಗ್ರಹ ಕದ್ದು ಮಾರಾಟದಿಂದ ಬರುವ ಹಣದಿಂದ ಸಾಲ ತೀರಿಸುವುದರ ಜೊತೆಗೆ, ಹೆಚ್ಚುವರಿ ಚಿಕಿತ್ಸೆಗೆ ಹಣ ಕೂಡಿಟ್ಟು, ಅಗತ್ಯ ವಸ್ತುಗಳನ್ನು ಕೊಳ್ಳಲು ಯೋಜಿಸಿದ್ದ ಎಂದು ತಿಳಿದು ಬಂದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry