ಪರಿ ಚಿತ್ರತಂಡದ ತಾಂಡಾ ತಿರುಗಾಟ

7

ಪರಿ ಚಿತ್ರತಂಡದ ತಾಂಡಾ ತಿರುಗಾಟ

Published:
Updated:
ಪರಿ ಚಿತ್ರತಂಡದ ತಾಂಡಾ ತಿರುಗಾಟ

ಬೆಣ್ಣೆದೋಸೆಗೆ ಫೇಮಸ್ಸಾದ ಮಧ್ಯಕರ್ನಾಟಕದಲ್ಲಿ ‘ಪರಿ’ ಸಿನಿಮಾ ತಂಡ ಕಳೆದೆರೆಡು ವಾರದಿಂದ ಚಿತ್ರೀಕರಣದಲ್ಲಿ ನಿರತವಾಗಿದೆ. ದಾವಣಗೆರೆ ಸುತ್ತಮುತ್ತಲಿನ ತಾಂಡಾಗಳ ಸುಂದರ ಪರಿಸರದಲ್ಲಿ ಒಂದು ಹಾಡು, ಫೈಟ್ ದೃಶ್ಯಗಳನ್ನು ಚಿತ್ರತಂಡವು ಚಿತ್ರೀಕರಿಸಿದೆ.ಲಂಬಾಣಿ ತಾಂಡಾ ಮತ್ತು ಲಿಕ್ಕರ್ ಮಾಫಿಯಾ ಸಂಬಂಧಿತ ಲವ್ ಸ್ಟೋರಿಯ ಕಥಾ ಹಂದರ ಇರುವ ಈ ಚಿತ್ರಕ್ಕೆ ದಾವಣಗೆರೆಯವರೇ ಆದ ಸಂಪಣ್ಣ ಮುತಾಲಿಕ್ ಅವರ ‘ಭಾರಧ್ವಾಜ್’ ಕಾದಂಬರಿಯೇ ಆಧಾರ. ಎಂ.ಎಸ್.ಸತ್ಯು ಅವರ ಶಿಷ್ಯ ಸುಧೀರ್ ಚೊಚ್ಚಲ ನಿರ್ದೇಶನದಲ್ಲಿ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿನ ಮೂವರು ನಾಯಕರ ಪೈಕಿ ಸರ್ದಾರ್ ಸತ್ಯ, ರಾಕೇಶ್, ನಾಯಕ ನಟಿಯರಾದ ಸ್ಮಿತಾ, ಹರ್ಷಿಕಾ ಪೂಣಚ್ಚ ಮತ್ತಿತರ ಕಲಾವಿದರು ಜಿಲ್ಲೆಯ ಶಿವಪುರ ಹಾಗೂ ಶಾಂತಿನಗರ ತಾಂಡಾಗಳಲ್ಲಿ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾದರು.‘ಆಷಾಢ ಕಳೆದೈತಿ, ಶ್ರಾವಣ ಬಂದೈತಿ..’ ಎಂಬ ಚಿತ್ರಗೀತೆಗೆ ತಾಂಡಾಗಳಲ್ಲಿ ಹೆಜ್ಜೆ ಹಾಕಿದ ಕಲಾವಿದರು ಜೋಕಾಲಿ ಜೀಕಿದರು. ಡೊಳ್ಳು, ಕೋಲಾಟ, ಕೀಲುಕುದುರೆ ಇನ್ನಿತರೆ ಜಾನಪದ ತಂಡಗಳ ಸಾಥ್ ಕೂಡ ಇತ್ತು. ನೆರೆದ ತಾಂಡಾ ಜನ ಕೂಡ ತಮ್ಮೂರಿಗೆ ಬಂದ ಚಿತ್ರ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಂತಸಪಟ್ಟರು.ನಾಗ್‌ಕಿರಣ್, ಶರತ್ ಲೋಹಿತಾಶ್ವ, ಶ್ರೀನಿವಾಸ ಪ್ರಭು, ವೀಣಾ ನಾಯರ್, ಸುದರ್ಶನೋ ಚಟರ್ಜಿ, ನಿರ್ದೇಶಕ ಸುಧೀರ್, ವಿದ್ಯಾಧರ್ ಪಾಲ್ಗೊಂಡಿದ್ದಾರೆ. ಮಾರ್ಚ್ 26ರಿಂದ ಜಿಲ್ಲೆಯಲ್ಲಿ ಚಿತ್ರೀಕರಣ ಆರಂಭಿಸಿರುವ ತಂಡ, ದುಗ್ಗಾವತಿ ಬಳಿ ಫೈಟ್ ಮಾಸ್ಟರ್ ಮಾಸ್ ಮಾದ ಕೈಚಳಕದಲ್ಲಿ ಒಂದು ಫೈಟಿಂಗ್ ದೃಶ್ಯ ಚಿತ್ರೀಕರಿಸಿದೆ. ಇನ್ನೂ ಎರಡು ಹಾಡು ಹಾಗೂ ಕೆಲವು ಸಾಹಸ ದೃಶ್ಯಗಳನ್ನು ಸೆರೆ ಹಿಡಿಯಲು ತಂಡ ಕಾದಿದೆ. ದಾವಣಗೆರೆಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆ.ಚಂದ್ರು ಸಿಂಧೋಗಿ, ಅರುಣ್ ತುಮಟಿ, ಡಿವಿಜಾ, ನಿತ್ಯಾನಂದ, ರಾಮಕೃಷ್ಣ ಭಟ್, ಎಂ.ಸಿ.ಗೌಡ  ಎಲ್ಲರೂ ಬಿಡಿಟಿ ಕಾಲೇಜಿನ ಹಳೆ ವಿದ್ಯಾರ್ಥಿಗಳೇ. ಇವರೆಲ್ಲಾ  ‘ಪರಿ’ಯ ಮೇಲೆ ಬಂಡವಾಳ ಹೂಡಿದ್ದಾರೆ. ಇವರೆಲ್ಲರ ಜೊತೆಗೆ  ಸಂಡೂರಿನ ನಿಂಗಪ್ಪ ಕೂಡ ಕೈಜೋಡಿಸಿದ್ದಾರೆ.

ಹಿಂದಿ ಚಿತ್ರರಂಗದ ಖ್ಯಾತ ಗಾಯಕಿ ಉಷಾ ಉತ್ತುಪ್ ಈ ಚಿತ್ರಕ್ಕೆ ಹಾಡೊಂದನ್ನು ಹಾಡಿರುವುದಲ್ಲದೆ ಅಭಿನಯಿಸಿಯೂ ಇದ್ದಾರೆ. ಲಂಬಾಣಿ ತಾಂಡಾದಿಂದ ಆರಂಭವಾಗಿ ಹೈಟೆಕ್ ಸಿಟಿಯಲ್ಲಿ ಅಂತ್ಯ ಕಾಣುವ ಸಿನಿಮಾ ‘ಪರಿ’ಗೆ ಇಲ್ಲಿನ ಬಿಸಿಲಿನ ಚುರುಕೂ ಮುಟ್ಟಿದೆ.ಅನಂತ್ ಅರಸ್ ಛಾಯಾಗ್ರಹಣ, ವೀರ ಸಮರ್ಥ್ ಸಂಗೀತ, ವಿದ್ಯಾಧರ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ರಾಕೇಶ್, ನಾಗಾಕಿರಣ್, ನಿವೇದಿತಾ, ಹರ್ಷಿಕಾ ಪೂಣಚ್ಚ, ಮಸೂದ್ ಅಖ್ತರ್, ಉಷಾ ಉತ್ತುಪ್, ಶರತ್ ಲೋಹಿತಾಶ್ವಾ, ಸರ್ದಾರ್ ಸತ್ಯ, ವಿಕ್ರಮ ಉದಯಕುಮಾರ್, ಶ್ರೀನಿವಾಸ ಪ್ರಭು, ಸುದರ್ಶನೊ ಚಟರ್ಜಿ, ಮಂಡ್ಯ ರಮೇಶ್, ಬ್ಯಾಂಕ್ ಜನಾರ್ದನ್, ವೀಣಾ ನಾಯರ್, ವಿನಯಾ ಪ್ರಕಾಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry