ಸೋಮವಾರ, ಮಾರ್ಚ್ 8, 2021
30 °C

ಪರೀಕ್ಷೆ ನಕಲು ತಡೆಯಲು ಡ್ರೋನ್‌

ರಮೇಶ ಕೆ Updated:

ಅಕ್ಷರ ಗಾತ್ರ : | |

ಪರೀಕ್ಷೆ ನಕಲು ತಡೆಯಲು ಡ್ರೋನ್‌

ಸೇನೆಯ ಕಾರ್ಯ ದಕ್ಷತೆಗೆ ನೆರವು ನೀಡುತ್ತಿದ್ದ ಡ್ರೋನ್‌ (ಮಾನವ ರಹಿತ ವೈಮಾನಿಕ ವಾಹನ) ತಂತ್ರಜ್ಞಾನ ಇಂದು ವಿದ್ಯಾರ್ಥಿಗಳ ಪರೀಕ್ಷಾ ಕೊಠಡಿಗೂ ಲಗ್ಗೆ ಇಟ್ಟಿದೆ. ಅತ್ಯಂತ ಸೂಕ್ಷ್ಮ ಸಂವೇದನಾ ಕ್ಯಾಮೆರಾ ಹೊಂದಿರುವ ಡ್ರೋನ್‌ ಆಪದ್ಭಾಂದವನಂತೆ ಕೆಲಸ ಮಾಡುತ್ತದೆ. ಈಗ ಕೃಷಿ ಚಟುವಟಿಕೆಗೂ ಅದರ ನೆರವನ್ನು ಪಡೆಯಲಾಗುತ್ತಿದೆ.ಅಂತೆಯೇ ಪೊಲೀಸರಿಗೂ ಅನುಕೂಲವಾಗುವಂತೆ ಡ್ರೋನ್‌ ವಿನ್ಯಾಸ ಮಾಡಿದ್ದಾರೆ, ಅಂದರೆ, ಪೊಲೀಸರು ಗಲಭೆ ನಡೆಯುವ ಸಾಧ್ಯತೆಯನ್ನು ನಿಯಂತ್ರಿಸಲು ಲಾಟಿ ಬೀಸಬೇಕಿಲ್ಲ, ಡ್ರೋನ್‌ಗೆ ಉರಿಯುವ ರಾಸಾಯನಿಕ ತುಂಬಿ ಸಿಂಪಡಿಸಲು ಸೂಚಿಸಿದರೆ ಸಾಕು, ಸಾಗರದಂತ ಜನದಟ್ಟಣೆಯೂ ಮಂಜಿನಂತೆ ಕರಗಿ ಮಾಯವಾಗುತ್ತದೆ. ಹೀಗೆ ಬಹೂಪಯೋಗಿ ಡ್ರೋನ್‌  ಪರೀಕ್ಷೆ ನಕಲು ತಡೆಗೂ ಬಳಕೆಯಾಗಯತ್ತಿರುವುದು ಯಂತ್ರ ಯುಗದ ಮತ್ತೊಂದು ಸಾಧ್ಯತೆಗಳಲ್ಲಿ ಒಂದು.ಪರೀಕ್ಷಾ ಕೊಠಡಿಯೊಳಗೆ ಶಿಕ್ಷಕರನ್ನು ಯಾಮಾರಿಸಿ ನಕಲು ಮಾಡುವ ವಿದ್ಯಾರ್ಥಿ ಗಳಿದ್ದಾರೆ. ಚೀಟಿಗಳಲ್ಲಿ, ಚಿಕ್ಕ ಹಾಳೆಗಳಲ್ಲೋ, ಅಥವಾ ಕೈ ಮೇಲೆಯೋ ಉತ್ತರಗಳನ್ನು ಬರೆದುಕೊಂಡು ಹೋಗುತ್ತಿದ್ದ ಕಾಲವೊಂದಿತ್ತು. ಆದರೀಗ ಕಾಲ ಬದಲಾಗಿದೆ. ನೂತನ ತಂತ್ರಜ್ಞಾನ  ಬಳಸಿಕೊಂಡು ಕಾಪಿ ಮಾಡಲು ಹೊರಟಿದ್ದಾರೆ. ಇಂಥ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಚೀನಾದಲ್ಲಿ  ಡ್ರೋನ್‌ ಬಳಸಲಾಗುತ್ತಿದೆ.ಚೀನಾದ ಲುವೊಯಾಂಗ್‌ ಪ್ರಾಂತ್ಯದ ಶಾಲೆಗಳ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌, ಸ್ಮಾರ್ಟ್‌ ವಾಚ್ ಸೇರಿದಂತೆ ಇನ್ನಿತರ ನೂತನ ಡಿವೈಸ್‌ಗಳನ್ನು ಬಳಸಿಕೊಂಡು ನಕಲು ಮಾಡುತ್ತಿದ್ದರಿಂದ, ಇಂಥ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಪರೀಕ್ಷಾ ಕೊಠಡಿಯಲ್ಲಿ ಡ್ರೋನ್‌ ಬಳಸಲಾಗುತ್ತಿದೆ ಎಂದು ಪೀಪಲ್ಸ್‌ ಡೈಲಿ ವರದಿ ತಿಳಿಸಿದೆ.ಪರೀಕ್ಷಾ ಸಿಬ್ಬಂದಿ ಕೊಠಡಿಯೊಳಗೆ ಹೋಗುತ್ತಿದ್ದಂತೆ ಡ್ರೋನ್‌ ಕಾರ್ಯೋನ್ಮುಖ ವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರ ಕಣ್ಣುತಪ್ಪಿಸಿ ನಕಲು ಮಾಡಲು ಪ್ರಯತ್ನಿಸಿದರೆ ಅಥವಾ ಇನ್ನಿತರೆ ಮೋಸದ ಕೃತ್ಯಕ್ಕೆ ಮುಂದಾದರೆ ಸಂಕೇತಗಳನ್ನು ರವಾನಿಸುತ್ತದೆ. ಆ ಮೂಲಕ ನಕಲು ಮಾಡುವವರನ್ನು ಸುಲಭವಾಗಿ ಕಂಡು ಹಿಡಿಯಬಹುದು. ಈ ಡ್ರೋನ್‌ 500 ಮೀಟರ್‌ ಎತ್ತರದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ಮಾಡುತ್ತಾ ಕಾರ್ಯಾಚರಣೆಯಲ್ಲಿರುತ್ತದೆ. ನಂತರ ತಾನಾಗಿಯೇ ಕೆಳಗಿಳಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಡ್ರೋನ್‌ನಲ್ಲಿ ಅಳವಡಿಸಿರುವ ಸೂಕ್ಷ್ಮ ಕ್ಯಾಮೆರಾ, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡುತ್ತದೆ. ಅವರೇನಾದರೂ ನಕಲಿಗೆ ಪ್ರಯತ್ನಿಸಿದರೆ, ಅಂತಹ ವಿದ್ಯಾರ್ಥಿಗಳನ್ನು ನೋಟ್ ಮಾಡಿಕೊಳ್ಳುತ್ತದೆ. ಅಲ್ಲದೆ ತನ್ನ ನಿಯಂತ್ರಣ ಕೇಂದ್ರಕ್ಕೆ ಈ ಕುರಿತು ಮಾಹಿತಿ ನೀಡುತ್ತದೆ.ಈ ವ್ಯವಸ್ಥೆಯಿಂದ ಪರೀಕ್ಷೆಯಲ್ಲಿ ನಕಲಿ ಹೊಡೆಯುವ ವಿದ್ಯಾರ್ಥಿಗಳಿಗೆ ತೊಂದರೆ ಯಾಗಲಿದೆ. ತಮ್ಮ ಮೇಲೆ ಡ್ರೋನ್‌ ಕ್ಯಾಮೆರಾ ನಿಗಾ ಇಟ್ಟಿರುವುದರಿಂದ ಅವರು ನಕಲು ಮಾಡುವ ಗೋಜಿಗೆ ಹೋಗದೆ, ಪರೀಕ್ಷೆ ಬರೆಯುತ್ತಾರೆ ಎನ್ನುವ ಅನಿಸಿಕೆ ಅಲ್ಲಿನ ಅಧಿಕಾರಿಗಳದ್ದು.ಸಿಸಿ ಕ್ಯಾಮೆರಾ ಆಯಿತು, ಈಗ ಪರೀಕ್ಷಾ ಕೊಠಡಿಗೆ ಡ್ರೋನ್‌ ಬಂದಿದೆ. ಒಟ್ಟಿನಲ್ಲಿ ಕಾಪಿ ಹೊಡೆಯುವ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಅಲ್ಲಿನ ಅಧಿಕಾರಿಗಳು ಸಜ್ಜಾಗಿದ್ದಾರೆ. ಪರೀಕ್ಷೆ ಏನೋ ಬರೆಯುತ್ತಾರೆ, ಆದರೆ ಮೌಲ್ಯಮಾಪನ ಮಾಡುವಲ್ಲಿಯೂ ಈ ರೀತಿಯ ಡ್ರೋಣ್‌ಗಳನ್ನು ಕಾವಲಿಗೆ ನಿಯೋಜಿಸಿದರೆ ಹೇಗೆ ಎಂಬ ಅಲೋಚನೆ ನಮ್ಮವರಿಗೆ ಬರದೆ ಇರದು! ನಮ್ಮ ಶಾಲೆಗಳಲ್ಲೂ ಇಂಥ ಡ್ರೋನ್‌ಗಳ ನೆರವು ಪಡೆಯಬಹುದಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.