ಪರೀಕ್ಷೆ ಬರೆಯಲಿರುವ 20,592 ವಿದ್ಯಾರ್ಥಿಗಳು

ಹಾವೇರಿ: ಜಿಲ್ಲೆಯಲ್ಲಿ ಇದೇ ೨೮ ರಿಂದ ಏ. ೯ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷೆಗಾಗಿ ಜಿಲ್ಲೆಯಲ್ಲಿ 81 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 20,592 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲಿದ್ದು, ಅದರಲ್ಲಿ 10,075 ಬಾಲಕರು, 10,100 ಬಾಲಕಿಯರು ಹಾಗೂ 417 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಈ ಪರೀಕ್ಷಾ ಕೇಂದ್ರಗಳಲ್ಲಿ 24 ಜನರು ಮಾರ್ಗಾಧಿಕಾರಿಗಳಾಗಿ ಹಾಗೂ 162 ಜನರು ಸಿಟ್ಟಿಂಗ್ ಸ್ಕ್ವಾಡ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶಾಂತಿ ಮತ್ತು ಸುವ್ಯವಸ್ಥಿತ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಹಾಗೂ ನಿರ್ಬಂಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ ಗುಂಪುಗಳ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಮಂಜುನಾಥ ನಾಯ್ಕ್ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಝರಾಕ್ಸ್ ಮತ್ತು ಟೈಪಿಂಗ್ ಸೆಂಟರ್ ಮುಚ್ಚಲು ಆದೇಶಿಸಲಾಗಿದೆ. ಅಲ್ಲದೇ, ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸೂಕ್ಷ್ಮ ಕೇಂದ್ರಗಳು: ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನ ಎಸ್.ಕೆ.ವಿ. ಪ್ರೌಢಶಾಲೆ, ಹಾನಗಲ್ ತಾಲ್ಲೂಕಿನ ಹೆರೂರ–ಕಲಕೇರಿಯ ಬಸವೇಶ್ವರ ಪ್ರೌಢಶಾಲೆ, ಹಿರೇಕೆರೂರಿನ ಡಿ.ಆರ್.ಟಿ. ಪ್ರೌಢಶಾಲೆ, ಸಿ.ಇ.ಎಸ್. ಬಾಲಕಿಯರ ಪ್ರೌಢಶಾಲೆ, ರಾಣೆಬೆನ್ನೂರ ತಾಲ್ಲೂಕು ಗುಡಗೂರಿನ ಕಮಲಮ್ಮ ಪ್ರೌಢಶಾಲೆ, ತಮ್ಮಿನಕಟ್ಟಿ ಸಂಗಮೇಶ್ವರ ಪದವಿಪೂರ್ವ ಕಾಲೇಜು, ರಾಣೆಬೆನ್ನೂರಿನ ನಗರಸಭಾ ಬಾಲಕರ ಪ್ರೌಢಶಾಲೆ, ಹಾವೇರಿಯ ಸೇಂಟ್ ಆನ್ಸ್ ಪ್ರೌಢಶಾಲೆ ಹಾಗೂ ಸವಣೂರಿನ ಸರ್ಕಾರಿ ಮಜೀದ್ ಪದವಿಪೂರ್ವ ಕಾಲೇಜು ಮತ್ತು ಹೂವಿನಶಿಗ್ಲಿಯ ಸರ್ಕಾರಿ ಪ್ರೌಢಶಾಲೆಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ.
ಪರೀಕ್ಷೆಗೆ ಕುಳಿತುಕೊಳ್ಳುವ ಎಲ್ಲ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರದ ಶಾಲಾ ಶಿಕ್ಷಕರನ್ನು ಹಾಗೂ ಪರೀಕ್ಷಾ ದಿನಗಳಂದು ವಿಷಯ ಶಿಕ್ಷಕರನ್ನು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನಾಗಿ ನೇಮಕ ಮಾಡಬಾರದು. ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡದಂತೆ ಕೇಂದ್ರದ ಮೇಲ್ವಿಚಾರಕರು ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣಾಧಿಕಾರಿ ಎಸ್.ಬಿ.ಕೊಡ್ಲಿ ತಿಳಿಸಿದ್ದಾರೆ.
ಪ್ರಥಮ ಬಾರಿಗೆ ಆರೋಗ್ಯ ಸಿಬ್ಬಂದಿ: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆರೋಗ್ಯ ಕಾಳಜಿ ವಹಿಸಲು ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಈ ಸಿಬ್ಬಂದಿ ಪರೀಕ್ಷೆ ಮುಗಿಯುವ ಸಮಯದ ವರೆಗೆ ಪರೀಕ್ಷಾ ಕೇಂದ್ರದಲ್ಲಿ ಇರಲಿದ್ದಾರೆ ಎಂದು ಕೊಡ್ಲಿ ಹೇಳಿದ್ದಾರೆ.
ಪರೀಕ್ಷಾ ವೇಳಾಪಟ್ಟಿ
ಮಾ. 28ರಂದು ಬೆಳಿಗ್ಗೆ 9.30ಕ್ಕೆ ಪ್ರಥಮ ಭಾಷೆಗಳಾದ ಕನ್ನಡ, ಇಂಗ್ಲಿಷ್ ಹಾಗೂ ಉರ್ದು, ಮಾ. 29ರಂದು ಬೆಳಿಗ್ಗೆ 9.30ಕ್ಕೆ ಕೋರ್ಸಬ್ಜೆಕ್ಟ್ (ಜಿಟಿಎಸ್ ಮತ್ತು ಅಂಧ ವಿದ್ಯಾರ್ಥಿಗಳಿಗೆ), ಏ. 1ರಂದು ಬೆಳಿಗ್ಗೆ 9.30ಕ್ಕೆ ಗಣಿತ, ಏ. 3ರಂದು ಬೆಳಿಗ್ಗೆ 9.30ರಿಂದ 12.45ರವರೆಗೆ ವಿಜ್ಞಾನ, ಏ. 4ರಂದು ಬೆಳಿಗ್ಗೆ 9.30ಕ್ಕೆ ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಏ.7ರಂದು ಬೆಳಿಗ್ಗೆ 9.30ಕ್ಕೆ ಸಮಾಜ ವಿಜ್ಞಾನ, ಏ.9ರಂದು ಬೆಳಿಗ್ಗೆ 9.30ಕ್ಕೆ ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಪರೀಕ್ಷೆಗಳು ನಡೆಯಲಿವೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.