ಪರೀಕ್ಷೆ:ಸಾಧಕರಿಗೆ ಬಹುಮಾನ

ಶನಿವಾರ, ಜೂಲೈ 20, 2019
27 °C

ಪರೀಕ್ಷೆ:ಸಾಧಕರಿಗೆ ಬಹುಮಾನ

Published:
Updated:

ಯಲಬುರ್ಗಾ: ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90ಕ್ಕು ಅಧಿಕ ಅಂಕ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5ಸಾವಿರ ಬಹುಮಾನ ನೀಡುವುದಲ್ಲದೇ ಪ್ರಸಕ್ತ ಶೈಕ್ಷಣಿಕ ವರ್ಷದ ಸ್ಥಳೀಯ ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ 40ಸಾವಿರ ಮೊತ್ತದ ಪಠ್ಯಪುಸ್ತಕಗಳನ್ನು ಜಿ.ಟಿ.ಸೇವಾ ಸಂಸ್ಥೆಯಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಟಿ. ಪಂಪಾಪತಿ ಹೇಳಿದರು.ಸ್ಥಳೀಯ ಸರ್ಕಾರಿ ಕಿರಿಯ ಮಹಾವಿದ್ಯಾಲಯದ ಆವರಣದಲ್ಲಿ ಜಿ.ಟಿ.ಪಂಪಾಪತಿ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ಉಚಿತ ನೋಟ್ ಪುಸ್ತಕ ವಿತರಣಾ ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದಿಂದ ಸಕಾಲದಲ್ಲಿ ಪಠ್ಯಪುಸ್ತಕ ಪೂರೈಸಲು ಆಗದೇ ಇರುವುದರಿಂದ ಮಕ್ಕಳಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಅನೇಕರು ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಅನುಕೂಲ ಮಾಡಿಕೊಡಲಾಗುವುದು ಎಂದರು.ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತರಿಗೆ ಕೊರತೆಯಿಲ್ಲ, ಕಳೆದ ವರ್ಷ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಂತೆ ಹೆಚ್ಚಿನ ಅಂಕ ಪಡೆದಿದ್ದಾರೆ. ಆದರೆ ಅವರಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ, ಈ ಕಾರಣದಿಂದ ಇತರರು ಈ ರೀತಿಯ ಸಾಧನೆ ಮಾಡಲಿ ಎಂಬ ಉದ್ದೇಶದಿಂದ ಸಾಧಕರಿಗೆ ನಗದು ಬಹುಮಾನ ನೀಡುವ ಬಗ್ಗೆ ಮುಂಚಿತವಾಗಿಯೇ ಘೋಷಿಸಲಾಗಿದೆ.ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಈ ಬಹುಮಾನಕ್ಕೆ ಭಾಜನರಾಗುವಂತೆ ಸಲಹೆ ನೀಡಿದರು.ಸಾನಿಧ್ಯ ವಹಿಸಿದ್ದ ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಾನವಾಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಾಸದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಈ ರೀತಿಯ ಪ್ರೋತ್ಸಾಹ ಸಿಗುತ್ತಿರುವುದು ಸ್ವಾಗತಾರ್ಹ.ಶಿಕ್ಷಣ ಹಕ್ಕು ಅನುಷ್ಠಾನಕ್ಕೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳಿಂದಲೂ ವಿವಿಧ ರೀತಿಯ ಕೊಡುಗೆ ಶಿಕ್ಷಣ ಸುಧಾರಣೆಗೆ ಪ್ರೇರಣೆಯಾಗಿದೆ. ಹಾಗೆಯೇ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗುವುದು ಕೂಡಾ ಅಷ್ಟೇ ಮುಖ್ಯ ಎಂದು ನುಡಿದರು.ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಶಿಕ್ಷಣ ಸಂಯೋಜಕ ಹನಮಂತಪ್ಪ ತೋರಣಗಲ್ಲ, ಸ್ಥಳೀಯ ಉಪನ್ಯಾಸಕ ಎಸ್.ಬಿ. ಬೇಲೇರಿ ಮಾತನಾಡಿ ಸವಲತ್ತು ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸ್ಥಳೀಯ ಗಣ್ಯರಾದ ಸಂಗಣ್ಣ ತೆಂಗಿನಕಾಯಿ, ಕಾಲೇಜಿನ ಪ್ರಾಚಾರ್ಯ ಬಸವರಾಜ ಬಡಿಗೇರ ಮತ್ತಿತರರು ಇದ್ದರು. ಕೆ.ಎನ್. ಮುಳಗುಂದ ಸ್ವಾಗತಿಸಿ ನಿರೂಪಿಸಿದರು. ಇ.ಜಿ. ಬಿಸಲದಿನ್ನಿ ವಂದಿಸಿದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.ಸಂಸ್ಥೆಯ ಕಾರ್ಯಕರ್ತರಾದ ಇಮಾಮಹುಸೇನ, ಪ್ರಶಾಂತ ಎಚ್, ಚಂದ್ರು ಮರದಡ್ಡಿ, ಮಹಾಂತೇಶ ಭಾಸ್ಕರ, ನಟರಾಜ ಬಿದರಿ, ಯಮನೂರ, ಬಸಯ್ಯಸ್ವಾಮಿ, ಶರಣಪ್ಪ ಕುದ್ರಿಕೊಟಗಿ ಹಾಗೂ ಉಮೇಶ ಹರ್ತಿ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry