ಶನಿವಾರ, ಮೇ 15, 2021
24 °C

ಪರೀಕ್ಷೆಗೆ ಷರತ್ತುಬದ್ಧ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾನ್ಯತೆ ರದ್ದುಗೊಳ್ಳಲಿರುವ ಬಿ.ಇಡಿ ಕಾಲೇಜುಗಳಲ್ಲೂ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ತಿಮ್ಮೇಗೌಡ ತಿಳಿಸಿದರು.ಶೇ 80ರಷ್ಟು  ಹಾಜರಾತಿ ಪಡೆದ ಆಂತರಿಕ ಪರೀಕ್ಷೆಗಳಲ್ಲಿ ನಿಯಮಗಳನ್ನು ಪಾಲಿಸಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾಲಯಕ್ಕೆ ರೂ 200 ಛಾಪಾ ಕಾಗದ ಮೇಲೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.ತರಗತಿಗಳಿಗೆ ಹಾಜರಾಗದೇ ಪರೀಕ್ಷೆಗಳನ್ನು ತೆಗೆದುಕೊಂಡಿರುವುದು ವಿ.ವಿ.ಯ ಗಮನಕ್ಕೆ ಬಂದಲ್ಲಿ ಅಂತಹ ವಿದ್ಯಾರ್ಥಿಗಳ ಫಲಿತಾಂಶವನ್ನು ರದ್ದುಪಡಿಸಲಾಗುವುದು ಮತ್ತು ರೂ 10,000 ದಂಡ ವಿಧಿಸಲಾಗುವುದು. ಇದಕ್ಕೆ ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯನ್ನು  ಜವಾಬ್ಧಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ 2012-13ನೇ ಸಾಲಿನ ಪ್ರಥಮ ಸೆಮಿಸ್ಟರ್ ಬರೆಯಲು ಕೆಲವು ಷರತ್ತುಗಳ ಮೇಲೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್‌ನಲ್ಲಿಯೇ ಸ್ಥಳೀಯ ವಿಚಾರಣಾ ಸಮಿತಿ ಹಾಗೂ ಇತರೆ ಸಮಿತಿಗಳು ನೀಡಿರುವ ವರದಿಯನ್ನು ಆಧರಿಸಿ ವಿ.ವಿ. ನಿರ್ಧಾರ ತೆಗೆದುಕೊಂಡಿದ್ದರೆ ಪರೀಕ್ಷೆಯ ಕಾರಣಕ್ಕಾಗಿ ಮಾನ್ಯತೆ ರದ್ದು ಮಾಡುವ ಪ್ರಕ್ರಿಯೆಯನ್ನು ಮುಂದೂಡುವ ಅಗತ್ಯ ಬೀಳುತ್ತಿರಲಿಲ್ಲ. ನೇಮಕಗೊಂಡ ಸಮಿತಿಗಳು ವಸ್ತುನಿಷ್ಠ ವರದಿ ಮಾಡದೇ ಎಕಮುಖದ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ವಿಫಲಗೊಂಡಿರುವುದು ಸಹ ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ಎಂದು ಹೇಳಿದರು.ಈವರೆಗೆ ನಾಲ್ಕಾರು ಬಿ.ಇಡಿ ಕಾಲೇಜುಗಳಲ್ಲಿ ಭೇಟಿ ನೀಡಿದ್ದು, ಪರೀಕ್ಷಾರ್ಥಿಗಳ ಅರ್ಹತೆ, ಹಾಜರಿಪಟ್ಟಿ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಕಲಾನಿಕೇತನ ಕಾಲೇಜಿನಲ್ಲಿ ಹಾಜರಾತಿ ಇಲ್ಲದ ವಿದ್ಯಾರ್ಥಿಗಳ ಪರೀಕ್ಷೆ ಕೂತಿರುವುದು ಗಮನಕ್ಕೆ ಬಂದಿದ್ದು,ಇಂತಹವರ ಫಲಿತಾಂಶವನ್ನೇ ತಡೆಹಿಡಿಯಲಾಗುವುದು ಎಂದು ಹೇಳಿದರು.ಉನ್ನತ ಶಿಕ್ಷಣ ಸಚಿವರ ಆದೇಶದಂತೆ ಮುಂದಿನ ದಿನಗಳಲ್ಲಿ ಬಿ.ಇಡಿ ಕಾಲೇಜುಗಳು ನೀಡುವ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯದ ಕುರಿತು ಅರಿಯಲು ನಿವೃತ್ತ ಕುಲಪತಿಗಳ ನೇತೃತ್ವದ ನೇಮಕಾತಿಯನ್ನು ರಚಿಸಲಾಗುವುದು. ಇದರಲ್ಲಿ ಶಿಕ್ಷಣ ತಜ್ಞರು, ಕೆಎಎಸ್ ಅಧಿಕಾರಿ ಇರುತ್ತಾರೆ. ಬಿ.ಇಡಿ ಕಾಲೇಜುಗಳ ವಿಚಾರದಲ್ಲಿ ವಿ.ವಿ ಕಡೆಯಿಂದ ಸಣ್ಣಪುಟ್ಟ ಲೋಪವಾಗಿದ್ದರೂ ಸಹ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಆತಂಕ:  ಜಯನಗರದ ಬಿಇಎಸ್ ಕಾಲೇಜಿನಲ್ಲಿ 10.30ಗೆ ಪರೀಕ್ಷೆ ಆರಂಭವಾಗಬೇಕಿತ್ತು, ಆದರೆ, ಅಧೀಕ್ಷರು 11 ಗಂಟೆಯಾದರೂ  ವಿದ್ಯಾರ್ಥಿಗಳ ದಾಖಲೆ ಪರಿಶೀಲಿಸುವಲ್ಲಿ ನಿರತರಾಗಿದ್ದರಿಂದ  ವಿದ್ಯಾರ್ಥಿಗಳು ಆತಂಕದ ಜತೆ ದಾಖಲೆಯ ಪರಿಶೀಲನೆ ಪರೀಕ್ಷೆಯನ್ನು ಕೂಡ ಎದುರಿಸಬೇಕಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.