ಪರೋಪಕಾರಿಯಾದರೆ ಜೀವನಕ್ಕೆ ಸಾರ್ಥಕತೆ

7

ಪರೋಪಕಾರಿಯಾದರೆ ಜೀವನಕ್ಕೆ ಸಾರ್ಥಕತೆ

Published:
Updated:
ಪರೋಪಕಾರಿಯಾದರೆ ಜೀವನಕ್ಕೆ ಸಾರ್ಥಕತೆ

ಪೂಜಾ ಪಂತ್

ಕಥೆ–1, ನನ್ನ ಹೆಸರು ಬಾಲಿ, ನಾನು ಹತ್ತನೇ ತರಗತಿ ಓದುತ್ತಿದ್ದೇನೆ. ಒಂದು ದಿನ ಗೆಳತಿಯ ಮನೆಗೆ ಹೋಗಿ ಮರಳಿ ಮನೆಗೆ ಬಂದಾಗ ತಡವಾಗಿತ್ತು. ಇದರಿಂದ ಕುಪಿತರಾಗಿದ್ದ ಅಪ್ಪ, ಅಮ್ಮ ಮತ್ತು ಅಣ್ಣ ನನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ನಂತರದ ದಿನಗಳಲ್ಲಿ ಶಾಲೆ ಮತ್ತು ಹೊರಗಡೆ ಯಾವುದೇ ಹುಡುಗನ ಜೊತೆ ಮಾತನಾಡದಂತೆ ತಾಕೀತು ಮಾಡುತ್ತಿದ್ದಾರೆ. ಮನೆಯವರ ಕಿರುಕುಳದಿಂದ ನಾನು  ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ.

  ಕಥೆ–2, ನನ್ನ ಹೆಸರು ಅಶ್ವಿನಿ. ನಾನು 7ನೇ ತರಗತಿಯಲ್ಲಿ ಓದುತ್ತಿದ್ದೇನೆ. ಒಂದು ಸಂಜೆ ಅಮ್ಮ ಮನೆಯಲ್ಲಿ ಇಲ್ಲದಿರುವಾಗ ಅಪ್ಪ ಯಾವುದೇ ಕಾರಣವಿಲ್ಲದೇ ನನ್ನ ಹೊಡೆದರು. ಇದರಿಂದ ಭಯ ಭೀತಳಾಗಿ ಮನೆಯಿಂದ ಓಡಿ ಹೋಗಿ ಪಾರ್ಕ್ ನಲ್ಲಿ ಕುಳಿತಿದ್ದೆ. ನನ್ನ ನೋಡಿದ ಚಿಕ್ಕಪ್ಪ  ಮಧ್ಯರಾತ್ರಿ ಮನೆಗೆ ಕರೆದುಕೊಂಡು ಬಂದರು. ಮತ್ತೆ ಅಪ್ಪ, ಅಮ್ಮ ಇಬ್ಬರೂ ಹೊಡೆದರು. ಈಗ ಶಾಲೆ ಬಿಡಿಸಿ ಮನೆ ಕೆಲಸ ಮಾಡಲು ಹಚ್ಚಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ನಿತ್ಯ ಥಳಿಸುತ್ತಾರೆ.

  ದಕ್ಷಿಣ ದೆಹಲಿಯ ಸ್ಥಳೀಯ ಸಮುದಾಯ ಬಾನುಲಿಯಲ್ಲಿ ಈ ಎರಡು ಕಥೆಗಳು ಬಿತ್ತರಗೊಂಡವು. ಬಳಿಕ ಆ ಇಬ್ಬರು ಬಾಲಕಿಯ ನೆರವಿಗೆ ವಾಯ್ಸ್ ಆಫ್ ವುಮನ್ ಮೀಡಿಯಾ ಧಾವಿಸಿತು. ಇಂತಹ ನೂರಾರು  ನೋವಿನ ಕಥೆಗಳನ್ನು ಜಗತ್ತಿಗೆ ಕೇಳಿಸಿ ಸದ್ದಿಲ್ಲದೇ ಅವರ ನೆರವಿಗೆ ಸ್ಪಂದಿಸುತ್ತಿರುವ ಯುವತಿ ಪೂಜಾ ಪಂತ್.

ವಾಯ್ಸ್ ಆಫ್ ವುಮನ್ ಮೀಡಿಯಾದ ಸಹ ಸಂಸ್ಥಾಪಕಿಯಾಗಿರುವ  ಪೂಜಾ ಪಂತ್  ಬಾಲಕಿಯರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯದ ಕಥೆಗಳನ್ನು ತಮ್ಮ ಸ್ಥಳೀಯ ಬಾನುಲಿಯಲ್ಲಿ ‘ಮೇರಿ ಕಹಾನಿ ಮೇರಿ ಜುಬಾನಿ’ ( ನನ್ನ ದನಿ, ನನ್ನ ಕಥೆ) ಎಂಬ ಕಾರ್ಯಕ್ರಮದ ಮೂಲಕ ಪ್ರಸಾರ ಮಾಡುತ್ತಿದ್ದಾರೆ.

ಇವರ ವಿನೂತನ ಸೇವೆಗೆ ವಿಶ್ವಸಂಸ್ಥೆ 2012ನೇ ಸಾಲಿನ ಶ್ರೇಷ್ಠ ಯುವ ಸಾಧಕಿ  ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ವೆಬ್ ವಿಳಾಸ: www.Voices of Women Media.org

ಅವಿರಾಲ್ ಗುಪ್ತ

‘ನನ್ನ ಕೈಲಾದ ಮಟ್ಟಿಗೆ ಬಡವರಿಗೆ ಸಹಾಯ ಮಾಡುತ್ತೇನೆ’ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಚನ ನೀಡಿದ್ದ ಯುವಕನೊಬ್ಬ ಇಂದು ಅದರಂತೆ ನಡೆದುಕೊಳ್ಳುತ್ತಿದ್ದಾನೆ.ಅವಿರಾಲ್ ಗುಪ್ತ ಉತ್ತರಖಂಡ್ ರಾಜ್ಯದಲ್ಲಿ  ಬಡವರ ಬಂಧು ಎಂದೇ ಖ್ಯಾತಿ. ವೃತ್ತಿಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿರುವ ಅವಿರಾಲ್ ಗುಪ್ತ ತಮ್ಮ ದುಡಿಮೆಯಲ್ಲಿ ಉಳಿಸಿದ ಹಣವನ್ನು ಬಡವರ ಅಭಿವೃದ್ಧಿಗೆ ಬಳಸುತ್ತಿದ್ದಾರೆ.ಕಳೆದ ವರ್ಷ  ಡೆಹ್ರಾಡೂನ್ ಸಮೀಪದಲ್ಲಿರುವ ಮಕ್ಕಾಮಲಾ ಎಂಬ ಹಿಂದುಳಿದ ಹಳ್ಳಿಯಲ್ಲಿ ಬಡವರ ಜೀವನ ಮಟ್ಟ ಸುಧಾರಣೆಗಾಗಿ ಕಿರು  ಸಾಲ ಯೋಜನೆಯನ್ನು ಪ್ರಾರಂಭಿಸಿದ್ದಾರೆ.  ಬಾಂಗ್ಲಾದೇಶದ ನೊಬೆಲ್  ಪುರಸ್ಕೃತ ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಅವರ ಸ್ಫೂರ್ತಿಯಿಂದ  ಗುಪ್ತ ಈ ಕಿರು ಸಾಲ ಯೋಜನೆಯನ್ನು ಆರಂಭಿಸಿದ್ದಾರೆ. ಬಾಂಗ್ಲಾದಲ್ಲಿ ಯೂನಸ್ ಅವರ ಕಿರು ಸಾಲ ಯೋಜನೆ ವಿಶ್ವಪ್ರಸಿದ್ಧಿ ಪಡೆಯುವ ಮೂಲಕ ಬಡ ಮತ್ತು ಅಭಿವೃದ್ಧಿಶೀಲ ದೇಶಗಳೂ ಈ ಯೋಜನೆಯನ್ನು ಅಳವಡಿಸಿಕೊಂಡಿದ್ದು ವಿಶೇಷ.ಮೊದಲ ಹಂತದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಸಣ್ಣ  ವ್ಯಾಪಾರ ಮಾಡಲು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಕಿರು ಸಾಲ ನೀಡಿದ್ದರು. ಮಹಿಳೆಯರು  ಇದನ್ನು ಸದುಪಯೋಗಪಡಿಸಿಕೊಂಡು ಸೆಣಬಿನ ಕೈಚೀಲ ಮತ್ತು ಶಾಲಾ ಬ್ಯಾಗ್‌ಗಳನ್ನು ತಯಾರಿಸಿ  ಮಾರಾಟ ಮಾಡಿ ಲಾಭ ಪಡೆದಿದ್ದರು. ಆದರೆ ಬಹುತೇಕ ಪುರುಷರು ಸಾಲದ ಹಣವನ್ನು ಜೂಜು ಮತ್ತು ಸಾರಾಯಿ ಕುಡಿತಕ್ಕೆ ವಿನಿಯೋಗಿಸಿದ್ದರು. ಇದನ್ನು ಅರಿತ ಗುಪ್ತ ಪುರುಷರಿಗೆ ಸಾಲ ನೀಡುವುದನ್ನು ನಿಲ್ಲಿಸಿದರು. ಪ್ರಸ್ತುತ ಮಹಿಳೆಯರಿಗೆ ಮಾತ್ರ ಕಿರು ಸಾಲ ನೀಡಲಾಗುತ್ತಿದೆ.ಮಕ್ಕಾಮಲಾ ಗ್ರಾಮದ ಮಹಿಳೆಯರು ಶಾಲಾ ಬ್ಯಾಗ್‌ಗಳು , ಸ್ವೆಟರ್‌ಗಳು, ಮಫ್ಲರ್‌ಗಳು ಮತ್ತು ಪ್ಲಾಸ್ಟಿಕ್ ಆಟಿಕೆಗಳನ್ನು ತಯಾರಿಸಿ ತಾವೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ  ನಮ್ಮ ಜೀವನ ಮಟ್ಟ ಸುಧಾರಣೆಗೊಂಡಿದೆ ಎನ್ನುತ್ತಾರೆ ಫಲಾನುಭವಿ ಮಹಿಳೆಯರು.  ಈ ಕಾರ್ಯವನ್ನು ದೇಶದಾದ್ಯಂತ ವಿಸ್ತರಿಸುವ ಯೋಜನೆ ಇದೆ ಎನ್ನುತ್ತಾರೆ ಗುಪ್ತ. ಇವರ ಸೇವೆಗೆ ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ಯುವ ನೇತಾರ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

 

ವಿಜಯರಾಜೇ ಮೃತಿಕಾ

‘ನನ್ನ ಹೆಸರು ವಿಜಯರಾಜೇ ಮೃತಿಕಾ. ಅಪ್ಪ ರೈತ, ಅಮ್ಮ ಗೃಹಿಣಿ. ಉತ್ತರ ಶ್ರೀಲಂಕಾದ ಬಾಟಿಕೋಲಾ ಪಟ್ಟಣ ಸಮೀಪದ ಪುಟ್ಟ ಹಳ್ಳಿಯಲ್ಲಿ ನಮ್ಮ ವಾಸ. ನಮ್ಮದು ಸುಖೀ ಕುಟುಂಬ. ಆಗಿನ್ನು ನನಗೆ 17 ವರ್ಷ. ಕಾಲೇಜಿನಲ್ಲಿ ಓದುತ್ತಿದ್ದೆ. ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವಿನ ಕಾಳಗದಲ್ಲಿ ನಮ್ಮ ಊರು ಎಲ್‌ಟಿಟಿಇ ವಶಕ್ಕೆ ಹೋಯಿತು.  ನಾವು ಎಲ್‌ಟಿಟಿಇ ಬಂಧಿಗಳಾದೆವು. ಮತ್ತೆ ನಡೆದ ಸೇನೆ ಮತ್ತು ಎಲ್‌ಟಿಟಿಇ ನಡುವಿನ ಯುದ್ಧದಲ್ಲಿ ಅಪ್ಪ ಅಮ್ಮ ನನ್ನಿಂದ ದೂರವಾದರು, ನಾನು ವಿಶ್ವಸಂಸ್ಥೆ ನಡೆಸುತ್ತಿದ್ದ ನಿರಾಶ್ರಿತರ ಶಿಬಿರ ಸೇರಿದೆ. ನನ್ನ ಬದುಕಿಗೆ ಆ ಶಿಬಿರ ಹೊಸ ರೂಪ ನೀಡಿತು...’  ಸಾವಿರಾರು ಜನರು ನೆರೆದಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜಯರಾಜೇ ಮೃತಿಕಾ ತಮ್ಮ ಕಷ್ಟದ ದಿನಗಳನ್ನು ನೆನೆದು ಕಂಬನಿ ಮಿಡಿದದ್ದು ಹೀಗೆ.

ವಿಶ್ವಸಂಸ್ಥೆ ನೀಡುವ ‘ಶ್ರೇಷ್ಠ ಯುವ ಸಾಧಕಿ ಪ್ರಶಸ್ತಿ ಸ್ವೀಕರಿಸಿದ ಮೃತಿಕಾ ತಮ್ಮ ಯಶೋಗಾಥೆಯನ್ನು ಜನರ ಮುಂದಿಟ್ಟ ಪರಿ ಇದು. ಹೆತ್ತವರು ಬದುಕಿರುವರೋ ಸತ್ತಿರುವರೋ ಎಂಬುದು ಗೊತ್ತಿರಲಿಲ್ಲ. ಓದು ಇಲ್ಲವಾಗಿತ್ತು. ಶಿಬಿರದಲ್ಲಿ ಅಪರಿಚಿತ ಸಂತ್ರಸ್ಥರ ಜೊತೆ ಬದುಕಬೇಕಾಗಿತ್ತು. ಜೀವನ ದುಸ್ತರವೆನಿಸಿ ಆತ್ಮಹತ್ಯೆಗೆ ಮಾನಸಿಕವಾಗಿ ಸಿದ್ಧಳಾಗಿದ್ದೆ.ನಮ್ಮ ಶಿಬಿರ ಶಾಲೆಯಲ್ಲಿದ್ದರಿಂದ ಅಲ್ಲಿನ ಕಪ್ಪು ಫಲಕದ ಮೇಲೆ ಯುದ್ಧ ಸಂತ್ರಸ್ಥರ  ಬದುಕು ಮತ್ತು ಕಾಳಗದ ಭಯಾನಕ ದೃಶ್ಯಗಳನ್ನು ಚಿತ್ರಿಸುತ್ತಿದ್ದೆ. ಇದನ್ನು ಗಮನಿಸಿದ ಶಿಬಿರದ ಮುಖ್ಯಸ್ಥರೊಬ್ಬರು ನನ್ನ ಕಲೆಗೆ ಪ್ರೋತ್ಸಾಹ ನೀಡಿ, ಕಲಾಕೃತಿ  ರಚನೆಗೆ   ಬೇಕಾದ ಸಾಮಗ್ರಿಗಳನ್ನು ತರಿಸಿಕೊಟ್ಟರು. ಆ ವೇಳೆಗೆ ಅಪ್ಪ ಅಮ್ಮ  ನಮ್ಮ ಶಿಬಿರಕ್ಕೆ ಮರಳಿದರು. ಮತ್ತೆ ನನ್ನಲ್ಲಿ ಜೀವನೋತ್ಸಾಹ ಚಿಮ್ಮಿತು. ಯುದ್ಧದ ಸನ್ನಿವೇಶ ಮತ್ತು ಸಂತ್ರಸ್ತರ ಬದುಕನ್ನು ಚಿತ್ರಿಸುತ್ತ ಅಲ್ಲಿ ಎರಡು ವರ್ಷ ಕಳೆದೆ. ನನ್ನ ಕಲೆಯನ್ನು ಗುರುತಿಸಿದ ವಿಶ್ವಸಂಸ್ಥೆ  ಈ ಪ್ರಶಸ್ತಿ ನೀಡಿದೆ ಎಂದು ಭಾವುಕರಾದರು.ಮೃತಿಕಾ ಶ್ರೀಲಂಕಾದ ಶ್ರೇಷ್ಠ ಚಿತ್ರ ಕಲಾವಿದೆ. ಇವರು ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry