ಬುಧವಾರ, ಆಗಸ್ಟ್ 21, 2019
28 °C
ಸವಾಯಿ ಗಂಧರ್ವ ಕಲಾ ಮಂದಿರ ನವೀಕರಣ

ಪರ್ಯಾಯ ವ್ಯವಸ್ಥೆ: ಮನವಿಗೆ ನಿರ್ಧಾರ

Published:
Updated:

ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಕಲಾ ಮಂದಿರದ ನವೀಕರಣ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಉದ್ದೇಶಿತ ನವೀಕರಣಕ್ಕೆ ಸಂಬಂಧಿಸಿದ ನೀಲನಕ್ಷೆ, ಯೋಜನೆಯನ್ನು ಅಂತಿಮಗೊಳಿಸುವ ಪೂರ್ವದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಹಾಗೂ ಧ್ವನಿ-ಬೆಳಕು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ನವೀಕರಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.-ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಅವರ ನಿವಾಸದಲ್ಲಿ ಭಾನುವಾರ ನಡೆದ ಸಂಗೀತ, ನ್ಯತ್ಯ, ನಾಟಕ ಕ್ಷೇತ್ರಗಳ ಕಲಾವಿದರ, ಕಲಾಸಕ್ತರ ಸಭೆಯಲ್ಲಿ ಕೈಗೊಳ್ಳಲಾಗಿರುವ ಪ್ರಮುಖ ನಿರ್ಧಾರಗಳಿವು.ನವೀಕರಣ ಹಿನ್ನೆಲೆಯಲ್ಲಿ ಸವಾಯಿ ಗಂಧರ್ವ ಕಲಾ ಮಂದಿರವನ್ನು ಆ. 31ರ ನಂತರ ಕಾಮಗಾರಿ ಪೂರ್ಣಗೊಳ್ಳುವವರೆಗೆ ಯಾವುದೇ ಕಾರ್ಯಕ್ರಮಕ್ಕೆ ನೀಡಬಾರದು ಎಂಬ ಕಲಾಮಂದಿರದ ಉಸ್ತುವಾರಿ ನೋಡಿಕೊಳ್ಳುವ ಯೂಥ್ ವೆಲ್‌ಫೇರ್ ಟ್ರಸ್ಟ್‌ನ ನಿರ್ಧಾರದ ಹಿನ್ನೆಲೆಯಲ್ಲಿ ಚರ್ಚಿಸಲು ಇಂದು ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಎಲ್ಲ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು, ಅವರಿಂದ ಪರ್ಯಾಯ ವ್ಯವಸ್ಥೆ ಕುರಿತು ಭರವಸೆ ಪಡೆಯುವ ಸಂಬಂಧ 12 ಜನರನ್ನು ಒಳಗೊಂಡ ಸಮಿತಿಯೊಂದನ್ನು ಇದೇ ಸಂದರ್ಭ ರಚನೆ ಮಾಡಲಾಯಿತು.ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿರ್ಧಾರವನ್ನು ಸ್ವಾಗತಿಸಿದ ಸಭೆ, ಸದರಿ ಕಾಮಗಾರಿ ವಿಳಂಬಗೊಂಡರೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಪರ್ಯಾಯ ವ್ಯವಸ್ಥೆ ಇಲ್ಲದೇ ಇರುವ ಕುರಿತು ಕಳವಳ ವ್ಯಕ್ತಪಡಿಸಿತು.ರಂಗಕರ್ಮಿ, ಮಾಜಿ ಮೇಯರ್ ಡಾ.ಪಾಂಡುರಂಗ ಪಾಟೀಲ ಮಾತನಾಡಿ, ಸವಾಯಿ ಗಂಧರ್ವ ಕಲಾಮಂದಿರದ ನವೀಕರಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗೆ ನಿವೇದನೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯ ತಜ್ಞರೊಂದಿಗೆ ಸಮಾಲೋಚನೆ ನಂತರವಷ್ಟೇ ನವೀಕರಣದ ನೀಲ ನಕ್ಷೆ ಹಾಗೂ ಯೋಜನೆಯನ್ನು ಸಿದ್ಧಪಡಿಸುವಂತೆಯೂ ಡಿ.ಸಿ.ಗೆ ಮನವರಿಕೆ ಮಾಡಿಕೊಡಬೇಕು ಎಂದರು.`ಡಾ.ಎಸ್.ಎಸ್.ಗೋರೆ ಅವರು ತೀರಿಕೊಂಡ ನಂತರ ಸಾಂಸ್ಕೃತಿಕ ವಲಯದ ತುಡಿತವನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ವ್ಯಕ್ತಿಗಳ ಕೊರೆತ ಟ್ರಸ್ಟ್‌ನಲ್ಲಿದೆ. ನಗರದಲ್ಲಿ ಸವಾಯಿ ಗಂಧರ್ವ ಹಾಲ್ ಬಿಟ್ಟರೆ ಉತ್ತಮವಾದ ಪರ್ಯಾಯ ರಂಗಮಂದಿರವೇ ಇಲ್ಲ' ಎಂದು ರಂಗಾಯಣದ ಮಾಜಿ ನಿರ್ದೇಶಕ ಸುಭಾಷ್ ನರೇಂದ್ರ ವಿಷಾದಿಸಿದರು.`ನವೀಕರಣಕ್ಕೆ ಸಂಬಂಧಿಸಿದ ನಕಾಶೆ, ಯೋಜನೆಯಲ್ಲಿ ಯಾವ ಂಶಗಳಿವೆ ಎಂಬುದೇ ಯಾರಿಗೂ ಗೊತ್ತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರಕವಾಗಿರದ ವ್ಯವಸ್ಥೆಯಿಂದ ನವೀಕರಣದ ಉದ್ದೇಶವೇ ಈಡೇರುವುದಿಲ್ಲ' ಎಂದು ಹುಬ್ಬಳ್ಳಿ ಆರ್ಟ್ ಸರ್ಕಲ್‌ನ ಟ್ರಸ್ಟಿ ಬಾಬುರಾವ್ ಹಾನಗಲ್ ಅಭಿಪ್ರಾಯಪಟ್ಟರು.ಕಲಾ ಮಂದಿರವನ್ನು ಯಾವುದೇ ಕಾರಣಕ್ಕೂ ಮದುವೆ ಕಾರ್ಯಕ್ರಮಗಳಿಗೆ ನೀಡಬಾರದು ಎಂದು ನೃತ್ಯಗಾರ್ತಿ ಸುಜಾತಾ ರಾಜಗೋಪಾಲ ಪ್ರತಿಪಾದಿಸಿದರೆ, ರಾಜಕೀಯ ಪಕ್ಷಗಳ ಕಾರ್ಯಕ್ರವುಗಳಿಗೂ ನೀಡಬಾರದು ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಘವೇಂದ್ರ ರಾಮದುರ್ಗ ಹೇಳಿದರು.ನವೀಕರಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಇಂದಿರಾ ಗಾಜಿನ ಮನೆಯಲ್ಲಿರುವ ರಂಗ ಮಂದಿರ ಅಥವಾ ಕಿಮ್ಸ ಆವರಣದಲ್ಲಿರುವ ರಂಗ ಮಂದಿರವನ್ನು ಕಾರ್ಯಕ್ರಮಗಳನ್ನು ಸಂಘಟಿಸಲು ಒದಗಿಸಬೇಕು. ಈ ಕುರಿತು ಸಹ ಜಿಲ್ಲಾಧಿಕಾರಿಗಳ ಗಮನ ಸೆಳೆಯಬೇಕು ಎಂಬ ಅಭಿಪ್ರಾಯಗಳೂ ಕೇಳಿ ಬಂದವು.ಸ್ವದೇಶಿ ಆಂದೋಲನದ ಜಸ್ವೀರ್ ಸಿಂಗ್, ಪಾಶ್ಚಾತ್ಯ ನೃತ್ಯ ತರಬೇತುದಾರ ಹಮೀದ್, ರೆಹಮಾನ್ ಜಾವೇದ್, ಮಹೇಶ ಹಾನಗಲ್, ಸ್ವರ ಸಂಯೋಜಕ ಸ್ಟೀಫನ್ ಲೂಂಜಾಳ, ಗಾಯಕ ರವಿ ಕುಲಕರ್ಣಿ, ಗಜಾನನ ಕಾಗಲಕರ, ರಾಜಗೋಪಾಲ ಸಭೆಯಲ್ಲಿ ಉಪಸ್ಥಿತರಿದ್ದರು.ರಚನೆ: ಸವಿತಿ ಸದಸ್ಯರನ್ನಾಗಿ ಬಾಬುರಾವ್ ಹಾನಗಲ್, ಡಾ.ಪಾಂಡುರಂಗ ಪಾಟೀಲ, ಸುಭಾಷ್ ನರೇಂದ್ರ, ಸಿತಾರ್ ವಾದಕ ಶ್ರೀನಿವಾಸ ಜೋಶಿ,   ರಂಗಕರ್ಮಿ ಬಸವರಾಜ ಬೆಂಗೇರಿ, ಸುಜಾತಾ ರಾಜಗೋಪಾಲ, ಡಾ.ಗೋವಿಂದ ಮಣ್ಣೂರು, ತಾನಾಜಿ ಕವಳೇಕರ,  ರಾಘವೇಂದ್ರ ರಾಮದುರ್ಗ, ಮನೋಜ್ ಹಾನಗಲ್, ಸಾಧನಾ ನೃತ್ಯ ಅಕಾಡೆಮಿಯ ಸುಧೀರ್ ಯಾದವ್, ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಪ್ರದೀಪ ಭಟ್ ಅವರನ್ನು ಸಭೆ ಸರ್ವಾನುಮತದಿಂದ ಆಯ್ಕೆ ಮಾಡಿತು.

Post Comments (+)