ಬುಧವಾರ, ನವೆಂಬರ್ 20, 2019
21 °C

ಪರೀಕ್ಷೆ ನಡೆಸುವಂತೆ `ನಾಡಾ'ಗೆ ಸೂಚನೆ

Published:
Updated:

ಪಟಿಯಾಲ (ಪಿಟಿಐ): ಮದ್ದು ಸೇವನೆ ಮಾಡಿದ ಆರೋಪ ಎದುರಿಸುತ್ತಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆಘಟಕ (ನಾಡಾ)ಗೆ ಸೂಚನೆ ನೀಡಿದೆ.ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ವಿಜೇಂದರ್ 12 ಸಲ ಮದ್ದು ಸೇವನೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ಖಚಿತಪಡಿಸಿದ್ದರು. ಆದ್ದರಿಂದ ಕ್ರೀಡಾ ಸಚಿವಾಲಯ ನಾಡಾಕ್ಕೆ ಈ ಸೂಚನೆ ರವಾನಿಸಿದೆ. ಈ ಕುರಿತು ಸಚಿವಾಲಯ ನಾಡಾದ ಪ್ರಧಾನ ನಿರ್ದೇಶಕರಿಗೆ ಮಾಹಿತಿ ಕಳುಹಿಸಿದೆ.`ವಿಜೇಂದರ್ ಪ್ರಕರಣದಿಂದ ದೇಶದ ಇತರ ಯುವ ಕ್ರೀಡಾಪಟುಗಳ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗಿದೆ. ಆದ್ದರಿಂದ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು. ಆಗ ಸತ್ಯ ಏನೆಂಬುದು ಗೊತ್ತಾಗುತ್ತದೆ. ಕೂಡಲೇ ವಿಜೇಂದರ್ ಅವರನ್ನು ಪರೀಕ್ಷೆಗೆ ಒಳಪಡಿಸಿ ವರದಿ ನೀಡಬೇಕು' ಎಂದು ಸಚಿವಾಲಯ ನಾಡಾಗೆ ಸೂಚನೆ ನೀಡಿದೆ.ಮಾದರಿ ನೀಡಲು ಸಲಹೆ: ಪೊಲೀಸರು ಕೇಳಿರುವ ರಕ್ತ ಹಾಗೂ ಕೂದಲಿನ ಮಾದರಿಯನ್ನು ನೀಡುವಂತೆ ಪೊಲೀಸರು ಕೇಳಿರುವ ಹಿನ್ನೆಲೆಯಲ್ಲಿ ಅವರಿಗೆ ಮಾದರಿ ನೀಡುವಂತೆ ವಿಜೇಂದರ್ ಕೋಚ್ ಜಿ.ಎಸ್. ಸಂಧು ಸಲಹೆ ನೀಡಿದ್ದಾರೆ.`ಪೊಲೀಸರು ತನಿಖೆಯಲ್ಲಿ ಸತ್ಯ ಗೊತ್ತಾಗಬೇಕಾದರೆ, ಅವರಿಗೆ ಸಹಕಾರ ನೀಡಬೇಕು. ಆದ್ದರಿಂದ ಅವರಿಗೆ ರಕ್ತದ ಮಾದರಿ ನೀಡುವುದು ಉತ್ತಮ' ಎಂದು ಸಂಧು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)