ಮಂಗಳವಾರ, ಜೂನ್ 15, 2021
26 °C

ಪರ್ಯಾಯ ಇಂಧನ: ಚಿಂತನೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂದಿನ 40-50 ವರ್ಷಗಳಲ್ಲಿ ಪೆಟ್ರೋಲ್/ ಡೀಸೆಲ್ ಬರಿದಾಗುವ ಅಪಾಯವಿರುವ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ಮೂಲಗಳ ಬಳಕೆಯತ್ತ ಗಂಭೀರ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2012~ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ವಿಶ್ವದ ಜನಸಂಖ್ಯೆ 2050ರ ವೇಳೆಗೆ ಸರಿ ಸುಮಾರು ಎರಡು ಪಟ್ಟು ಹೆಚ್ಚುವ ಸಾಧ್ಯತೆಯಿದೆ. ಅಂತೆಯೇ, ವಾಹನಗಳ ಬಳಕೆ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಇದರಿಂದ ನಾವು ಬರಿದಾಗುವ ಪೆಟ್ರೋಲ್-ಡೀಸೆಲ್ ಅನ್ನು ಸಂಪೂರ್ಣ ಅವಲಂಬಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಎಥೆನಾಲ್‌ನಂತಹ ಪರ್ಯಾಯ ಇಂಧನ ಮೂಲಗಳನ್ನು ಹೆಚ್ಚು ಹೆಚ್ಚು ಬಳಸುವ ಬಗ್ಗೆ ಯೋಚಿಸಬೇಕಾಗಿದೆ~ ಎಂದರು.`1932ರಲ್ಲಿಯೇ ಬ್ರೆಜಿಲ್ ಇಂಧನದಲ್ಲಿ ಎಥೆನಾಲ್ ಬಳಸುವ ಮೂಲಕ ಎಲ್ಲ ದೇಶಗಳಿಗೂ ಮಾದರಿಯಾಗಿದೆ. ಅಂತೆಯೇ, ಮುಂಬೈನಲ್ಲಿಯೂ 1945-46ರಲ್ಲಿ ಸಾರಿಗೆ ವಾಹನಗಳಿಗೆ ಪೆಟ್ರೋಲ್-ಡೀಸೆಲ್‌ನಲ್ಲಿ ಎಥೆನಾಲ್ ಬಳಸಲಾಯಿತು. ಅದೇ ರೀತಿ, ದೇಶದ ಎಲ್ಲೆಡೆ ವಾಹನಗಳಲ್ಲಿ ಅಧಿಕ ಪ್ರಮಾಣದಲ್ಲಿ ಎಥೆನಾಲ್ ಬಳಸಬೇಕಾಗಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ವಿಜ್ಞಾನ, ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ `ಇಂಧನ ಭದ್ರತೆ~ಯಲ್ಲೂ ಸ್ವಾವಲಂಬಿಗಳಾಗಬೇಕಾಗಿದೆ~ ಎಂದರು.ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಆರ್. ಪ್ರಭಾಕರ್, `ಒಂದೆಡೆ ಪರಿಸರ ನಾಶ ಹಾಗೂ ಮತ್ತೊಂದೆಡೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಸೂರ್ಯನ ಶಾಖವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ~ ಎಂದರು.`ಪರಿಸರ ಸಂರಕ್ಷಣೆ ಹಾಗೂ ಪರ್ಯಾಯ ಇಂಧನ ಬಳಕೆ ಬಗ್ಗೆ ಎಲ್ಲರಲ್ಲೂ ಸಾಮೂಹಿಕ ಪ್ರಜ್ಞೆ ಬರಬೇಕು. ನಮ್ಮೆಲ್ಲರಿಗೂ ಇರುವುದೊಂದೇ ಭೂಮಿ. ಅದು ಎಲ್ಲರ ಆಸ್ತಿ. ಅದನ್ನು ಕಾಪಾಡುವುದು ಕೂಡ ನಮ್ಮೆಲ್ಲರ ಜವಾಬ್ದಾರಿಯಾಗಿದೆ~ ಎಂದರು.ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಎಂ.ಎಸ್. ಮೋಹನ್‌ಕುಮಾರ್ ಮಾತನಾಡಿದರು. ಮಂಡಳಿ ಫೆಲೋ ಡಾ.ಎಸ್.ಜಿ.ಎಸ್. ಸ್ವಾಮಿ ಸ್ವಾಗತಿಸಿದರು. ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಂ. ಪೃಥ್ವಿರಾಜ್ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.