ಮಂಗಳವಾರ, ಏಪ್ರಿಲ್ 20, 2021
29 °C

ಪರ್ಯಾಯ ರಾಜಕಾರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸ್ವಾತಂತ್ರ್ಯಾನಂತರ ದೇಶದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಒಂದು ಜನಪರ ರಾಜಕಾರಣ ಸೃಷ್ಟಿ ಇಂದಿನ ಅಗತ್ಯವಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಪ್ರತಿಪಾದಿಸಿದರು.ಇಲ್ಲಿನ ವೆಂಕಟೇಶ ಕಲ್ಯಾಣ ಮಂಟಪದಲ್ಲಿ ಗುರುವಾರ ಬಿಎಸ್‌ಪಿ ವತಿಯಿಂದ ಏರ್ಪಡಿಸಿದ್ದ `ಜನಜಾಗೃತಿ ಆಂದೋಲನ~ ಉದ್ಘಾಟಿಸಿ ಅವರು ಮಾತನಾಡಿದರು. “ಮಾನವ ಸಂಪನ್ಮೂಲ ಹಾಗೂ ಪ್ರಕೃತಿ ಸಂಪತ್ತು ಅಪಾರ ಪ್ರಮಾಣದಲ್ಲಿ ಲಭ್ಯವಿರುವ ನಮ್ಮ ದೇಶದಲ್ಲಿ ಮೂರನೇ ಒಂದರಷ್ಟು ಜನರಿಗೆ ಜಮೀನು ಇಲ್ಲ ಇನ್ನೊಂದೆಡೆ ಶೇ. 26ರಷ್ಟು ನಿರುದ್ಯೋಗಿಗಳು ಇಲ್ಲಿದ್ದಾರೆ. ಕಡಬಡತನದಲ್ಲಿ ಶೇ. 36ರಷ್ಟು ಮಂದಿ ಬದುಕು ಸಾಗಿಸುತ್ತಿದ್ದು, ದೇಶದ ಹತ್ತು ಕೋಟಿ ಜನರು ರಾತ್ರಿ ಹೊತ್ತು ಊಟವಿಲ್ಲದೇ ನಿದ್ರಿಸುವ ಅಘಾತಕಾರಿ ಸಂಗತಿ ನಮ್ಮೆದುರಿಗೆ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದೇ ಮಾಡದೇ ಇರುವುದರಿಂದ, ಕೃಷಿ ನಷ್ಟದಾಯಕ ಎನಿಸಿದೆ. ಇದರಿಂದ ಬೇಸಾಯ ಕೈಬಿಡುವವರ ಸಂಖ್ಯೆ ಶೇ 45ರಷ್ಟಾಗಿದೆ. ಇದೂ ಸಾಲದೆಂಬಂತೆ  ಅರ್ಧ ತಾಸಿಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿಜ್ಞಾನ- ತಂತ್ರಜ್ಞಾನದಲ್ಲಿ ಬಹು ದೊಡ್ಡ ಸಾಧನೆ ಮಾಡಿದ್ದರೂ ನಮ್ಮ ದೇಶದ ಮುಕ್ಕಾಲು ಭಾಗ ಹಳ್ಳಿಗಳಲ್ಲಿ ಜಾತಿ ದಬ್ಬಾಳಿಕೆ, ಅತ್ಯಾಚಾರ, ಅಸ್ಪೃಶ್ಯತೆ ತಾಂಡವವಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಸ್ವಾತಂತ್ರ್ಯಾನಂತರ ದೇಶವನ್ನು ಆಳುವ ಕಾಂಗ್ರೆಸ್, ಬಿಜೆಪಿ ಇನ್ನಿತರ ಪಕ್ಷಗಳು ಎಲ್ಲ ಚುನಾವಣೆಗಳಲ್ಲೂ ಮತದಾರರ ಭಾವನೆ ದುರುಪಯೋಗಪಡಿಸಿಕೊಂಡು ಅಧಿಕಾರದ ಗದ್ದುಗೆ ಏರುತ್ತವೆ. ಆದರೆ ಮತ ಎಂಬ ಪ್ರಬಲ ಅಸ್ತ್ರವನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ ಎಂಬುದೇ ವಿಪರ್ಯಾಸ. ಈ ಹಿನ್ನೆಲೆಯಲ್ಲಿ `ಓಟಿನ ಮಹತ್ವ ತಿಳಿಸೋಣ- ಪ್ರಜಾಪ್ರಭುತ್ವ ಉಳಿಸೋಣ~ ಎಂಬ ಜನಜಾಗೃತಿ ಆಂದೋಲನವನ್ನು ಬಿಎಸ್‌ಪಿ ಗುಲ್ಬರ್ಗ (ದಕ್ಷಿಣ ವಿಧಾನಸಭೆ ಮತಕ್ಷೇತ್ರ ಘಟಕ) ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದ ಮಾರಸಂದ್ರ ಮುನಿಯಪ್ಪ ವಿವರಿಸಿದರು.ಪಕ್ಷದ ರಾಜ್ಯ ಕಾರ್ಯದರ್ಶಿ ಶಿವಲಿಂಗಪ್ಪ ಕಿನ್ನೂರ, ಜಿಲ್ಲಾಧ್ಯಕ್ಷ ಮಹಾದೇವ ಧನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ವಾಸು, ಮುಖಂಡರಾದ ಶಂಕರ ಭಯ್ಯಾ, ಮಶಾಕ್‌ಪಟೇಲ್ ಉಪಸ್ಥಿತರಿದ್ದರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.