ಪಲ್ಲವಿ ಬಾಳಲ್ಲಿ ಮೂಡಿದ ಬೆಳಕು

7

ಪಲ್ಲವಿ ಬಾಳಲ್ಲಿ ಮೂಡಿದ ಬೆಳಕು

Published:
Updated:

ಮೈಸೂರು: ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ, ದಿಕ್ಕು ತೋಚದಂತಾಗಿದ್ದ ಪಲ್ಲವಿ ಬಾಳಲ್ಲಿ ಕೊನೆಗೂ `ಬೆಳಕು~ ಮೂಡಿದೆ. ಎಲ್ಲರೂ ಇದ್ದು ಕೆಲವರು ತಬ್ಬಲಿಗಳಾದರೆ, ಇನ್ನು ಕೆಲವರು ಯಾರೂ ಇಲ್ಲದೆ ತಬ್ಬಲಿಗಳಾಗುತ್ತಾರೆ. ಅಂತಹ ತಬ್ಬಲಿ ಪಲ್ಲವಿಗೆ ಗ್ರಂಥಾಲಯ ಮೇಲ್ವಿಚಾರಕಿ ಹುದ್ದೆ ದೊರೆತಿದ್ದು, ಭವಿಷ್ಯದಲ್ಲಿ ಹೊಸ `ಬೆಳಕು~ ಮೂಡಿಸಿದೆ.ಹುಣಸೂರು ತಾಲ್ಲೂಕು ಗಾವಡಗೆರೆ ಹೋಬಳಿ ಕಟ್ಟೆಮಳಲವಾಡಿಯ `ಬೆಳಕು~ ಸೇವಾ ಸಂಸ್ಥೆ ಪಲ್ಲವಿಗೆ ಉದ್ಯೋಗ ಭಾಗ್ಯ ದೊರಕಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ. ಮೂಲತಃ ಬಿಳಿಕೆರೆ ಹೋಬಳಿ ಜೀನಹಳ್ಳಿ ಪರಿಶಿಷ್ಟ ಜಾತಿಗೆ ಸೇರಿದ ಸಿದ್ದಯ್ಯ, ಹೊನ್ನಮ್ಮ ದಂಪತಿ ಎರಡನೇ ಮಗಳಾಗಿ ಪಲ್ಲವಿ ಜನಿಸಿದರು. ಪಲ್ಲವಿಯ ಅಕ್ಕ ಗಂಡನ ಹಿಂಸೆ ತಾಳದೆ ಆತ್ಮಹತ್ಯೆಗೆ ಶರಣಾದರು. ಇದಾದ ಬಳಿಕ ಕೌಟುಂಬಿಕ ಸಮಸ್ಯೆಗಳಿಂದ ತಂದೆ ಸಿದ್ದಯ್ಯ ಅವರೂ ಆತ್ಮಹತ್ಯೆಗೆ ಶರಣಾದರು.ಇಂತಹ ಸಂದಿಗ್ಧ ಸ್ಥಿತಿಯಲ್ಲಿ, ದಿಕ್ಕು ತೋಚದಂತಾದ ಪಲ್ಲವಿ ಬಾಳಲ್ಲಿ ಬೆಳಕಾಗಿ ಬಂದಿದ್ದು `ಬೆಳಕು~ ಸಂಸ್ಥೆ. ಪಲ್ಲವಿಯನ್ನು ತಮ್ಮ ಸಂಸ್ಥೆಯಲ್ಲಿರಿಸಿಕೊಂಡು ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ನಿಂಗರಾಜ್ ಮಲ್ಲಾಡಿ ಯಶಸ್ವಿಯಾದರು. ಅದೇ ರೀತಿ ಗ್ರಂಥಾಲಯ ಇಲಾಖೆಗೆ ಅರ್ಜಿ ಸಲ್ಲಿಸಿ, ಉದ್ಯೋಗ ದೊರಕಿಸಿಕೊಟ್ಟು ಪಲ್ಲವಿ ಬದುಕಿಗೆ ಹೊಸ ದಾರಿ ಕಟ್ಟಿಕೊಟ್ಟಿದ್ದಾರೆ.ಪಲ್ಲವಿಗೆ ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯವು ಕಟ್ಟೆಮಳಲವಾಡಿ ಗ್ರಂಥಾಲಯದ ಮೇಲ್ವಿಚಾರಕಿಗೆ ಹುದ್ದೆಗೆ ನೇಮಕ ಮಾಡಿಕೊಂಡಿದೆ. ಅಲ್ಲದೆ ಪ್ರತಿ ತಿಂಗಳು ರೂ. 2500 ಗೌರವಧನ ನೀಡುತ್ತಿದೆ. ಪಲ್ಲವಿಗೆ ಬೆಳಕು ನೀಡಿರುವ ಸಂಸ್ಥೆಯು ಅವಳ ಮದುವೆ ಮಾಡುವ ನಿಟ್ಟಿನಲ್ಲಿ ಅಣಿಯಾಗುತ್ತಿದೆ. ಬೆಳಕು ಸೇವಾ ಸಂಸ್ಥೆಯಲ್ಲಿ ಸದ್ಯ 30 ನಿರ್ಗತಿಕ ಮಕ್ಕಳು ಆಶ್ರಯ ಪಡೆದಿದ್ದು, ಎಲ್ಲರೂ ಶಿಕ್ಷಣ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry