ಸೋಮವಾರ, ಜನವರಿ 27, 2020
24 °C

ಪರ್ಯಾಯ ವ್ಯವಸ್ಥೆ ಮಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ.  ಇದರಿಂದ ಖಾಸಗಿ ಎಂಜಿನಿ­ಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ದುಬಾರಿ­ಯಾಗಲಿದೆ. ಶುಲ್ಕ ನಿಗದಿಗಾಗಿಯೇ ಸರ್ಕಾರ ಕಾನೂನು ಜಾರಿಗೊಳಿಸುವಾಗ ಶುಲ್ಕ  ದುಬಾರಿಯಾಗುವುದು  ವಿಪರ್ಯಾಸ.ಈ ಕಾಯ್ದೆಯ ಪ್ರಕಾರ, ಖಾಸಗಿ ಕಾಲೇಜುಗಳಲ್ಲಿ ಇನ್ನು  ಮುಂದೆ ಸರ್ಕಾರಿ ಕೋಟಾ ಸೀಟು ಇರುವುದಿಲ್ಲ.   ಅಲ್ಲದೆ ಪ್ರತಿಯೊಂದು ಕಾಲೇಜಿಗೂ ಪ್ರತ್ಯೇಕ ಶುಲ್ಕ ವ್ಯವಸ್ಥೆ  ಬರಲಿದೆ. ಇದರಿಂದ ಉನ್ನತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಹಲವರ ಕನಸಿಗೆ ತಣ್ಣೀರು ಎರಚಿದಂತಾಗುತ್ತದೆ.   ವೃತ್ತಿಶಿಕ್ಷಣ ಪ್ರವೇಶಕ್ಕಾಗಿ ಆರಂಭಿಸಿದ ಸಿಇಟಿ ಮೂಲ ಆಶಯಗಳಿಗೇ ಈ ಕ್ರಮ ಭಂಗ ತರುತ್ತದೆ ಎಂಬುದನ್ನು ಗಮ­ನಿ­ಸಬೇಕು.    ಇದರಿಂದ  ದುರ್ಬಲ ವರ್ಗಗಳ ವಿದ್ಯಾರ್ಥಿಗಳು ವೈದ್ಯ­ಕೀಯ, ಎಂಜಿನಿಯರಿಂಗ್ ವಿದ್ಯಾಭ್ಯಾಸದಿಂದ ವಂಚಿತರಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ತಕ್ಷಣವೇ ಅವರ ನೆರವಿಗೆ ಬರಬೇಕಾದ ಅಗತ್ಯವಿದೆ.ಸುಪ್ರೀಂಕೋರ್ಟ್ ಆದೇಶದ ಅನ್ವಯ ಈ ಕಾಯ್ದೆ ಜಾರಿಗೊಳಿ­ಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ರಾಜ್ಯದಲ್ಲಿ ಬಹಳಷ್ಟು ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು ರಾಜಕಾರಣಿಗಳು ಮತ್ತು ಮಠಾಧೀಶರ ಅಧೀನದಲ್ಲಿವೆ.ರಾಜಕಾರಣಿಗಳು ಹಾಗೂ ಮಠಗಳ ನಡುವಿನ ‘ಮೈತ್ರಿ’ ಎಲ್ಲರಿಗೂ ತಿಳಿದಿರುವಂತಹದ್ದು. ಇಂದಿನ ಬಹುತೇಕ ಖಾಸಗಿ ಕಾಲೇಜುಗಳಿಗೆ ಲಾಭ ಮಾಡುವುದೇ ಮುಖ್ಯ ಉದ್ದೇಶ ಎಂಬುದೂ ಸರ್ವವಿದಿತ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಿ ಬಡ ವಿದ್ಯಾರ್ಥಿಗಳ  ಹಿತರಕ್ಷಣೆಗೆ ಸರ್ಕಾರ ಮುಂದಾಗುವುದು ಅವಶ್ಯ. ಇದಕ್ಕಾಗಿ ಸರ್ಕಾರಿ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಬಹುದಾದ ದಾರಿ  ಇದ್ದೇ ಇದೆ.ಸುಪ್ರೀಂಕೋರ್ಟ್ ಆದೇಶ ಇದ್ದರೂ ಅದರಲ್ಲಿಯೇ ಬಡ ವಿದ್ಯಾರ್ಥಿಗಳಿಗೆ ನೆರವಾಗುವಂತಹ ಅವಕಾಶ ಏನಿದೆ ಎನ್ನುವುದನ್ನು ಸರ್ಕಾರ ಹುಡುಕಬೇಕು. ಜೊತೆಗೆ ಮೇಲ್ಮನವಿಗೆ ಇರುವ ಅವಕಾಶಗಳನ್ನು ಶೋಧಿಸಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ‘ಅಹಿಂದ’ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಮಾತಿದೆ.ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಷಯದಲ್ಲಿ ಸರ್ಕಾರ ಈ ಮಾತನ್ನು ನಿಜ ಮಾಡಬೇಕು. ಇಲ್ಲವಾದರೆ ಈ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಇದೆ. ಇದರ ಕಳಂಕವನ್ನು ಸರ್ಕಾರವೇ  ಹೊರಬೇಕಾಗುತ್ತದೆ. ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಉದ್ದೇಶದಿಂದಲೇ ರಾಜ್ಯದಲ್ಲಿ ಸಿಇಟಿ ವ್ಯವಸ್ಥೆ ಜಾರಿ­ಗೊಳಿಸಲಾಗಿತ್ತು. ಹೊಸ ಕಾಯ್ದೆ ಜಾರಿಯಿಂದ ಸಿಇಟಿ ವ್ಯವಸ್ಥೆಯೇ ಅರ್ಥ ಕಳೆದುಕೊಳ್ಳುತ್ತದೆ. ಇದಕ್ಕೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಅವಕಾಶ ನೀಡಬಾರದು.ರಾಜ್ಯದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಸರ್ಕಾರ ಮುಂದಾಗಿದೆ. ಎಂಜಿನಿಯರಿಂಗ್ ಕಾಲೇಜುಗಳ ಆರಂಭಕ್ಕೂ ಆದ್ಯತೆ ನೀಡಿ ಬಡ ವಿದ್ಯಾರ್ಥಿಗಳಿಗೂ ಅಲ್ಲಿ ಅವಕಾಶ ಸಿಗುವಂತೆ ಮಾಡ­ಬೇಕು. ಇದು ಜವಾಬ್ದಾರಿಯುತ ಸರ್ಕಾರದ ತುರ್ತು ಕರ್ತವ್ಯವಾಗಿದೆ.

ಪ್ರತಿಕ್ರಿಯಿಸಿ (+)