ಪಲ್ಲವಿಗಳ ಪಲ್ಲವಿಯಲಿ...

7

ಪಲ್ಲವಿಗಳ ಪಲ್ಲವಿಯಲಿ...

Published:
Updated:

ವಿದುಷಿ ಜಿ.ವಿ. ರಂಗನಾಯಕಮ್ಮ ಅವರು ಗಾಯಕಿ, ವೈಣಿಕಿ, ಬೋಧಕಿಯಾಗಿ ಹಲವಾರು ದಶಕಗಳು ಸೇವೆ ಸಲ್ಲಿಸಿದವರು. ಡಾ. ಜಿ.ವಿ. ವಿಜಯಲಕ್ಷ್ಮೀ ವೀಣಾಭ್ಯಾಸ ಮಾಡಿದ್ದರಲ್ಲದೆ ಕಲಾಪೋಷಕರಾಗಿ ಆಧ್ಯಾತ್ಮಿಕ ಚಿಂತನೆಯಲ್ಲೂ ತೊಡಗಿಸಿಕೊಂಡಿದ್ದರು.

 

ರಾಜಕಾರಣಿ ವಿ.ಎಸ್. ಕಷ್ಣಯ್ಯರ್ ಸಹ ಕಲಾ ಪೋಷಕರಾಗಿದ್ದರು. ಮೇಲಾಗಿ ಮೂವರೂ ಶ್ರೀರಾಮ ಕಲಾ ಮಂದಿರದ ಅಭ್ಯುದಯಕ್ಕಾಗಿ ಸದಾ ಸರ್ವದಾ ಶ್ರಮಿಸುತ್ತಿದ್ದರು. ಈ ಮೂವರು ಚೇತನಗಳ ಸ್ಮರಣಾರ್ಥ ದ್ವಾದಶ ದಿನಗಳು ನಡೆದ `ವಸಂತ ಸಂಗೀತೋತ್ಸವ~ವು ಕಲಾಭಿಮಾನಿಗಳಿಗೆ ಒಂದು ದೊಡ್ಡ ಸಂಗೀತದೌತಣ ಆಯಿತು.ಬಹು ಮಂದಿ ಕಲಾವಿದರು ಪಲ್ಲವಿಯನ್ನೇ ಪ್ರಧಾನವಾಗಿ ಆಯ್ದುದು ಸಭಾ ಕಛೇರಿಗೆ ಅನುರೂಪವಾಗಿ ಹೊಂದಿತು ಹಾಗೂ ಸಂದರ್ಭಕ್ಕೆ ಔಚಿತ್ಯಪೂರ್ಣವಾಗಿತ್ತು. ಕಾರ್ಯಕ್ರಮಗಳಿಗೆ ಬಹುತೇಕ ಕಲಾಭಿಮಾನಿಗಳು ಕಿಕ್ಕಿರಿದು ಸೇರಿದ್ದರು.ಪದ್ಮಶ್ರೀ ಸುಧಾ ರಘುನಾಥನ್ ಅವರೂ ಪಲ್ಲವಿಯನ್ನೇ ಆಯ್ದರೂ, ಅದು ಅನೇಕ ದೃಷ್ಟಿಗಳಿಂದ ಭಿನ್ನವಾಗಿತ್ತು. ತ್ರಿರಾಗ ಪಲ್ಲವಿಯನ್ನು ಆಯ್ದು, ಸ್ವಾರಸ್ಯ ಹೆಚ್ಚಿಸಿದರು. ಒಂದರ ನಂತರ ಒಂದಾಗಿ ಮೋಹನ, ಕಾಮವರ್ಧಿನಿ, ಆನಂದಭೈರವಿ ರಾಗಗಳನ್ನು ಮೇಳೈಸುತ್ತಾ ರಾಗದ ಸುಂದರ ಚಿತ್ರ ಬಿಡಿಸಿದರು.

 

ತಾನದ ಜೊತೆ ಮದಂಗವೂ ಸೇರಿದ್ದು ಹೆಚ್ಚು ರಂಜನೀಯ. ಸ್ವರ ಪ್ರಸ್ತಾರವನ್ನು ಅತಿಯಾಗಿ ಲಂಬಿಸದೆ, ಅತಿ ಓಟವೂ ಮಾಡದೆ ಪಲ್ಲವಿಯ ಗಾಂಭೀರ್ಯ ಕಾಪಾಡುವಂತಿತ್ತು.ಆ ಮೊದಲು `ದಾಸರ ವಂದಿಸುವುದಾದಿಯಲಿ~ ಪದವನ್ನು ಚಿಟ್ಟೆ ಸ್ವರದೊಂದಿಗೆ ಹಾಡಿ `ಪರಮಾನಂದ ನಡ~ ನಂತರ ನಿರೂಪಿಸಿದ `ನನುಬ್ರೋವಲಲಿತೆ~ ಮಧುರವಾಗಿ ಹೊಮ್ಮಿತು. ಎಂದೂ ಹಸುರಾದ `ಚಕ್ಕನಿರಾಜ ಮಾರ್ಗಮು~ ಘನವಾಗಿ ವಿಸ್ತರಿಸಿ, ಪೂರ್ಣತ್ವ ನೀಡಿದರು. ಪಿಟೀಲಿನಲ್ಲಿ ಎಂಬಾರ್ ಕಣ್ಣನ್, ಮದಂಗದಲ್ಲಿ ಸ್ಕಂದ ಸುಬ್ರಹ್ಮಣ್ಯನ್ ಹಾಗೂ ಮೋರ್ಚಿಂಗ್‌ನಲ್ಲಿ ರಾಮನ್ ಹೊಂದಾಣಿಕೆಯಿಂದ ಪಕ್ಕವಾದ್ಯಗಳನ್ನು ನುಡಿಸಿದರು.ಬೆಡಗಿನ ಗಾಯನ

ಈ ವರ್ಷದ ವಸಂತ ಸಂಗೀತೋತ್ಸವಕ್ಕೆ ರಂಜನಿ-ಗಾಯತ್ರಿಯರ ಯುಗಳ ಗಾಯನದೊಂದಿಗೆ ಭಾನುವಾರ ತೆರೆ ಬಿದ್ದಿತು. ಇಂದಿನ ಜನಾಕರ್ಷಕ ಯುಗಳ ಗಾಯಕಿಯರಾದ ರಂಜನಿ-ಗಾಯತ್ರಿ ಸಹ ಪಲ್ಲವಿಯನ್ನೇ ಮುಖ್ಯವಾಗಿ ವಿಸ್ತಾರಕ್ಕೆ ತೆಗೆದುಕೊಂಡರು. ಅದೂ ಚತುರ್ ರಾಗ ಪಲ್ಲವಿ ಆಯ್ದುದು, ಆಕರ್ಷಣೆ ಹೆಚ್ಚಿಸಿತು.ನಾಲಕ್ಕು ರಾಗಗಳ ಹಾಸು ಬೀಸುತ್ತಿದ್ದಂತೆ, ಕೇಳುಗರಿಗೆ ಭೂರಿಭೋಜನ ಸವಿದ ಸಂತೃಪ್ತಿ. ವಲಚಿ, ಧನ್ಯಾಸಿ, ರೇವತಿ ಮತ್ತು ಕಲ್ಯಾಣಿ ರಾಗಗಳ ನಾದರಸಾಯನ. ಶ್ರೋತೃಗಳು ಆ ವೇಳೆಗಾಗಲೇ ಗಾಢವಾದ ರಾಗಾಲಾಪನೆಯಲ್ಲಿ ಮಿಂದು, ಪಲ್ಲವಿಯ ಪ್ರೌಢತೆಗೆ ಮಾನಸಿಕವಾಗಿ ಸಿದ್ಧವಾಗಿದ್ದರು. ನಾಟಕುರಂಜಿ ರಾಗವೇ ರಂಜನೀಯ.ರಸವತ್ತಾದ ಸ್ವರಪುಂಜಗಳಿಂದ ಅಲಂಕೃತ. ವಿಳಂಬದಲ್ಲಿ ಸ್ವರಪ್ರಸ್ತಾರವನ್ನು ಪ್ರಾರಂಭಿಸಿ, ಕ್ರಮೇಣ ದ್ರುತ ಕಾಲಕ್ಕೆ ಸರಿದು ರಾಗದ ಒಂದು ವರ್ಣರಂಜಿತ ಚಿತ್ರ ಬಿಡಿಸಿದರು. ಕನ್ನಡ ದೇವರನಾಮವೂ ಹೆಚ್ಚು ಚಾಲ್ತಿಯಲ್ಲಿ ಇಲ್ಲದ್ದನ್ನು ಆಯ್ಕೆ ಮಾಡಿದ್ದೂ ಸ್ವಾಗತಾರ್ಹ. ಪುರಂದರ ದಾಸರ `ಎಚ್ಚರದಲಿ ನಡೆ ಮನವೇ~ ಒಂದು ಅರ್ಥಪೂರ್ಣ ಪದ. ಆದರೆ `ನಾನೇಕೆ ಬಡವನು ನಾನೇಕೆ ಪರದೇಶಿ~- ಹಿಂದಿನಿಂದಲೂ ಪ್ರಸಿದ್ಧವಾದ ಹಾಗೂ ಪ್ರಿಯವಾದ ಪದ.ಸಂತ ತುಕಾರಾಂರ ಅಭಂಗ್‌ನೊಂದಿಗೆ ಹರ್ಷದಾಯಕ ಯುಗಳ ಗಾಯನಕ್ಕೆ ಮಂಗಳ. ಚಾರುಮತಿ ರಘುರಾಮನ್ ಅವರ ಪಿಟೀಲು, ಮನೋಜ್ ಶಿವ ಅವರ ಮೃದಂಗ ಮತ್ತು ಜಿ.ಎಸ್. ರಾಮಾನುಜಂ ಅವರ ಘಟ ಗಾಯನಕ್ಕೆ ಪೂರಕವಾಗಿತ್ತು.

ವಸಂತ ಸಂಗೀತೋತ್ಸವಕ್ಕೆ ಜಿ.ವಿ. ಕೃಷ್ಣಪ್ರಸಾದ್ ಪಟ್ಟ ಶ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.              

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry