ಪರೀಕ್ಷಾ ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ

7

ಪರೀಕ್ಷಾ ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ

Published:
Updated:

ಗೋಕಾಕ: ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ದಿಢೀರನೆ ರೂ  820 ಗಳಿಗೆ ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ನಗರದ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಓ) ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿಯನ್ನು ನಡೆಸಿದರು.ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ರ‌್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಪ್ರಮುಖ ಬೀದಿಗಳ ಮೂಲಕ ಸಾಗಿ ತಹಶೀಲ್ದಾರ್ ಮೂಲಕ  ಕುಲಪತಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಕಾರರನ್ನು ಉದ್ದೇಶಿಸಿ ಎಐಡಿವೈಓ ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಗಜಾನನ ಹಂಪಿಹೊಳಿ ಅವರು ಮಾತನಾಡಿ, 2011-12 ನೇ ಸಾಲಿನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ಕೇವಲ ರೂ 90 ಇದ್ದುದನ್ನು ಕಳೆದ ವರ್ಷ ವಿದ್ಯಾರ್ಥಿಗಳ ವಿರೋಧದ ನಡುವೆಯೂ ರೂ  700 ಗಳಿಗೆ ಏರಿಕೆ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ಯಾವುದೇ ಕಾರಣ ನೀಡದೇ ದಿಢೀರನೆ ರೂ  820 ಗಳಿಗೆ ಏರಿಕೆ ಮಾಡಲಾಗಿದೆ.ಪ್ರತಿ ವಿಷಯಗಳ ಮರು ಪರೀಕ್ಷಾ ಶುಲ್ಕವನ್ನೂ ಅವೈಜ್ಞಾನಿಕವಾಗಿ ಏರಿಕೆ ಮಾಡಲಾಗಿದೆ. ವಿ.ವಿ. ನಿಲುವು ವಿದ್ಯಾರ್ಥಿಗಳ ವಿರೋಧಿ ನಿಲುವು ಎಂಬುದು ಸ್ಪಷ್ಟಗೊಳ್ಳುತ್ತಿದೆ.  ಬಡ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಬೇರೆ ವಿಶ್ವವಿದ್ಯಾಲಯಗಳ  ಶುಲ್ಕಕ್ಕೂ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶುಲ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಶುಲ್ಕ ಏರಿಕೆ ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ವಿಶ್ವವಿದ್ಯಾಲಯವು ಈ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಕಾಲೇಜು ಮಟ್ಟದಲ್ಲಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಶುಲ್ಕ ಇಳಿಕೆಯಾಗುವವರೆಗೆ ಹೋರಾಟ ಮುಂದುವರೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು,  ಒಂದು ವೇಳೆ ನಮ್ಮ ನ್ಯಾಯ ಸಮ್ಮತವಾಗಿರುವ ಈ ಬೇಡಿಕೆಗಳಿಗೆ ವಿ.ವಿ. ಸ್ಪಂದಿಸದಿದ್ದರೆ ಸಾವಿರಾರು ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ದಳವಾಯಿ ವಹಿಸ್ದ್ದಿದರು.

ಲಕ್ಕಪ್ಪ ಬಿಜ್ಜನ್ನವರ, ರಾಮನಗೌಡ ಪಾಟೀಲ, ಲಕ್ಕಣ್ಣ ಸವದತ್ತಿ, ಮಂಜುನಾಥ ದಬಾಜ, ಆಸೀಪ್ ಮುಲ್ಲಾ, ಸದಾಶಿವ ದೊಡಮನಿ, ಸಿದ್ದು ನಾವಿ, ಮಹಾಂತೇಶ ತೋಳಿ, ಹೇಮಾ ಕಮತೆ, ಸ್ವಪ್ನಾ ಬೆಳಗಲಿ, ರುಕ್ಮೀಣಿ ಹಾಗೂ ವಿದ್ಯಾರ್ಥಿಗಳು  ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry