ಸೋಮವಾರ, ಅಕ್ಟೋಬರ್ 21, 2019
26 °C

ಪರ್ತ್‌ನಲ್ಲಿ ಭಾರತಕ್ಕೆ ಕಠಿಣ ಸವಾಲು

Published:
Updated:

ಪರ್ತ್ (ಪಿಟಿಐ): ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಕ್ರಿಕೆಟ್ ಟೆಸ್ಟ್ ನಡೆಯುವ ಪರ್ತ್‌ನ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಕ್ರೀಡಾಂಗಣದ (ಡಬ್ಲ್ಯುಎಸಿಎ) ಪಿಚ್ ವಿಶ್ವದ ಅತ್ಯಂತ ವೇಗದ ಪಿಚ್‌ಗಳಲ್ಲಿ ಒಂದಾಗಿದೆ. ಈ ಬಾರಿಯೂ ಪಿಚ್ ವೇಗ ಹಾಗೂ ಬೌನ್ಸ್‌ಗೆ ನೆರವು ನೀಡಲಿದೆ ಎಂದು ಕ್ಯುರೇಟರ್ ತಿಳಿಸಿದ್ದಾರೆ.ಭಾರತ ಈಗಾಗಲೇ ಸರಣಿಯಲ್ಲಿ 0-2 ರಲ್ಲಿ ಹಿನ್ನಡೆಯಲ್ಲಿದೆ. ಮೆಲ್ಬರ್ನ್ ಮತ್ತು ಸಿಡ್ನಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಅಲ್ಪ ನೆರವು ನೀಡಿತ್ತು. ಅಂತಹ ಪಿಚ್‌ನಲ್ಲೂ ಭಾರತದ ಬ್ಯಾಟ್ಸ್ ಮನ್‌ಗಳು ವಿಫಲರಾಗಿದ್ದರು. ಇದೀಗ ಡಬ್ಲ್ಯುಎಸಿಎ ಕ್ರೀಡಾಂಗಣದಲ್ಲಿ ತಂಡದ ಪ್ರದರ್ಶನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.ಡಬ್ಲ್ಯುಎಸಿಎ ಕ್ರೀಡಾಂಗಣದ ಕ್ಯುರೇಟರ್ ಕ್ಯಾಮರನ್ ಸದರ್ಲೆಂಡ್ ಅವರ ಹೇಳಿಕೆಯನ್ನು ನೋಡಿದರೆ ಮೂರನೇ ಟೆಸ್ಟ್‌ನಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಮತ್ತಷ್ಟು ಸವಾಲು ಎದುರಾಗಲಿದೆ. `ಮೂರನೇ ಟೆಸ್ಟ್‌ಗೆ ಸಿದ್ಧಗೊಂಡಿರುವ ಪಿಚ್ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಸಿದ್ಧಪಡಿಸಿದ್ದ ಪಿಚ್‌ಅನ್ನೇ ಹೋಲುತ್ತಿದೆ. ಅಲ್ಪ ಹುಲ್ಲನ್ನು ಉಳಿಸಿಕೊಳ್ಳಲಾಗಿದೆ~ ಎಂದು ಸದರ್ಲೆಂಡ್ `ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್~ಗೆ ತಿಳಿಸಿದ್ದಾರೆ.`ಕಳೆದ ಕೆಲ ವರ್ಷಗಳಿಂದ ಇಲ್ಲಿ ವಿಭಿನ್ನ ರೀತಿಯ ಹುಲ್ಲನ್ನು ಬೆಳೆಸಿದ್ದೇವೆ. ಇದು ನಿಜವಾಗಿಯೂ ಚೆನ್ನಾಗಿದೆ~ ಎಂದ ಅವರು, `ಹೊಸ ಚೆಂಡಿನೊಂದಿಗೆ ಬೌಲಿಂಗ್ ನಡೆಸುವ ಸಂದರ್ಭ ಸಾಕಷ್ಟು ಬೌನ್ಸ್ ಲಭಿಸಬಹುದು. ಬಳಿಕ ಇದು ಬ್ಯಾಟಿಂಗ್‌ಗೆ ನೆರವು ನೀಡಲಿದೆ~ ಎಂದಿದ್ದಾರೆ.ಎರಡೂ ತಂಡಗಳು ಸ್ಪಿನ್ನರ್‌ನ್ನು ಕಣಕ್ಕಿಳಿಸದೆ ವೇಗದ ಬೌಲರ್‌ಗಳೊಂದಿಗೆ ಆಡುವುದು ಒಳ್ಳೆಯದೇ ಎಂಬ ಪ್ರಶ್ನೆಗೆ ಉತ್ತರಿಸಲು ಸದರ್ಲೆಂಡ್ ನಿರಾಕರಿಸಿದರು. ಮೂರನೇ ಟೆಸ್ಟ್ ಪಂದ್ಯ ಜನವರಿ 13 ರಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ನಾಲ್ಕು ವೇಗಿಗಳನ್ನು ಆಡಿಸುವ ಸಾಧ್ಯತೆಯಿದೆ. ಆದರೆ ಕೋಚ್ ಮಿಕಿ ಆರ್ಥರ್ ತಂಡದ ಬೌಲಿಂಗ್ ವಿಭಾಗದಲ್ಲಿ `ಸಮತೋಲನ~ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸ್ಪಿನ್ನರ್ ನಥಾನ್ ಲಿನ್ ಅವರನ್ನು ಆಡಿಸಲು ಬಯಸಿದ್ದಾರೆ.

Post Comments (+)