ಶನಿವಾರ, ಮೇ 21, 2022
25 °C

ಪರಿಹಾರ ಭರವಸೆ: ಧರಣಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲಾಧಿಕಾರಿಗಳು ಜಿಲ್ಲಾ ಆಸ್ಪತ್ರೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಎರಡು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಅಂತ್ಯಗೊಳಿಸಿದರು.ಜಿಲ್ಲಾ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು, ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಆಸ್ಪತ್ರೆ ಎದುರು ಸೋಮವಾರದಿಂದ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರಲ್ಲದೇ ಮನವಿ ಸ್ವೀಕಾರಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದಿದ್ದರು.ಪ್ರತಿಭಟನಾಕಾರರ ಪಟ್ಟಿಗೆ ಮಣಿದ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್ ಅವರು, ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರಲ್ಲದೇ, ಸಮಸ್ಯೆಗೆ ಸಾಧ್ಯವಾದಷ್ಟು ಬೇಗ ಪರಿಹಾರ ಒದಗಿಸಲು ಪ್ರಯತ್ನಿ ಸಲಾಗುವುದು ಎಂದು ಭರವಸೆ ನೀಡಿದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಒಂದು ದಿನದ ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿರುವುದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ವಿರುದ್ಧವೇ ಘೋಷಣೆಗಳನ್ನು ಕೂಗಿದರು. ಆಗ ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು, ಇದು ಆಸ್ಪತ್ರೆ ಆವರಣ ಇಲ್ಲಿ ಈ ರೀತಿ ಕೂಗಾಟ ನಡೆಸುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ನಿಮ್ಮ ಏನೇ ಬೇಡಿಕೆಗಳಿದ್ದರೂ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ನೀಡಬೇಕು. ಈ ರೀತಿ ಬೇರೆ ಯವರಿಗೆ ತೊಂದರೆಯಾಗುವಂತೆ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಪ್ರತಿಭಟನಾಕಾರರಿಗೆ ಕಿವಿಮಾತು ಹೇಳಿದರು.ಮನವಿ ಸ್ವೀಕರಿಸಿದ ನಂತರ ಜಿಲ್ಲಾ ಆಸ್ಪತ್ರೆಯೊಳಗೆ ತೆರಳಿ ಪರಿಶೀಲನೆ ನಡೆಸಿದಲ್ಲದೇ, ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಕೆ.ಚನ್ನಬಸಪ್ಪ, ತಹಶೀಲ್ದಾರ್ ಶಿವಲಿಂಗ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸ ಡಾ.ಮಾಶಾಳ, ಎಸ್.ಎಫ್. ಎನ್.ಗಾಜೀಗೌಡರ   ಹಾಜರಿದ್ದರು.ಮುಂದುವರೆದಿದ್ದ ಪ್ರತಿಭಟನೆ: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದ ಹಾವಳಿ ಉಲ್ಬಣಗೊಂಡಿದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಆಸ್ಪತ್ರೆಗೆ ಹೆಸರಿಗೆ ಅಷ್ಟೇ ಆಸ್ಪತ್ರೆಯಾಗಿದೆ. ಅದರಿಂದ ಜನರಿಗೆ ಯಾವುದೇ ಉಪಯೋಗವಾಗು ತ್ತಿಲ್ಲ ಎಂದು ಆರೋಪಿಸಿ ಸೋಮವಾರ ದಿಂದ ಪ್ರತಿಭಟನೆ ಆರಂಭಿಸಿದ್ದರು.ನಿಯಮದ ಪ್ರಕಾರ 100 ಹಾಸಿಗೆಗಳ ಆಸ್ಪತ್ರೆಗೆ 16ಜನ ಕಾರ್ಮಿಕರ ಅವಶ್ಯಕತೆಯಿದೆ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ 250 ಹಾಸಿಗೆ ಗಳಿದ್ದರೂ ಕೇವಲ 17ಕಾರ್ಮಿಕರು ಮಾತ್ರ ಇದ್ದಾರೆ. ಇದರಿಂದ ಆಸ್ಪತ್ರೆ ಸ್ವಚ್ಛವಾಗಿಡಲು ಸಾಧ್ಯವಾಗುತ್ತಿಲ್ಲ. ಟೆಂಡರ್‌ದಾರರು ಆಸ್ಪತ್ರೆಗೆ ಪೂರೈಸುವ ಸಾಮಗ್ರಿಗಳಲ್ಲಿ ಅವ್ಯವಹಾರ ನಡೆ ಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಜಯಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಷ ಬೆಂಗಳೂರ, ಪ್ರಧಾನ ಕಾರ್ಯದರ್ಶಿ ಶಾಹೀದ್ ದೇವಿಹೊಸೂರ, ಸತೀಶ ಮಡಿವಾಳರ, ಶಿವಪುತ್ರಪ್ಪ ಕಳಸದ, ಸಾಧಿಕ ಪೈ, ರಮೇಶ ಜಾಲಿಹಾಳ, ಚಂದ್ರುಯ ಪುಟ್ಟಪ್ಪನವರ, ಸಿದ್ದು ಮುಂಡಾಸದ, ರವಿ ಕೊಂಡಿ, ರಘು ಭಜಂತ್ರಿ ಗೌರಮ್ಮ ಮಂತ್ರಿ ಇತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.