ಪರಿಹಾರ ಕೇಳಿದ ಜಿಎಂಆರ್

7
ಮಾಲ್ಡೀವ್ಸ್: ವಿಮಾನ ನಿಲ್ದಾಣ ಒಪ್ಪಂದ ರದ್ದು

ಪರಿಹಾರ ಕೇಳಿದ ಜಿಎಂಆರ್

Published:
Updated:

ಮಾಲೆ (ಪಿಟಿಐ): ಇಲ್ಲಿಯ ವಿಮಾನ ನಿಲ್ದಾಣ ನವೀಕರಣ ಒಪ್ಪಂದವನ್ನು ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್ ಸರ್ಕಾರ 80 ಕೋಟಿ ಡಾಲರ್ (ಸುಮಾರು 4,400 ಕೋಟಿ ರೂಪಾಯಿ) ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ಭಾರತೀಯ ಮೂಲದ ಕಂಪೆನಿ ಜಿಎಂಆರ್ ಇಟ್ಟಿದೆ.

ಜಿಎಂಆರ್ ಕಂಪೆನಿ ಕೇಳಿರುವ ಪರಿಹಾರದ ಮೊತ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಈ ಕುರಿತು `ಕಾನೂನುಬದ್ಧ ಲೆಕ್ಕಪರಿಶೋಧನೆ' ನಡೆಯಬೇಕಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.`ನಮ್ಮ ಪ್ರಾಥಮಿಕ ಅಂದಾಜಿನ ಪ್ರಕಾರ 4400 ಕೋಟಿ ರೂಪಾಯಿ ಪಾವತಿಸುವಂತೆ ಮಾಲ್ಡೀವ್ಸ್ ಸರ್ಕಾರಕ್ಕೆ ಪತ್ರ ಕಳುಹಿಸಿದ್ದೇವೆ. ವಿವಿಧ ಲೆಕ್ಕಾಚಾರಗಳ ತರುವಾಯವೇ ಪರಿಹಾರದ ನಿಖರ ಮೊತ್ತ ಗೊತ್ತಾಗಲಿದೆ' ಎಂದು ಜಿಎಂಆರ್ (ವಿಮಾನ ನಿಲ್ದಾಣ) ಕಂಪೆನಿ ಮುಖ್ಯ ಹಣಕಾಸು ಅಧಿಕಾರಿ ಸಿದ್ಧಾರ್ಥ ಕಪೂರ್ ತಿಳಿಸಿದರು.ಕಂಪೆನಿಯ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಾಲ್ಡೀವ್ಸ್ ಸರ್ಕಾರ ಈ ಕುರಿತು ಅಂತರ್‌ರಾಷ್ಟ್ರೀಯ ಸಂಸ್ಥೆಯೊಂದರಿಂದ ಲೆಕ್ಕಪರಿಶೋಧನೆ ನಡೆಯಬೇಕು ಎಂದಿದೆ. `ನಮ್ಮ ಅಂದಾಜಿನ ಪ್ರಕಾರ ಜಿಎಂಆರ್‌ಗೆ ಹೆಚ್ಚೆಂದರೆ 15 ಕೋಟಿ ಡಾಲರ್ (ಸುಮಾರು 825 ಕೋಟಿ ರೂಪಾಯಿ) ಮೊತ್ತ ಪಾವತಿಸಬೇಕಾಗುತ್ತದೆ' ಎಂದು ಮಾಲ್ಡೀವ್ಸ್ ಅಧ್ಯಕ್ಷ ಮಹಮ್ಮದ್ ವಹೀದ್ ಅವರ ಪತ್ರಿಕಾ ಕಾರ‌್ಯದರ್ಶಿ ಮಸೂದ್ ಇಮಾದ್ ತಿಳಿಸಿದರು.ಮಾಲ್ಡೀವ್ಸ್ ಸರ್ಕಾರ ಪ್ರಸ್ತಾಪಿಸಿರುವ `ಕಾನೂನುಬದ್ಧ ಲೆಕ್ಕಪರಿಶೋಧನೆ' ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಪೂರ್, `ನಮ್ಮ ಲೆಕ್ಕಪತ್ರಗಳೆಲ್ಲವೂ ಪಾರದರ್ಶಕವಾಗಿದ್ದು, ಒಪ್ಪಂದದ ಪ್ರಕಾರ ಇಂತಹ ಲೆಕ್ಕಪರಿಶೋಧನೆ ನಡೆಸುವಂತಿಲ್ಲ. ಆದರೂ ಕಾನೂನು ಪ್ರಕಾರ ನಡೆಯುವ ಲೆಕ್ಕಪರಿಶೋಧನೆಗೆ ನಮ್ಮ ಅಭ್ಯಂತರ ಇಲ್ಲ' ಎಂದರು.ಇಲ್ಲಿಯ ಇಬ್ರಾಹಿಂ ನಾಸಿರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಧುನೀಕರಣಗೊಳಿಸುವ ಸಂಬಂಧ ಜಿಎಂಆರ್ ಕಂಪೆನಿ ಜತೆ ಹಿಂದಿನ ಮಹಮ್ಮದ್ ನಶೀದ್ ನೇತೃತ್ವದ ಮಾಲ್ಡೀವ್ಸ್ ಸರ್ಕಾರ 2010ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತ್ತು. ಆದರೆ ಈಗಿನ ಸರ್ಕಾರ ಈ ಒಪ್ಪಂದವನ್ನು `ಏಕಪಕ್ಷೀಯ' ಎಂದು ಪರಿಗಣಿಸಿ ಅದನ್ನು ರದ್ದುಗೊಳಿಸುವ ನಿರ್ಣಯವನ್ನು ನ. 27ರಂದು ಕೈಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry