ಸೋಮವಾರ, ಏಪ್ರಿಲ್ 12, 2021
24 °C

ಪರಿಹಾರ ಗೊಂದಲ: ಸವಾಲ್-ಜವಾಬ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಿವೇಶನ ಹಂಚಿಕೆ ಪದ್ಧತಿ, ಆಸ್ತಿ ಮೌಲ್ಯಮಾಪನದ ಹೊಸ ದರಪಟ್ಟಿ(ಎಸ್‌ಆರ್), ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಜಮೀನು ಹಂಚಿಕೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಾಗಲಕೋಟೆ ಪುನರುತ್ಥಾನ ಯುವ ಹೋರಾಟ ವೇದಿಕೆ ಹಾಗೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಧ್ಯೆ ಜುಗಲ್‌ಬಂದಿ ಶುರುವಾಗಿದೆ! ಪ್ರಾಧಿಕಾರದ ಅಧಿಕಾರಿಗಳು ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹೋರಾಟ ವೇದಿಕೆ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿ ಭಾಷಣ ಮಾಡಿದ ಹೋರಾಟ ವೇದಿಕೆಯ ಮುಖಂಡರು ಬಿಟಿಡಿಎ ಅಧಿಕಾರಿಗಳು ಸಂತ್ರಸ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ; ನಿವೇಶನ ಹಾಗೂ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಹೋರಾಟಗಾರರು ತಹಸೀಲ್ದಾರರಿಗೆ ಮನವಿಪತ್ರ ಅರ್ಪಿಸಿದ ಒಂದು ಗಂಟೆಯೊಳಗೆ ಹೋರಾಟಗಾರರ ಮುಖಂಡರಾದ ಅಶೋಕ ಲಿಂಬಾವಳಿಯವರ ಎಲ್ಲ ಆರೋಪ, ಅನುಮಾನ ಮತ್ತು ಸವಾಲುಗಳಿಗೆ ಬಿಟಿಡಿಎ ಅಧ್ಯಕ್ಷ ಲಿಂಗರಾಜ ವಾಲಿ ಲಿಖಿತ ಉತ್ತರವನ್ನು ‘ಪ್ರಜಾವಾಣಿ’ಗೆ ಕಳುಹಿಸಿದ್ದಾರೆ.ಹೋರಾಟಗಾರರು ಕರಪತ್ರದಲ್ಲಿ ನಮೂದಿಸಿದ್ದ ಹಾಗೂ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರತಿಯೊಂದು ವಿಷಯಗಳ ಬಗ್ಗೆಯೂ ಬಿಟಿಡಿಎ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಪರಿಹಾರ ವಿತರಣೆ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ನಗರದಲ್ಲಿ ಹಲವಾರು ದಿನಗಳಿಂದ ಅಂತೆಕಂತೆಗಳು ಕೇಳಿಬರುತ್ತಿದ್ದು, ಮುಳುಗಡೆ ಸಂತ್ರಸ್ತರನ್ನು ಗೊಂದಲ್ಲಿ ಮುಳುಗಿಸಿವೆ. ಹೋರಾಟ ವೇದಿಕೆಯ ಬೇಡಿಕೆಗಳು, ಆರೋಪಗಳು ಹಾಗೂ ಅದಕ್ಕೆ ಬಿಟಿಡಿಎ ನೀಡಿದ ಉತ್ತರ, ಸ್ಪಷ್ಟನೆಗಳು ಈ ಕೆಳಗಿನಂತಿವೆ.ಸವಾಲ್-ಜವಾಬ್

* ಹೋರಾಟ ವೇದಿಕೆ: 521ರಿಂದ 523 ಕೌಂಟರ್ ಅಥವಾ 100 ಮೀಟರ ವ್ಯಾಪ್ತಿಯಲ್ಲಿನ ಸಂತ್ರಸ್ತರಿಗೆ 2007ರ ಎಸ್.ಆರ್.(ದರಪಟ್ಟಿ) ಬದಲಾಗಿ 2011ಕ್ಕೆ ಅನ್ವಯಿಸುವಂತಹ ಹೊಸ ದರಪಟ್ಟಿ ನಿಗದಿಪಡಿಸಬೇಕು. *ಬಿಟಿಡಿಎ: ಭೂಸ್ವಾಧೀನ ನಿಯಮಾವಳಿ ಪ್ರಕಾರ 4(1) ಅಧಿಸೂಚನೆ ಪ್ರಕಟಗೊಂಡ ವರ್ಷದ ದರ ಪಟ್ಟಿ(ಎಸ್.ಆರ್)ಯಂತೆ ಕಟ್ಟಡಗಳ ಮೌಲ್ಯ ಮಾಪನ ನಡೆಸಿ ಐತೀರ್ಪುಗೊಂಡ ಅವಧಿಯವರೆಗೆ ಪ್ರತಿಶತ 12ರಷ್ಟು ಹೆಚ್ಚುವರಿ ಮಾರುಕಟ್ಟೆ ಬೆಲೆ ಲೆಕ್ಕಹಾಕಿ ಪರಿಹಾರಧ ವಿತರಿಸಲಾಗುತ್ತದೆ. 2011ರ ದರಪಟ್ಟಿ ಪರಿಗಣಿಸಲು ಅವಕಾಶವಿರುವುದಿಲ್ಲ. ಇದು ಸಾಮಾನ್ಯೈತೀರ್ಪು(ಜನರಲ್ ಅವಾರ್ಡ್) ಆಗಿರುವುದರಿಂದ ಆಸ್ತಿ ಪರಿಹಾರ ಮೌಲ್ಯ ಕಡಿಮೆ ಎನಿಸಿದರೆ ಹೆಚ್ಚಿನ ಮೊತ್ತ ಕೋರಿ 12(2) ನೋಟಿಸ್ ಸ್ವೀಕರಿಸಿದ ದಿನದಿಂದ 90 ದಿನದೊಳಗೆ ನ್ಯಾಯಾಲಯಕ್ಕೆ ಮೊರ ಹೋಗಬಹುದು.*ಹೋರಾಟ ವೇದಿಕೆ: ‘ಎ’ ಸ್ಕೀಂ ಅಡಿಯಲ್ಲಿ 521 ಕೌಂಟರ್‌ನಲ್ಲಿ ಸಂತ್ರಸ್ತರಿಗೆ ನೀಡಿರುವ ನಿವೇಶನ ಹಂಚಿಕೆ ಪದ್ಧತಿಯನ್ನೇ ‘ಬಿ’ ಸ್ಕೀಂ ಅಡಿಯಲ್ಲಿನ ಸಂತ್ರಸ್ತರಿಗೂ ಅನ್ವಯಿಸಬೇಕು(ಇಬ್ಬರು ವಯಸ್ಕ ಮಕ್ಕಳು ಮತ್ತು ಬಾಡಿಗೆದಾರರಿಗೂ ನಿವೇಶನ ನೀಡಬೇಕು).*ಬಿಟಿಡಿಎ: ‘ಬಿ’ ಸ್ಕೀಂ ಇನ್ನೂ ಜಾರಿಗೆ ಬಂದಿಲ್ಲ. ನಿವೇಶನಗಳ ಹಂಚಿಕೆಯಲ್ಲೂ ಹಿಂದೆ ನೀಡಿದ ಸೌಲಭ್ಯಗಳನ್ನೇ ಮುಂದುವರಿಸಲಾಗುತ್ತದೆ. ಇದು ನಿವೇಶನ ಹಂಚಿಕೆಯ ಎರಡನೇ ಹಂತವಾಗಿರುವುದರಿಂದ ಪುನಃ ಸರ್ಕಾರದ ಒಪ್ಪಿಗೆ ಪಡೆಯುವುದು ಅತ್ಯವಶ್ಯಕ. ಆದ್ದರಿಂದ ಪ್ರಾಧಿಕಾರದಿಂದ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಇದರ ಹೊರತಾಗಿ ಬಿಟಿಡಿಎ ತಾನೇ ಏನನ್ನೂ ಬದಲಾವಣೆ ಮಾಡುವ ಅಧಿಕಾರ ಹೊಂದಿಲ್ಲ.*ಹೋರಾಟ ವೇದಿಕೆ: ಚೆಕ್ ವಿತರಣೆ ನಿಲ್ಲಿಸಿ ‘ಬಿ’ ಸ್ಕೀಂ ಅಡಿಯಲ್ಲಿ ಬರುವಂತಹ ಸಂತ್ರಸ್ತರಿಗೆ 4(1) ನೋಟಿಸ್ ಜಾರಿಗೊಳಿಸಿ ಪರಿಹಾರ ವಿತರಿಸಬೇಕು.*ಬಿಟಿಡಿಎ: ‘ಬಿ’ ಸ್ಕೀಂ ಇನ್ನೂ ಜಾರಿಗೆ ಬಂದಿಲ್ಲ. ಇದರ ಬಗ್ಗೆ ತಿಳಿಯದೇ ಹೇಳಿಕೆ ನೀಡುತ್ತಿರುವ ಹೋರಾಟ ವೇದಿಕೆಯವರು ನಂಬಿಕೆಗೆ ಅರ್ಹರಾಗುವುದಿಲ್ಲ. ‘ಎ’ ಸ್ಕೀಂ ನಿಯಮಾನುಸಾರವೇ ಪುನರ್ವಸತಿ ಪ್ರಕ್ರಿಯೆ ನಡೆಯುತ್ತದೆ.*ಹೋರಾಟ ವೇದಿಕೆ: ಸಂತ್ರಸ್ತರಿಗೆ ಕಾಯ್ದಿರಿಸಿದ ಜಾಗೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ 300 ಎಕರೆ, ಉದ್ಯಮಿ ಆದಿಕೇಶವಲುಗೆ 100 ಎಕರೆ ನೀಡಿರುವುದನ್ನು ಹಾಗೂ ಇದೇ ರೀತಿ ಬೇಕಾಬಿಟ್ಟಿ ಹಂಚಿಕೆಯಾದ ಜಮೀನು ಹಿಂದಕ್ಕೆ ಪಡೆಯಬೇಕು.*ಬಿಟಿಡಿಎ: ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ನಗರದ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ. ಇದರಿಂದ ಶೈಕ್ಷಣಿಕ ಹಾಗೂ ವ್ಯವಹಾರಿಕವಾಗಿ ನಗರಕ್ಕೆ ಅನುಕೂಲವಾಗುತ್ತದೆ. ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿರುವುದು ಸೂಕ್ತವಾಗಿದೆ. ಇನ್ನು ಕೈಗಾರಿಕಾ ಘಟಕಗಳಿಗಾಗಿ ಕಾಯ್ದಿರಿಸಿದ ಜಮೀನಿನಲ್ಲಿ ಹಿನ್ನೀರಿನಿಂದ ಬಾಧಿತ ಕೈಗಾರಿಕಾ ಘಟಕಗಳಿಗೆ ಅಗತ್ಯವಿರುವಷ್ಟು ಪ್ರಾಧಿಕಾರದಲ್ಲಿ ಉಳಿಸಿಕೊಂಡು ಹೆಚ್ಚಿನ 257 ಎಕರೆ ಜಮೀನನ್ನು 1999ರಲ್ಲಿ ಬೆಳಗಾವಿಯ ಕೆಐಎಡಿಬಿಗೆ ನೀಡಲಾಗಿದೆ. ಕೆಐಎಡಿಬಿ ಸರ್ಕಾರಿ ಸಂಸ್ಥೆಯಾಗಿದ್ದು, ಅದಕ್ಕೆ ಹಸ್ತಾಂತರಿಸಲಾದ ಜಮೀನು ಹಂಚಿಕೆಯ ಕಾರ್ಯ ಅದರ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.