ಶುಕ್ರವಾರ, ಜೂನ್ 25, 2021
29 °C

ಪರೀಕ್ಷಾ ಜ್ವರಕ್ಕೆ ಪಂಚ ಮಾತ್ರೆಗಳು

ಪರಮೇಶ್ವರಯ್ಯ ಸೊಪ್ಪಿಮಠ Updated:

ಅಕ್ಷರ ಗಾತ್ರ : | |

ಪರೀಕ್ಷಾ ಜ್ವರ ಯಾರನ್ನು ಬಿಟ್ಟಿಲ್ಲ?. ಆರಂಭದಲ್ಲಿ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಿಗೆ ಕಾಡುತ್ತದೆ. ಅವರು ತಮ್ಮ ಜ್ವರವನ್ನು ಕ್ರಮೇಣವಾಗಿ ಮಕ್ಕಳಿಗೆ ವರ್ಗಾಯಿಸುತ್ತಾರೆ. ಈ ಸಾರಿ ಫಸ್ಟ್ ಬರಲೇಬೇಕು... ಬರದಿದ್ರೆ ನಿನಗೆ ಎಲ್ಲಾ ಕಟ್.. ಇಲ್ಲಾ ಹಾಸ್ಟೆಲ್‌ಗೆ ಹಾಕಿ ಬಿಡ್ತಿವಿ ನೋಡು... ಈ ತರಹ ಅನೇಕ ಪೋಷಕರು ಬೇರೆ ಬೇರೆ ವಿಧಾನದಲ್ಲಿ ಮಕ್ಕಳನ್ನು ಹೆದರಿಸುತ್ತಾರೆ.  ಮೊದಲೇ ಭಯಬೀತರಾಗಿರುವ ಮಕ್ಕಳು ತಮ್ಮ ಪಾಲಕರಿಂದ ಮತ್ತಷ್ಟು ಆತಂಕ, ಒತ್ತಡಕ್ಕೆ ಸಿಲುಕುತ್ತಾರೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.ಹಾಗೆಂದು ಪರೀಕ್ಷೆಗೆ ಹೆದರಿ ಅಡಗಿ ಕುಳಿತುಕೊಳ್ಳಬೇಕಾಗಿಲ್ಲ. ‘ಭಯ ಕದ ತಟ್ಟಿತು. ಆತ್ಮವಿಶ್ವಾಸದ ಕದ ತೆರೆಯಿತು. ಭಯ ಓಡಿ ಹೋಯಿತು... ’ ಎಂಬ ವಿಶ್ವಕವಿ ರವೀಂದ್ರನಾಥ ಠಾಕೂರರ ಮಾತನ್ನು ಅನುಸರಿಸುವುದು ಒಳಿತು. ಕಲಿಕಾ ಮಹತ್ವ

ಕಲಿಕೆಗೆ ಆತ್ಮ ವಿಶ್ವಾಸ ಮುಖ್ಯವಾದುದು. ಹಾಗಾಗಿ ತಲೆಯಲ್ಲಿ ಬರುವ ನಕಾರಾತ್ಮಕ ಅಂಶಗಳಿಗೆ ಮೊದಲು ತಡೆಯೊಡ್ಡಬೇಕು. ಯಾವುದರ ಕುರಿತು ಹೆಚ್ಚು ಆಲೋಚಿಸುತ್ತೆವೆಯೋ ಅದೇ ರೀತಿ ಆಗುತ್ತದೆ. ಅದಕ್ಕೆ ನನ್ನಲ್ಲಿ ನೆನಪಿನ ಶಕ್ತಿ ಹೆಚ್ಚಾಗುತ್ತಿದೆ ಎಂಬ ಭಾವನೆ ಹೆಚ್ಚು ಸಬಲರನ್ನಾಗಿಸುತ್ತದೆ. ಮನಸ್ಸಿಗೆ ಯಾವುದೇ ಒತ್ತಡ ಹೇರುವುದು ಬೇಡ. ತದೇಕ ಚಿತ್ತದಿಂದ ಓದಿದರೆ ಮೆದುಳಿನ ನೆನಪಿನ ಮೂಲವು ಜಾಗ್ರತಗೊಂಡು ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಅದರಿಂದ ಆತ್ಮವಿಶ್ವಾಸ ಗಟ್ಟಿಯಾಗುತ್ತದೆ. ಅದು ಅಪ್ಪ-ಅಮ್ಮ, ಪೋಷಕರು ಅಥವಾ ನಿಮ್ಮ ಶಿಕ್ಷಕರ ಕೈಲಿಲ್ಲ. ನಿಮ್ಮ ಅಂಗೈಲಿದೆ.ಅಭ್ಯಾಸದ ಮಂತ್ರಗಳು

ಪರೀಕ್ಷಾ ಓದಿಗೆ ಪಠ್ಯಪುಸ್ತಕಕ್ಕೆ ಮೊದಲ ಪ್ರಾಶಸ್ತ್ಯ ಚಿಕ್ಕ ಉತ್ತರ ಮತ್ತು ಬಹು ಆಯ್ಕೆಯ ಪ್ರಶ್ನೆಗಳಿಗೆ ಪಠ್ಯಪುಸ್ತಕವೇ ಮೂಲಾಧಾರ. ಪರೀಕ್ಷೆಯಲ್ಲಿ ಅಂಕವೇ ಪ್ರಧಾನವಾಗಿರುವುದರಿಂದ ಅದರತ್ತ ಮಾತ್ರ ಲಕ್ಷ್ಯ ನೆಟ್ಟಿರಬೇಕು.ನಿರಂತರವಾಗಿ ಓದುವುದು -ಬರೆಯುವುದು ಯಾರಿಗೂ ಸಹ್ಯವಲ್ಲ. ಮುಖ್ಯವಾದ ಸೂತ್ರ, ಇಸ್ವಿ, ಪ್ರಮೇಯ, ಚಿತ್ರಗಳನ್ನು ದೊಡ್ಡ ಅಕ್ಷರದಲ್ಲಿ ಬರೆದು ಕೊಠಡಿಯ ಗೋಡೆಗೆ ಅಂಟಿಸಿಕೊಳ್ಳಬೇಕು. ಅಡ್ಡಾಡುವಾಗ ಅದರತ್ತ ಕಣ್ಣು ಹಾಯಿಸಿದರೆ ಆ ಅಂಶಗಳು ತಲೆಯೊಳಗೆ ಭದ್ರವಾಗಿರುತ್ತವೆ.ಗುಂಪು ಚರ್ಚೆಯೂ ನೆನಪಿಟ್ಟುಕೊಳ್ಳಲು ಒಳ್ಳೆಯ ಅಸ್ತ್ರ. ಮೂರು-ನಾಲ್ಕು ಗೆಳೆಯರು ಜೊತೆಗೂಡಿ, ಒಂದು ವಿಷಯದ ಕುರಿತು ಗುಂಪು ಚರ್ಚ ಮಾಡಿದರೆ ಹೆಚ್ಚು ಮನನ ಆಗುತ್ತದೆ. ಗೆಳೆಯರ ವಿಚಾರಗಳು ಕೆಲಸಾರಿ ನೆರವಿಗೆ ಬರುತ್ತವೆ. ಆದರೆ ಚರ್ಚೆ ಅನಗತ್ಯ ವಿಷಯಗಳತ್ತ ವಾಲದಂತೆ ಎಚ್ಚರವಿರಬೇಕು.ಮೊಬೈಲ್ ಎಲ್ಲರನ್ನೂ ಆಕರ್ಷಿಸಿದೆ. ಅದನ್ನು ಒಳ್ಳೆಯದಕ್ಕೂ ಅದರಲ್ಲೂ ಪರೀಕ್ಷಾ ವಿದ್ಯಾರ್ಥಿಗಳ ನೆರವಿಗೆ ಬಳಸಬಹುದು. ಮೊಬೈಲ್‌ನಲ್ಲಿ ಪ್ರಶ್ನೋತ್ತರಗಳನ್ನು ಚೆನ್ನಾಗಿ ರೆಕಾರ್ಡ್ ಮಾಡಿಕೊಳ್ಳಬೇಕು. ಆನಂತರ ಏನಾದರೂ ಕೆಲಸ ಮಾಡುತ್ತಿರಿ, ಅದನ್ನು ಕಿವಿಯಲ್ಲಿ ಹಾಕಿಕೊಂಡರೆ ಸಾಕು. ಇದು ಓದುವುದಕ್ಕಿಂತ ಹೆಚ್ಚು ಖುಷಿಯನ್ನು ಕೊಡುತ್ತದಲ್ಲದೆ. ಸಂತಸದ ಓದು ಹೆಚ್ಚು ಪರಿಣಾಮಕಾರಿಯಾದುದು.ಸಮಯಕ್ಕೆ ಬೆಲೆ ಇದೆ

ಪರೀಕ್ಷಾ ದಿನಗಳಲ್ಲಿ, ದಿನದ ೨೪ ಗಂಟೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು. ಒಂದು ಭಾಗ ಸಂಪೂರ್ಣ ನಿದ್ರೆಗೆ ಮೀಸಲು. ಎರಡನೆ ಭಾಗ ಊಟ ಇತ್ಯಾದಿಗಳ ಜೊತೆಗೆ ವಿಶ್ರಾಂತಿ, ಮೂರನೇ ಭಾಗವನ್ನು ಅಭ್ಯಾಸಕ್ಕೆ ಮೀಸಲಿಡಬೇಕು.ಓದಿನ ಸಮಯದಲ್ಲಿ ಪ್ರತಿ ನಿಮಿಷಕ್ಕೂ ಗಮನ ಕೊಡಬೇಕು. ವಿಷಯಗಳತ್ತ ಹೆಚ್ಚು ಕೇಂದ್ರಿತವಾಗಿರಬೇಕು. ಕೆಲ ಗಂಟೆ ಓದಿದ ಮೇಲೆ, ಒಮ್ಮೆ ಓದಿದ್ದನ್ನು ನೆನಪಿಸಿಕೊಳ್ಳಬೇಕು. ಏನನ್ನು ಓದಿದ್ದೇನೆ? ಎಷ್ಟು ಓದಿದ್ದೇನೆ? ಎಷ್ಟು ಮನನವಾಗಿದೆ? ಎಷ್ಟು ಸ್ಮರಣೆಯಲ್ಲಿದೆ ಎಂಬುದನ್ನು ಪರಿಶೀಲಿಸುತ್ತ ಸಾಗಬೇಕು.ಓದುವ ಮನಸ್ಸು

ಪರೀಕ್ಷೆಗಳಲ್ಲಿ ಶಿಕ್ಷಕರು ಹೇಳಿರುವುದು, ತಾವು ಕಲಿತಿರುವುದು, ಮನೆಯವರು ತಿಳಿಸಿರುವುದು, ಸ್ನೇಹಿತರೊಂದಿಗೆ ಚರ್ಚಿಸಿರುವುದು, ನಿಗದಿ ಪಡಿಸಿದ ಪಠ್ಯಕ್ರಮದಲ್ಲಿರುವುದನ್ನು ಬಿಟ್ಟು ಬೇರೇನು ಇರಲು ಸಾಧ್ಯವಿಲ್ಲ. ಇದನ್ನು ಮಕ್ಕಳು ಮೊದಲು ಸರಿಯಾಗಿ ಅರಿಯಬೇಕು. ಪರೀಕ್ಷಾ ಭಯದಿಂದ ದೂರವಾಗಲು ಓದು ಮಖ್ಯ.ಪರೀಕ್ಷಾ ಸಮಯ ಹತ್ತಿರವಾದಂತೆ ಓದಲು ಕಠಿಣ ವಿಷಯ, ಸರಳ ವಿಷಯಗಳಿಗೆ ಅನುಗುಣವಾಗಿ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು. ಯಾರ ಒತ್ತಾಯಕ್ಕೆ ಓದುವುದು ಬೇಡ. ಅದು ನನ್ನ ಭವಿಷ್ಯ ಎಂದು ಸಂಕಲ್ಪ ಮಾಡಿಕೊಂಡು, ಅದರಲ್ಲಿ ಸಂತಸವನ್ನು ಕಾಣಬೇಕು. ಒಂದು ಪಾಠವನ್ನು ಪೂರ್ಣ ಮನಸ್ಸಿಟ್ಟು ಓದಬೇಕು. ನಂತರ ಅದಕ್ಕೆ ಸಂಬಂಧಿಸಿದ ನೋಟ್ಸ್, ಟಿಪ್ಪಣಿ, ಡೈಜಸ್ಟ್ಗಳನ್ನು ಓದಬೇಕು. ಆ ಪಾಠದಲ್ಲಿ ಬರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಬೇಕು. ಗೊಂದಲವಾದರೆ ಅಲ್ಲಿಯೇ ಸರಿಪಡಿಸಿಕೊಳ್ಳಬೇಕು.ಒಂದು ಸಾರಿ ಬರೆಯುವುದು ಹತ್ತು ಸಾರಿ ಓದುವುದಕ್ಕೆ ಸಮಾನ. ಇನ್ನು ಕೆಲವರು ನೆನಪಿಟ್ಟುಕೊಳ್ಳಲು ಬಳಸುವ ಸೂತ್ರವೆಂದರೆ:- ಸ್ವಲ್ಪ ಸಮಯ ಓದುತ್ತಾರೆ. ನಂತರ ಓದಿರುವುದರ ಪ್ರಮುಖಾಂಶಗಳನ್ನು ನೆನಪಿಸಿಕೊಳ್ಳುತ್ತಾ ಬರೆಯುತ್ತಾರೆ. ಅದರಲ್ಲಿ ಎಲ್ಲವೂ ನೆನಪಿಗೆ ಬಾರದಿದ್ದರೆ ಮತ್ತೆ ಓದಿ, ಬಿಟ್ಟಿರುವ ಅಂಶಗಳನ್ನು ಬರೆದುಕೊಳ್ಳುತ್ತಾರೆ. ನಂತರ ಸ್ವಲ್ಪ ಸಮಯ ವಿರಾಮ ಪಡೆದು ಮತ್ತೆ ಹೀಗೆಯೇ... ಓದುವುದನ್ನು ಅಭ್ಯಾಸಮಾಡುವುದು ಒಳ್ಳೆಯ ಪದ್ಧತಿ. ನಿಮ್ ಕೈಲಿ ನಿಮ್ ಬರಹ 

  ಪರೀಕ್ಷೆಯಲ್ಲಿ ಎಲ್ಲರೂ ಉತ್ತರ ಬರೆಯುತ್ತಾರೆ. ಆದರೆ ಎಲ್ಲರಿಗೂ ಒಂದೇ ತರನಾದ ಅಂಕಗಳು ಬರುವುದಿಲ್ಲ. ಅದಕ್ಕೆ ಕಾರಣ ಅವರು ಉತ್ತರ ಬರೆವ ವಿಧಾನ. ಅನೇಕರಿಗೆ ಸರಿಯಾದ ಉತ್ತರ ಗೊತ್ತಿರುತ್ತದೆ. ಅದನ್ನು ಬರೆಯಲು ಬಳಸುವ ಪದಗಳು, ಹೇಳುವ ರೀತಿ, ವೈವಿಧ್ಯತೆಗಳಲ್ಲಿ ಹಿಂದೆ ಬೀಳುತ್ತಾರೆ. ಸರಿಯಾದ ವಾಕ್ಯರಚನೆ ಮಾಡಲು ಸಾಧ್ಯವಾಗದು. ಅದರ ಪರಿಣಾಮ ಹತ್ತು ಅಂಕದ ಪ್ರಶ್ನೆಗೆ ಸಿಗುವುದು ಕೇವಲ ಎರಡು ಮೂರಂಕಗಳು ಮಾತ್ರ. ಚಿಕ್ಕ ಉತ್ತರ ನಿರೀಕ್ಷಿಸುವ ಪ್ರಶ್ನೆಗಳಿಗೆ ದೀರ್ಘ ಉತ್ತರದ ಅವಶ್ಯಕತೆ ಇರುವುದಿಲ್ಲ. ಅದು ಕೂಡ ಅಂಕಗಳನ್ನು ಕಡಿತ ಮಾಡಿಸುತ್ತದೆ. ಅದಕ್ಕೆ ಪ್ರಶ್ನೆಪತ್ರಿಕೆಯಲ್ಲಿ ಹೇಳಿದಷ್ಟನ್ನು ಬರೆಯಬೇಕು.

ಕೊನೆ ಟಿಪ್ಸ್ 

ನಿಮಗೆ ತಿಳಿದಿರಲಿ, ನಮ್ಮ ಸೋಲಿಗೆ, ಅಪಯಶಸ್ಸಿಗೆ ಯಾವ ಕಾರಣಗಳೂ ಸಕಾರಣಗಳಲ್ಲ ಎನ್ನುವುದು. ಅಂತಹ ಸಂದರ್ಭದಲ್ಲಿ  ನಾವು ನೆಪಗಳನ್ನೊಡ್ಡಿ ಪಾರಾಗುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಹಾಗಾಗಿ ಮಕ್ಕಳೇ. . . . ನಿಮ್ಮ ಬಂಗಾರದಂಥ ’ವಿದ್ಯಾರ್ಥಿ ಜೀವನ’ವನ್ನು ಹಾಳು ಮಾಡಿಕೊಳ್ಳಬೇಡಿ. ಈಗಲೂ ಕಾಲ ಮಿಂಚಿಲ್ಲ, ಪ್ರತಿ ಸೋಲಿನ ಹಿಂದೊಂದು ಯಶಸ್ಸು ಇರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.