ಪರ್ಯಾಯ ವಿದ್ಯುತ್ ಮೂಲ ಅಗತ್ಯ

7

ಪರ್ಯಾಯ ವಿದ್ಯುತ್ ಮೂಲ ಅಗತ್ಯ

Published:
Updated:

ಬೆಂಗಳೂರು: ಪದೇ ಪದೇ ವಿದ್ಯುತ್ ಕಡಿತ ಸಂಭವಿಸಿದಾಗ ಹೆಚ್ಚು ಸಂಕಷ್ಟ ಅನುಭವಿಸುವುದು ಬೆಂಗಳೂರು ಜಲಮಂಡಲಿ. ನೀರು ಸರಬರಾಜಿಗೆ ಅವಶ್ಯಕವಾದ ವಿದ್ಯುತ್‌ಗಾಗಿ ಮಂಡಲಿ ಸಂಪೂರ್ಣವಾಗಿ ಕೆಪಿಟಿಸಿಎಲ್ ಅನ್ನು ಅವಲಂಬಿಸಿರುವುದು ಇದಕ್ಕೆ ಕಾರಣ.1991ರಲ್ಲಿಯೇ ಪರ್ಯಾಯ ವಿದ್ಯುತ್‌ಗೆ ಹುಡುಕಾಟ ಆರಂಭಿಸಿದ ಮಂಡಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಡೀಸೆಲ್ ಜನರೇಟರ್ ಘಟಕ ಆರಂಭಿಸಲು ಚಿಂತಿಸಿತ್ತು. ಆದರೆ ಪಂಪ್‌ಹೌಸ್‌ಗಳಿರುವ ಮುಖ್ಯ ಪ್ರದೇಶಕ್ಕೆ ರೈಲು ಮಾರ್ಗ ಇಲ್ಲದೇ ಇರುವುದರಿಂದ ಡೀಸೆಲ್ ಒದಗಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ನಿರಂತರ ವಿದ್ಯುತ್ ಪೂರೈಕೆ ಘಟಕ ಸ್ಥಾಪಿಸಲು ಹೆಚ್ಚು ಹಣ ವ್ಯಯವಾಗುತ್ತದೆ. ಅಲ್ಲದೆ ಇದರ ನಿರ್ವಹಣೆ ಕೂಡ ದುಬಾರಿ ಎನ್ನುತ್ತದೆ ಜಲಮಂಡಲಿ.ಇಷ್ಟಾದರೂ ವಿದ್ಯುತ್ ಮೂಲಗಳಿಗಾಗಿ ಜಲಮಂಡಲಿಯ ಹುಡುಕಾಟ ಇನ್ನೂ ನಿಂತಿಲ್ಲ. `ನಗರದಲ್ಲಿ ಡೀಸೆಲ್ ಪೂರೈಕೆಗೆ ತೊಂದರೆ ಆಗುವುದಿಲ್ಲ. ಅಲ್ಲದೆ ಪಂಪಿಂಗ್‌ಗೆ ಹೋಲಿಸಿದರೆ ನೀರು ಪೂರೈಕೆಗೆ ಹೆಚ್ಚು ವಿದ್ಯುತ್ ಅವಶ್ಯಕವಿಲ್ಲ. ಆದ್ದರಿಂದ ಕನಿಷ್ಠ ಇಲ್ಲಾದರೂ ಜನರೇಟರ್ ಘಟಕ ಆರಂಭಿಸಬಹುದು. ಅಲ್ಲದೆ ತ್ಯಾಜ್ಯ ನೀರು ಸಂಸ್ಕರಣಾ ಕೇಂದ್ರಗಳಲ್ಲಿ ಇಂತಹ ಘಟಕ ಸ್ಥಾಪಿಸುವುದರಿಂದ ನಿರಂತರವಾಗಿ ನೀರು ಸಂಸ್ಕರಿಸಲು ಸಾಧ್ಯವಾಗುತ್ತದೆ~ ಎನ್ನುವುದು ಜಲಮಂಡಲಿ ನಿವೃತ್ತ ಅಧಿಕಾರಿಯೊಬ್ಬರ ಅಭಿಪ್ರಾಯ.ನಲ್ಲಿಯಲ್ಲಿ ಹರಿಯುವ ಹನಿ ಹನಿ ನೀರು ಕೂಡ ನಗರದ ವಿವಿಧ ಭಾಗಗಳ ಪಂಪ್‌ಹೌಸ್‌ಗಳಿಂದ ಸರಬರಾಜಾಗುತ್ತಿದ್ದು ವಿದ್ಯುತ್ ಕಡಿತ ಉಂಟಾದರೆ ನಗರದ ನೀರು ಪೂರೈಕೆಗೆ ಪೆಟ್ಟು ಬೀಳುತ್ತದೆ. ನೂರು ಕಿ.ಮೀ.ದೂರದ ತೊರೆಕಾಡನಹಳ್ಳಿಯಿಂದ ಹಾರೋಹಳ್ಳಿ, ತಾತಗುಣಿ ಮೂಲಕ ಭೌಗೋಳಿಕವಾಗಿ 550 ಮೀಟರ್ ಎತ್ತರದಲ್ಲಿರುವ ನಗರಕ್ಕೆ ಹಂತ ಹಂತವಾಗಿ ವಿದ್ಯುತ್ ಬಳಸಿ ನೀರು ಪೂರೈಸಲಾಗುತ್ತಿದೆ.

 

ಈ ಪಂಪ್‌ಹೌಸ್‌ಗಳಿಗೆ ಸೋಮನಹಳ್ಳಿಯ ವಿದ್ಯುತ್ ಗ್ರಿಡ್‌ನಿಂದ ವಿದ್ಯುತ್ ಪಡೆಯಲಾಗುತ್ತಿದೆ. ನಗರ ಸೇರಿದಂತೆ ಒಟ್ಟು 62 ಪಂಪ್‌ಗಳು ನಿರಂತರವಾಗಿ ನೀರು ಸರಬರಾಜು ಮಾಡುತ್ತಿವೆ.ಪೂರಕ ವಿದ್ಯುತ್ ವ್ಯವಸ್ಥೆ ಇಲ್ಲದೆ ಬೆಸ್ಕಾಂ ಮೇಲೆ ಮಂಡಲಿ ಸಂಪೂರ್ಣ ಅವಲಂಬಿತವಾಗಿರುವುದೇ ಸಮಸ್ಯೆಯ ಮೂಲ. ಅಧಿಕಾರಿಗಳ ಪ್ರಕಾರ ಒಂದು ಕ್ಷಣ ವಿದ್ಯುತ್ ವ್ಯತ್ಯಯವಾದರೂ ಪಂಪ್‌ಗಳು ಪುನರಾರಂಭಗೊಳ್ಳಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಇದರಿಂದ ನಗರ ಭಾಗದಲ್ಲಿರುವ ಪಂಪ್‌ಹೌಸ್‌ಗಳಿಗೆ ನೀರು ಸರಬರಾಜು ಮಾಡುವುದು ವಿಳಂಬವಾಗುತ್ತದೆ.ನಗರದ ಪೂರ್ವ ಭಾಗ ನೀರು ಸರಬರಾಜಾಗುವ ಕೊನೆಯ ಪ್ರದೇಶ. ವಿದ್ಯುತ್ ಕ

ಡಿತ ಈ ಪ್ರದೇಶದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಭಾಗದಲ್ಲಿನ ಕಲ್ಯಾಣ ನಗರದ ನಿವಾಸಿ ರಾಜಶೇಖರ್, `ನೀರು ವ್ಯತ್ಯಯದ ಬಗ್ಗೆ ಯಾವ ಸಂದರ್ಭದಲ್ಲಿಯೇ ಜಲಮಂಡಲಿ ಅಧಿಕಾರಿಗಳನ್ನು ಪ್ರಶ್ನಿಸಿದರೂ ಅವರಿಂದ ವಿದ್ಯುತ್ ಕಡಿತ ಎಂಬ ಉತ್ತರ ಬರುತ್ತದೆ. ಜನರ ಬದುಕಿಗೆ ಅತ್ಯಗತ್ಯವಾದ ನೀರಿನ ಪೂರೈಕೆಗೆ ನಿರಂತರ ವಿದ್ಯುತ್ ಒದಗಿಸಬೇಕು. ಜಲಮಂಡಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕು~ ಎನ್ನುತ್ತಾರೆ.ಈ ಮಧ್ಯೆ ನೀರು ಸರಬರಾಜಾಗುವ ಸ್ಥಳ ಹಾಗೂ ನಗರದ ಪಂಪ್‌ಹೌಸ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಬೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮತ್ತೊಂದೆಡೆ ನಗರದಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry