ಪರೀಕ್ಷಾ ಅಕ್ರಮಕ್ಕೆ ಸಹಕರಿಸುವ ಶಿಕ್ಷಕರಿಗೆ ಶಿಕ್ಷೆ

7

ಪರೀಕ್ಷಾ ಅಕ್ರಮಕ್ಕೆ ಸಹಕರಿಸುವ ಶಿಕ್ಷಕರಿಗೆ ಶಿಕ್ಷೆ

Published:
Updated:
ಪರೀಕ್ಷಾ ಅಕ್ರಮಕ್ಕೆ ಸಹಕರಿಸುವ ಶಿಕ್ಷಕರಿಗೆ ಶಿಕ್ಷೆ

ಹಾವೇರಿ: ಜಿಲ್ಲೆಯಾದ್ಯಂತ ಏಪ್ರಿಲ್ 1ರಿಂದ 13ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷಾ ಅಕ್ರಮಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲುಬೇಕೆಂದು ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ನಕಲು ಆಗದಂತೆ ಹಾಗೂ ಶಾಂತಿ ಸುವ್ಯವಸ್ಥಿತವಾಗಿ ನಡೆಯುವಂತೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಡಿಕೊಳ್ಳ ಬೇಕು. ನಕಲು ಮಾಡುವ ವಿದ್ಯಾರ್ಥಿ ಗಳು ಹಾಗೂ ಅದಕ್ಕೆ ಸಹಕರಿಸುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪರೀಕ್ಷೆ ಕೇಂದ್ರಗಳ ಸುತ್ತಲು 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ಗುಂಪುಗಳ ಪ್ರವೇಶ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ಪ್ರದೇಶದಲ್ಲಿ ಬರುವ ಝರಾಕ್ಸ್ ಹಾಗೂ ಟೈಪಿಂಗ್ ಕೇಂದ್ರಗಳನ್ನು ಮುಚ್ಚಬೇಕು ಹಾಗೂ ಮೊಬೈಲ್ ಬಳಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಕೊಡ್ಲಿ, ಜಿಲ್ಲೆಯಲ್ಲಿ ಒಟ್ಟು 22,232 ವಿದ್ಯಾರ್ಥಿಗಳು ಹಾಜರಾಗಲಿದ್ದು, ಇದರಲ್ಲಿ 11,371 ಗಂಡು ಮಕ್ಕಳು ಹಾಗೂ 10,861 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ಒಟ್ಟು 334 ಪ್ರೌಢಶಾಲೆಗಳಿದ್ದು, 80 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 24 ಜನ ಮಾರ್ಗಾಧಿಕಾರಿಗಳು ಹಾಗೂ 160 ಸಿಟಿಂಗ್ ಸ್ಕ್ವಾಡ್ ಳನ್ನು ನೇಮಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದ ಅವರು, ಪರೀಕ್ಷಾ ಫಲಿತಾಂಶ ಸುಧಾರಣೆಗೆ ಹತ್ತು ಹಲವು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇದರಿಂದ ಕಳೆದ ಸಾಲಿಗಿಂತ ಈ ವರ್ಷ ಪರೀಕ್ಷಾ ಫಲಿತಾಂಶ ಉತ್ತಮವಾಗಲಿದೆ ಎಂಬ ವಿಶ್ವಾಸವಿದೆ ಎಂದರು.ಪರೀಕ್ಷಾ ಅಕ್ರಮ ತಡೆಯಲು ಒಟ್ಟು 7 ವಿಚಕ್ಷಣಾ ದಳಗಳನ್ನು ನೇಮಕ ಮಾಡಲಾಗಿದೆ. ಅವುಗಳಿಗೆ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಉಪಸಮನ್ವಯಾ ಧಿಕಾರಿ ಹರೀಶ ಗಾಂವಕರ, ಡಯಟ್ ಪ್ರಾಚಾರ್ಯ ಎ.ಎಂ. ಅಕ್ಕಿ, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳು ಹಾಗೂ ಏಳೂ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವಿಚಕ್ಷಣಾ ದಳಗಳ ಮುಖ್ಯಸ್ಥರಾಗಿದ್ದಾರೆ ಎಂದು ಹೇಳಿದರು.ಜಿಲ್ಲೆಯಲ್ಲಿ 11 ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ. ರಾಣೆಬೆನ್ನೂರಿನ ಡಾ. ಬಿ.ಆರ್. ಅಂಬೇಡ್ಕರ ಪ್ರೌಢಶಾಲೆ, ನಗರಸಭಾ ಬಾಲಕರ ಪ್ರೌಢಶಾಲೆ, ತುಮ್ಮಿನಕಟ್ಟಿಯ ಸಂಗಮೇಶ್ವರ ಪದವಿಪೂರ್ವ ಕಾಲೇಜು, ಗುಡಗೂರಿನ ಕಮಲಮ್ಮ ಪ್ರೌಢಶಾಲೆ, ಹಾನಗಲ್ಲ ತಾಲ್ಲೂಕಿನ ಹೇರೂರ ಕಲಕೇರಿಯ ಬಸವೇಶ್ವರ ಪ್ರೌಢಶಾಲೆ, ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನ ಎಸ್.ಕೆ.ವಿ. ಪ್ರೌಢಶಾಲೆ, ಸವಣೂರು ತಾಲ್ಲೂಕಿನ ಹೂವಿನಶಿಗ್ಲಿಯ ಸರ್ಕಾರಿ ಪ್ರೌಢಶಾಲೆ, ಸವಣೂರಿನ ಸರ್ಕಾರಿ ಮಜೀದ್ ಪದವಿ ಪೂರ್ವ ಕಾಲೇಜು, ಹಿರೇಕೆರೂರಿನ ಡಿ.ಆರ್.ಪಿ. ಪ್ರೌಢಶಾಲೆ, ಸಿ.ಎ.ಎಸ್. ಬಾಲಕಿಯರ ಪ್ರೌಢಶಾಲೆ ಹಿರೇಕೆರೂರು ಹಾಗೂ ಹಾವೇರಿಯ ಸೆಂಟ್ ಆ್ಯನ್ಸ್ ಪ್ರೌಢಶಾಲೆ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾಗಿವೆ ಎಂದರುಪರೀಕ್ಷಾ ವೇಳಾ ಪಟ್ಟಿ: ಏಪ್ರಿಲ್ 1ರಿಂದ 13ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿದ್ದು, ಪರೀಕ್ಷಾ ವೇಳೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಇರುತ್ತದೆ. ಏಪ್ರಿಲ್ 1ರಂದು ಪ್ರಥಮ ಭಾಷೆ ಕನ್ನಡ, ಉರ್ದು, ಇಂಗ್ಲಿಷ್, ಏ. 5ರಂದು ಗಣಿತ, ಏ. 7ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಏ. 8ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಸಂಸ್ಕೃತ, ಏ.11ರಂದು ವಿಜ್ಞಾನ ಹಾಗೂ ಏ.13ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ಜರುಗಲಿವೆ ಎಂದರು.ಸಭೆಯಲ್ಲಿ ಸಿಪಿಐ ಎಂ.ಮುರುಗೇಂದ್ರಯ್ಯ, ವಿಷಯ ಪರಿವೀಕ್ಷಕ ಎಸ್.ಜಿ. ಕೋಟೆ, ಆರ್.ಎನ್. ಹುರಳಿ, ಹೋಬಾ ನಾಯಕ, ಎ.ವೈ. ಮುನ್ನಾ, ಎಚ್.ಪಿ. ರಾಮಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ. ಪ್ರಸನ್ನಕುಮಾರ, ಪ್ರಕಾಶ ಮನ್ನಂಗಿ, ಪ್ರಭು ಸುಣಗಾರ, ಶಿವನಗೌಡ ಪಾಟೀಲ, ಪ್ರೇಮಾ ಎಚ್.ಎಂ., ಎಂ.ಡಿ. ಬಳ್ಳಾರಿ, ಬಿ.ಕೆ.ಎಸ್. ವರ್ಧನ ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನಾಗರಾಜ ಇಚ್ಚಂಗಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry