ಬುಧವಾರ, ಜೂನ್ 23, 2021
30 °C

ಪರಿಹಾರ ಕಂಡುಹಿಡಿಯಲು ಸರ್ಕಾರ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಕೀಲರು, ಪೊಲೀಸರು ಮತ್ತು ಪತ್ರಕರ್ತರ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ತಿಳಿಗೊಳಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ~ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಆರೋಪಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಾರ್ಚ್ 2 ರಂದು ನಡೆಯಬಾರದ ಘಟನೆ ನಡೆದು ಹೋಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಿಕೊಳ್ಳಲು ಪರಸ್ಪರ ಸಂಧಾನ ಮಾಡಿಕೊಳ್ಳಲು ಒಪ್ಪದೇ ವಕೀಲರು ಪಟ್ಟು ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಸಂಧಾನದ ಮಾತುಕತೆ ನಡೆಸಬೇಕಿತ್ತು. ಆದರೆ ಈ ವಿಷಮ ಪರಿಸ್ಥಿತಿಗಿಂತಲೂ ಸರ್ಕಾರಕ್ಕೆ ಉಡುಪಿ - ಚಿಕ್ಕಮಗಳೂರು ಉಪ ಚುನಾವಣೆಯೇ ಮುಖ್ಯವಾಗಿದೆ~ ಎಂದು ಅವರು ವ್ಯಂಗ್ಯವಾಡಿದರು.

`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಕೀಲರು, ಪೊಲೀಸರು ಮತ್ತು ಪತ್ರಕರ್ತರಿಗೆ ತಮ್ಮದೇ ಆದ ಘನತೆಗಳಿವೆ. ಆದರೆ ಘಟನೆಯು ಈಗ ಪ್ರತಿಷ್ಠೆಯ ವಿಷಯವಾಗಿದೆ. ವಕೀಲರು, ಪೊಲೀಸರು ಮತ್ತು ಪತ್ರಕರ್ತರು ಒಂದೇ ವೇದಿಕೆಯಲ್ಲಿ ಕುಳಿತು ಈ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು. ಸರ್ಕಾರ ಘಟನೆಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಸಂಧಾನ ಕ್ರಮಕ್ಕೆ ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

`ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಮನವಿಗೇ ವಕೀಲರು ಸ್ಪಂದಿಸದಿರುವುದು ಸರಿಯಲ್ಲ. ಘಟನೆ ನಡೆದು ಒಂದು ವಾರಗಳೇ ಕಳೆದರೂ ವಕೀಲರು ಇನ್ನೂ ನ್ಯಾಯಾಲಯಗಳ ಕಲಾಪ ಬಹಿಷ್ಕಾರ ಮುಂದುವರಿಸಿದ್ದಾರೆ. ಇದು ರಾಜ್ಯದಲ್ಲಿನ ಸರ್ಕಾರದ ವೈಫಲ್ಯವನ್ನು ಎತ್ತಿತೋರುತ್ತಿದೆ. ತಮಿಳುನಾಡಿನಲ್ಲಿ ಇಂತಹ ಪರಿಸ್ಥಿತಿ ತಲೆದೋರಿದಾಗ ಅಲ್ಲಿನ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ಸೂಚನೆ ನೀಡಿದ ಉದಾಹರಣೆ ಇದೆ. ಅದರಂತೆಯೇ ರಾಜ್ಯ ಹೈಕೋರ್ಟ್ ಕೂಡಾ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ಸೂಚನೆ ನೀಡುವ ಬಗ್ಗೆ ಚಿಂತನೆ ನಡೆಸಬೇಕು~ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, `ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಲು ಅವಕಾಶವೇ ಇಲ್ಲ. ಬಿಕ್ಕಟ್ಟಿನ ಬಗ್ಗೆ ವಿರೋಧ ಪಕ್ಷಗಳೂ ಮಾತನಾಡುತ್ತಿಲ್ಲ. ಇದು ಶೋಚನೀಯ~ ಎಂದರು.

`ಘಟನೆಯ ನಂತರ ಮುಖ್ಯಮಂತ್ರಿಗಳು ವಿರೋಧ ಪಕ್ಷಗಳ ಸಭೆ ಕರೆದು ಪರಿಸ್ಥಿತಿ ತಿಳಿಗೊಳಿಸಲು ಚರ್ಚೆ ನಡೆಸಬೇಕಿತ್ತು. ಆದರೆ ಅವರು ಪರಿಸ್ಥಿತಿಯ ಗಂಭೀರತೆಯನ್ನು ಲಘುವಾಗಿ ತೆಗೆದುಕೊಂಡಂತಿದೆ. ನ್ಯಾಯಾಂಗ ತನಿಖೆಯ ಜೊತೆಗೆ ಸಂಧಾನದ ಮಾತುಕತೆಗೂ ಸರ್ಕಾರ ಮುಂದಾಗಬೇಕು~ ಎಂದು ಒತ್ತಾಯಿಸಿದರು.

`ಪತ್ರಕರ್ತರ ಪ್ರಕರಣಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ವಕೀಲರ ಧೋರಣೆ ಅವರ ವೃತ್ತಿಧರ್ಮವನ್ನೇ ಮೀರುವಂತಿದೆ. ವಕೀಲರ ಈ ಕ್ರಮ ನ್ಯಾಯ ಸಮ್ಮತವೂ ಅಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸಲು ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆ ಬಿಟ್ಟು ಪ್ರಯತ್ನಿಸಬೇಕು~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.