ಗುರುವಾರ , ಮೇ 13, 2021
39 °C

ಪರಿಹಾರ ನಿಧಿ: ಹೆಚ್ಚಿನ ನೆರವಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ತಾಲ್ಲೂಕಿನಲ್ಲಿ  ಮಳೆ-ಗಾಳಿಗೆ ತೀವ್ರ ನಷ್ಟಕ್ಕೊಳಗಾದ  ರೈತರಿಗೆ ಮುಖ್ಯಮಂತ್ರಿ ಪರಿಹಾರದ ನಿಧಿಯಿಂದ ಹೆಚ್ಚಿನ ನೆರವು ನೀಡುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.ತಾಲ್ಲೂಕಿನ ಮುಗ್ಗಿದರಾಗಿಹಳ್ಳಿ, ಬಿಳಿಚೋಡು ಮುಂತಾದ ಗ್ರಾಮಗಳಲ್ಲಿ   ಹಾನಿಗೊಳಗಾದ ಬಾಳೆತೋಟಗಳಿಗೆ ಮಂಗಳವಾರ ಭೇಟಿ ನೀಡಿ ವೀಕ್ಷಿಸಿದ  ಜಿಲ್ಲಾಧಿಕಾರಿ, ಸಂತ್ರಸ್ತರಿಗೆ ಸ್ಥಳದಲ್ಲೇ ಪರಿಹಾರ ಚೆಕ್ ವಿತರಿಸಿದರು.

ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತ ಅತ್ಯಂತ ಕಡಿಮೆಯಾಗಿದ್ದು, ಪ್ರತಿ ಎಕರೆಗೆ ರೂ 1 ಲಕ್ಷ ಪರಿಹಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ರೈತರು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದರು.ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಪಟ್ಟಣಶೆಟ್ಟಿ, ಬಾಳೆತೋಟಗಳು ಹಾನಿಯಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಮುಗ್ಗಿದರಾಗಿಹಳ್ಳಿ, ಬಿಳಿಚೋಡು, ಹಾಗೂ ಹೆಮ್ಮನಬೇತೂರು ಗ್ರಾಮದ 11 ರೈತರಿಗೆ ಜಿಲ್ಲಾಡಳಿತದ ವತಿಯಿಂದ ರೂ 71 ಸಾವಿರ ಪರಿಹಾರ ವಿತರಿಸಲಾಗಿದೆ. ಹೆಚ್ಚಿನ ಪರಿಹಾರ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಿಡಿಲಿನಿಂದ ಎರಡು ಎಮ್ಮೆಗಳು ಮೃತಪಟ್ಟ ಕಸ್ತೂರಿಪುರ ಗ್ರಾಮದ ಹನುಮಂತಪ್ಪ  ಎಂಬ ರೈತರಿಗೆ ರೂ 32,800 ಹಾಗೂ ಗೋಕುಲಹಟ್ಟಿ ಗ್ರಾಮದ ಧರಿಯಾನಾಯ್ಕ ಎಂಬುವವರಿಗೆ ಸೇರಿದ ಒಂದು ಎತ್ತು ಮೃತಪಟ್ಟ ಕಾರಣ ಅವರಿಗೆ ರೂ 16,400 ಪರಿಹಾರವನ್ನು ವಿತರಿಸಲಾಯಿತು.ಗೋಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ತಾಲ್ಲೂಕಿನ ಗುರುಸಿದ್ದಾಪುರದ ಗೋಶಾಲೆಗ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗೋಶಾಲೆಯಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡಬೇಕು, ಬಡವರಿಗೆ ಸೇರಿದ ಜಾನುವಾರುಗಳಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದರು.ಪಲ್ಲಾಗಟ್ಟೆ, ಗುರುಸಿದ್ದಾಪುರ, ಬಸವನಕೋಟೆ ಹಾಗೂ ಬಿಳಿಚೋಡು ಗ್ರಾಮಗಳಿಗೆ ಭೇಟಿ ನೀಡಿದ್ದ ಪಟ್ಟಣಶೆಟ್ಟಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಿ ಎಂದು  ಅಧಿಕಾರಿಗಳಿಗೆ ಸಲಹೆ ನೀಡಿದರು.ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿ ಮಹೇಶ್ ಗೌಡ, ತಹಶೀಲ್ದಾರ್ ಎಚ್.ಪಿ. ನಾಗರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್, ಪಿಆರ್‌ಇಡಿ ಉಪ ವಿಭಾಗದ ಎಇಇ ಎನ್. ಲಿಂಗರಾಜ್, ಎಡಿಎ ಎಸ್. ಮಾರುತಿ, ಡಾ.ಕೇಶವಮೂರ್ತಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.