ಪರ್ಯಾಯ ಜಲ ಸಮಾವೇಶ

7

ಪರ್ಯಾಯ ಜಲ ಸಮಾವೇಶ

Published:
Updated:

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ `ಬೆಂಗಳೂರು ವಿಶ್ವ ಜಲ ಸಮಾವೇಶ~ ವನ್ನು ವಿರೋಧಿಸಿ ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆ ಬುಧವಾರ ಆನಂದ್‌ರಾವ್ ವೃತ್ತದ ಬಳಿಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿತು.

ಸಂಘಟನೆಯ ಅಧ್ಯಕ್ಷ ಎಂ.ಆರ್. ಪ್ರಭಾಕರ್ ಮಾತನಾಡಿ, `ಪ್ರಾಕೃತಿಕ ಸಂಪನ್ಮೂಲವಾದ ನೀರನ್ನು ನಮ್ಮ ನೆಲದಲ್ಲಿ ನಮಗೇ ಮಾರಾಟ ಮಾಡುವ ಕಂಪೆನಿಗಳಿಗೆ ಸರ್ಕಾರ ಮಣೆ ಹಾಕುತ್ತಿದೆ. ವಿದೇಶಿ ಕಂಪೆನಿಗಳನ್ನು ರಾಜ್ಯಕ್ಕೆ ಕರೆತಂದು ನಾಡಿನ ಜನರ ನೀರಿನ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ರಾಜ್ಯ ಸರ್ಕಾರವೇ ಉತ್ತೇಜನ ನೀಡುತ್ತಿರುವುದು ದುರಂತ~ ಎಂದರು.

`ಜಲ ಸಮಾವೇಶ ದೇಶಕ್ಕೇ ಮಾದರಿ ಕಾರ್ಯಕ್ರಮ ಎಂಬಂತೆ ಬಿಂಬಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ ಮತ್ತು ಬೆಳಗಾವಿ ನಗರಗಳಲ್ಲಿ ಮೊದಲ ಹಂತವಾಗಿ ನೀರಿನ ಖಾಸಗೀಕರಣದ ಪ್ರಾಯೋಗಿಕ ಪ್ರಯತ್ನಗಳು ನಡೆಯುತ್ತಿವೆ. ನಗರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ರಾಜ್ಯದ ಇತರೆ ಮಹಾನಗರಗಳಲ್ಲಿ ಸ್ಥಳೀಯ ನೀರು ಸರಬರಾಜು ಮಂಡಳಿಗಳಿವೆ. ಇವುಗಳಿಗೆ ಹೆಚ್ಚಿನ ಸೌಲಭ್ಯ ನೀಡಿ, ಈ ಸಂಸ್ಥೆಗಳನ್ನೇ ಬಲಪಡಿಸುವ ಕಾರ್ಯಗಳಾಗಬೇಕು. ಅದನ್ನು ಬಿಟ್ಟು ಸರ್ಕಾರ ವಿದೇಶಿ ಕಂಪೆನಿಗಳನ್ನು ಸ್ವಾಗತಿಸುತ್ತಿರುವ ಕ್ರಮ ಸರಿಯಲ್ಲ. ಸರ್ಕಾರ ಖಾಸಗಿ ಕಂಪೆನಿಗಳ ಒತ್ತಡಕ್ಕೆ ಮಣಿದು ನೀರಿನ ಖಾಸಗೀಕರಣ ಮಾಡಬಾರದು~ ಎಂದು ಅವರು ಒತ್ತಾಯಿಸಿದರು.

`ವಿಶ್ವ ಜಲ ಸಮಾವೇಶಕ್ಕೆ ಪರ್ಯಾಯವಾಗಿ ಗುರುವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ `ಜನರ ನೀರಿನ ಸಮಾವೇಶ~ವನ್ನು ಆಯೋಜಿಸಲಾಗಿದೆ. ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ಮೈಸೂರಿನ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಪರ್ಯಾಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ~ ಎಂದು ಅವರು ತಿಳಿಸಿದರು.

ವಿಶ್ವ ಜಲ ಸಮಾವೇಶವನ್ನು ವಿರೋಧಿಸಿ ಸಂಘಟನೆಯ ಕಾರ್ಯಕರ್ತರು ನಗರದ ಆನಂದ್‌ರಾವ್ ವೃತ್ತದ ಬಳಿಯ ಮಹಾತ್ಮಾಗಾಂಧಿ ಪ್ರತಿಮೆಯಿಂದ ಕಾವೇರಿ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಸಂಘಟನೆಯ ಸಮನ್ವಯಕಾರ ಕ್ಷಿತಿಜ ಅರಸ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ನಾರಾಯಣ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry