ಪರಿಹಾರ ಕಾಣದ ಹಾಕಿ ಬಿಕ್ಕಟ್ಟು

7

ಪರಿಹಾರ ಕಾಣದ ಹಾಕಿ ಬಿಕ್ಕಟ್ಟು

Published:
Updated:

ನವದೆಹಲಿ (ಪಿಟಿಐ): ಹಾಕಿ ಇಂಡಿಯಾ (ಎಚ್‌ಐ) ಹಾಗೂ ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ನಡುವೆ ತಾತ್ಕಾಲಿಕ ಅಧಿಕಾರ ಹಂಚಿಕೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಕೇಂದ್ರ ಕ್ರೀಡಾ ಸಚಿವರ ಪ್ರಯತ್ನ ವಿಫಲವಾಗಿದೆ.ಈ ಕುರಿತು ಎಚ್‌ಐ, ಐಎಚ್‌ಎಫ್, ಕೇಂದ್ರ ಸರ್ಕಾರ ಹಾಗೂ ಭಾರತ ಒಲಿಂಪಿಕ್ ಸಂಸ್ಥೆ (ಐಒಯು) ಅಧಿಕಾರಿಗಳ ಸಭೆ ಶುಕ್ರವಾರ ನಡೆಯಿತು. ಅಧಿಕಾರ ಹಂಚಿಕೆಗೆ ಉಭಯ ಹಾಕಿ ಸಂಸ್ಥೆಗಳು ನಿರಾಕರಿಸಿದವು. ಆದ್ದರಿಂದ ಐಒಯು 21 ದಿನಗಳ ಕಾಲವಾಕಾಶ ನೀಡಿದೆ.  ಈ ಅವಧಿಯಲ್ಲಿ ಎರಡೂ ಸಂಸ್ಥೆಗಳು ಒಮ್ಮತದ ನಿರ್ಧಾರಕ್ಕೆ ಬರಬೇಕು. ಇಲ್ಲವಾದರೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗುತ್ತದ ಎನ್ನುವ ಎಚ್ಚರಿಕೆಯನ್ನು ಸಹ ಒಲಿಂಪಿಕ್ಸ್ ಸಂಸ್ಥೆ ನೀಡಿದೆ.ಈ ಎರಡು ಸಂಸ್ಥೆಗಳ ನಡುವಿನ ಗುದ್ದಾಟದಿಂದ ಚಾಂಪಿಯನ್ಸ್ ಲೀಗ್‌ನ ಆತಿಥ್ಯ ಭಾರತದಿಂದ ಈಗಾಗಲೆ ಕೈ ತಪ್ಪಿದೆ. ಈಗ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳು ಸಹ ಭಾರತದಿಂದ ಕೈ ಜಾರುವ ಲಕ್ಷಣಗಳಿವೆ.

ಎರಡು ಸಂಸ್ಥೆಗಳ ನಡುವೆ ತಾತ್ಕಾಲಿಕ ಅಧಿಕಾರಿ ಹಂಚಿಕೆ ಮಾಡುವ ಪ್ರಸ್ತಾವಕ್ಕೆ ಒಮ್ಮತ ಮೂಡಿ ಬರಲಿಲ್ಲ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದರ್ ಬಾತ್ರಾ ಸಭೆಯ ನಂತರ ಹೇಳಿದರು.ಆದ್ದರಿಂದ ಸರ್ಕಾರ ಹತ್ತು ಅಂಶಗಳುಳ್ಳ ಅಜೆಂಡಾವನ್ನು ಈ ಸಂಸ್ಥೆಗಳ ಮುಂದಿಡಲು ಚಿಂತನೆ ನಡೆಸಿದೆ. ಈ ಮೂಲಕವಾದರೂ, ಸಮಸ್ಯೆಗೆ ಅಂತ್ಯ ಹಾಡಲು ಸರ್ಕಾರ ಮುಂದಾಗಿದೆ.  ಆದರೆ ಇವುಗಳನ್ನು ಸಂಸ್ಥೆಗಳು ಒಪ್ಪವುದು ಕಷ್ಟವಿದೆ.ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ವಿರುದ್ಧ ಐಎಚ್‌ಎಫ್ ಅಧ್ಯಕ್ಷ ಆರ್.ಕೆ. ಶೆಟ್ಟಿ ಕೆಂಡ ಕಾರಿದ್ದಾರೆ. ವಿನಾಕಾರಣ ದೇಶದ ಆಂತರಿಕ ವಿಚಾರದ ಬಗ್ಗೆ ಅದು ತಲೆ ಹಾಕುತ್ತಿದೆ ಎಂದು ದೂರಿದ್ದಾರೆ. 21 ದಿನಗಳ ಒಳಗೆ ಒಲಿಂಪಿಕ್ಸ್ ಸಂಸ್ಥೆಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎನ್ನುವ ವಿಷಯವನ್ನು ಸಹ ಅವರು ಹೇಳಿದರು.ಕೇಂದ್ರ ಕ್ರೀಡಾ ಸಚಿವರ ಜಂಟಿ ಕಾರ್ಯದರ್ಶಿ ರಾಹುಲ್ ಭಟ್ನಾಗರ್, ಐಎಚ್‌ಎಫ್‌ನ ಕೆ.ಪಿ.ಎಸ್. ಗಿಲ್, ಅಮೃತ್ ಬೋಸ್ ಹಾಕಿ ಇಂಡಿಯಾದ ರಾಜೀವ್ ಮೆಹ್ತಾ, ಒಲಿಂಪಿಕ್ಸ್ ಸಂಸ್ಥೆಯ ಆರ್.ಕೆ. ಆನಂದ್ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry