ಪವಾಡದ ನಿರೀಕ್ಷೆ

7

ಪವಾಡದ ನಿರೀಕ್ಷೆ

Published:
Updated:
ಪವಾಡದ ನಿರೀಕ್ಷೆ

ಸಿಲಿಕಾನ್ ಸಿಟಿಯೆಂದೇ ಜಗತ್ತಿನಲ್ಲಿ ಹೆಸರಾದ ಬೆಂಗಳೂರಿನ ಬಡಿವಾರವೇನು ಕಡಿಮೆಯಿಲ್ಲ. ತಂತ್ರಾಂಶ ಉತ್ಪಾದನೆಯಲ್ಲಿ ಹಲವಾರು ಕಂಪನಿಗಳು ತೊಡಗಿ ನೂರಾರು ತಂತ್ರಾಂಶ ಪರಿಣತರನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವ ಹಿರಿಮೆ ಈ ಊರಿನದು. ಚೀನಾ ದೇಶದ ತಂತ್ರಾಂಶ ಮಂತ್ರಿಯೊಬ್ಬ ಶಿಷ್ಟಾಚಾರಕ್ಕಾದರೂ ಕ್ಯಾರೇ ಅನ್ನದೆ ನೇರ ಬೆಂಗಳೂರಿಗೇ ಬಂದು, ನೇರ ಇನ್ಫೋಸಿಸ್‌ಗೇ ಭೇಟಿ ನೀಡಿದ ಬಗ್ಗೆ ಹರಿಕತೆ ಮಾಡದ ಬೆಂಗಳೂರಿಗನುಂಟೆ? ಅಭಿಪ್ರಾಯ ಇಂತಿರುವಲ್ಲಿ ಹೊರಗಿನವರಿಗೆ ಜಗತ್ತಿನಾದ್ಯಂತ ಶಾಖೆಗಳನ್ನು ಹೊಂದಿರುವ ತಂತ್ರಾಂಶದ ಕಂಪನಿಗಳೇ ನಾಡಿನ ಹಿರಿಮಗನಂತೆ ಮೆರೆಯುತ್ತಿರಬೇಕಾದರೆ ಇನ್ನು ಈ ಸಿಲಿಕಾನ್ ಸಿಟಿಯ ಮಾತೃಭಾಷೆಯ ತಂತ್ರಾಂಶ ಹ್ಯಾಗೆ ಜಗಮಗ ಹೊಳೆಯುತ್ತಿದೆಯೋ!ಎಂದು ಕುತೂಹಲ ತಾಳುವುದು ಸಹಜ. ಅವರಿಗೆ ಕನ್ನಡ ಭಾಷೆಯ ಶೋಚನೀಯ ಸ್ಥಿತಿಯ ಅರಿವಾದರೆ ಆಶ್ಚರ್ಯವಾಗಬಹುದು. ಸದರಿ ದೊಡ್ಡ ಕಂಪನಿಗಳಿಂದ ಕನ್ನಡ ಭಾಷೆಯ ತಂತ್ರಾಂಶಕ್ಕೆ ಬಿಡಿಗಾಸಿನ ಪ್ರಯೋಜನವೂ ಆಗಿಲ್ಲವೆಂಬುದಿರಲಿ, ನಮ್ಮ ನೆರೆಹೊರೆ ಭಾಷೆಗಳಲ್ಲಿ ಆಗಿರುವಂಥ ಬೆಳವಣಿಗೆಯೂ ಆಗಿಲ್ಲವೆಂದು ತಿಳಿದರಂತೂ ಆಘಾತವಾಗಬಹುದು.ಕುವೆಂಪು ತಂತ್ರಾಂಶದ ಬಿಡುಗಡೆಯ ಸಂದರ್ಭದಲ್ಲಿ ಒಂದು ಚಿಕ್ಕ ಅವತರಣಿಕೆಯನ್ನು ಕಳಿಸಿ ಸಭೆಯಲ್ಲಿ ಓದುವಂತೆ ತೇಜಸ್ವಿ ಹೇಳಿದ್ದರು. ಅದರ ಮುಖ್ಯ ಭಾಗ ಇದು: ‘ಒಂದು ಭಾಷೆಯಲ್ಲಿ ಎಂತೆಂಥಾ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯ ಸಾಹಿತ್ಯ ಸಮ್ಮೇಳನಗಳು ನಡೆದವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನಬಳಕೆ ಕಡಿಮೆಯಾಗುತ್ತ ಬಂದರೆ ರಾಜ, ಮಹಾರಾಜರು, ಸರಕಾರಗಳು ಕೊಡುವ ಯಾವ ಪ್ರಶಸ್ತಿ ಅನುದಾನಗಳಿಂದಲೂ ವಿಚಾರಸಂಕಿರಣ, ಚಳುವಳಿಗಳಿಂದಲೂ ಆ ಭಾಷೆಯನ್ನು ಉಳಿಸಲಾಗುವುದಿಲ್ಲ. ಇದಕ್ಕೆ ಸಂಸ್ಕೃತವೇ ಉತ್ತಮ ಉದಾಹರಣೆ. ಇಂಥ ಮಾತು ಕೇಳಿ ಅನೇಕ ಕನ್ನಡಾಭಿಮಾನಿಗಳು “ಆರು ಕೋಟಿ ಜನರಾಡುವ ಭಾಷೆ ನಾಶವಾಗಬಹುದೆ?” ಎಂದು ಕೇಳಬಹುದು, ನಿಜ. ಆದರೆ ಜಾಗತೀಕರಣದ ಈ ಸಂದರ್ಭದಲ್ಲಿ ಭಾರತದ ಎಲ್ಲ ದೇಶೀ ಭಾಷೆಗಳೂ ಅಪಾಯದ ಸ್ಥಿತಿಯಲ್ಲಿವೆಯೆಂಬುದು ನಿಸ್ಸಂಶಯ’. ಎಂದು ತೇಜಸ್ವಿ ನಂಬಿದ್ದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಂತೂ ಕನ್ನಡವನ್ನ ಬಲಾಢ್ಯವಾಗಿ ಬೆಳೆಸಬೇಕಾದ ಅಗತ್ಯವಿದೆಯೆಂದೂ ಅವರು ಹೇಳುತ್ತಿದ್ದರು.ಈಗ ನಾವು ಕಂಪ್ಯೂಟರಿನಲ್ಲಿ ಇಂಗ್ಲಿಷ್ ಮೂಲಕ ವ್ಯವಹರಿಸುತ್ತಿದ್ದೇವೆ. ಇನ್ನು ಮುಂದಾದರೂ ಕನ್ನಡದ ಮೂಲಕ ವ್ಯವಹಾರವನ್ನು ನಿಭಾಯಿಸದಿದ್ದರೆ ನಮ್ಮ ಚೆಲುವ ಕನ್ನಡವೂ ಅಳಿವಿನಂಚಿಗೆ ಸರಿಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅಂದರೆ ನಾವು ಕಂಪ್ಯೂಟರಿನಲ್ಲಿ ಇಂಗ್ಲಿಷಿನಷ್ಟೇ ಸಮರ್ಥವಾಗಿ ಕನ್ನಡದಲ್ಲೂ ವ್ಯವಹರಿಸಬೇಕಾದ್ದು ಅನಿವಾರ್ಯ.ಕನ್ನಡದಲ್ಲಿ ಇವತ್ತು ಅನೇಕ ತಂತ್ರಾಂಶಗಳು ಬಳಕೆಯಲ್ಲಿವೆಯಾದರೂ ಪ್ರತಿಯೊಂದರಲ್ಲಿ ಒಂದಿಲ್ಲೊಂದು ಕೊರತೆ ಇದ್ದೇ ಇದೆ. ಕೀಲೀಮಣೆ ವಿನ್ಯಾಸವೂ ಒಂದರಂತೆ ಇನ್ನೊಂದಿಲ್ಲ, ಸಾಲದ್ದಕ್ಕೆ ಒಬ್ಬೊಬ್ಬರ ಏನ್ಕೊಡಿಂಗ್ ಒಂದೊಂದು ಥರ ಇದೆ.ಹೀಗಾಗಿ ಒಬ್ಬರ ಫೈಲುಗಳನ್ನ ಇನ್ನೊಬ್ಬರ ಕಂಪ್ಯೂಟರಿಗೆ ಹಾಕಿ ಉಪಯೋಗಿಸುವಂತಿಲ್ಲ, ಇಂಥ ವ್ಯವಹಾರ ನೆರೆಯ ಭಾಷೆಗಳಲ್ಲಿ ಸುಗಮವಾಗಿ ನಡೆದಿರುವಾಗ ಕನ್ನಡದಲ್ಲಿಯೇ ಯಾಕಿಷ್ಟು ಗೊಂದಲ ಸೃಷ್ಟಿಯಾಯಿತು? ಯಾಕೆ ತಿಳುವಳಿಕೆಯನ್ನ ಇನ್ನೊಬ್ಬರು ಉಪಯೋಗಿಸದಂತಾಗಿದೆ? ತಮಿಳಂತೂ ಕನ್ನಡಕ್ಕಿಂತ ಐದು ಯುಗಗಳಷ್ಟು (15 ವರ್ಷ) ಈ ವಿಷಯದಲ್ಲಿ ಮುಂದಿದೆಯಂತೆ! ಕನ್ನಡ ತಂತ್ರಾಂಶದ ಅಭಿವೃದ್ಧಿ ಮಾತ್ರ ಅಧೋಗತಿಗೆ ಇಳಿದಿದೆ. ಇದರ ಸಂಪೂರ್ಣ ಹೊಣೆಗಾರಿಕೆ ಸರಕಾರೀ ಅಧಿಕಾರಿಗಳ ಮೇಲೇ ಇದೆ. ಸಕಾಲದಲ್ಲಿ ಸರಿಯಾದ ತೀರ್ಮಾನ ತಕ್ಕೊಳ್ಳದೆ ತಮಗಿಷ್ಟವಾದ ತಂತ್ರಾಂಶ ಸಂಸ್ಥೆಗೆ ಅನುಗ್ರಹ ತೋರಿಸಿ ಇಷ್ಟೆಲ್ಲ ಗೊಂದಲ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ.ತಂತ್ರಾಂಶದಲ್ಲಿ ಯಾವುದೇ ಹೊಸ ಮತ್ತು ಭಿನ್ನ ಪ್ರಯೋಗಗಳು ನಡೆದರೂ ಅದಕ್ಕೆಲ್ಲ ದೊಡ್ಡ ಗಿರಾಕಿ ಅಂದರೆ ಕರ್ನಾಟಕ ಸರಕಾರವೇ. ಆದ್ದರಿಂದ ಅನೇಕ ತಂತ್ರಾಂಶಗಳಿರುವಾಗ ಪ್ರಾತಿನಿಧಿಕವಾದ ಹಾಗೂ ಸಮಾನವಾದ ಮಾನದಂಡಗಳನ್ನು ಅಳವಡಿಸಬೇಕಾದ್ದು ಸರಕಾರದ ಕರ್ತವ್ಯವಾಗಿತ್ತು. ಬಹುಶಃ ಇದಕ್ಕೆ ಹಿಂದಿನ ಮುಖ್ಯಮಂತ್ರಿಗಳ ನಿರ್ಲಕ್ಷ ಕಾರಣವಾಗಿರಬಹುದು. ಅಥವಾ ಕನ್ನಡದ ಅಗತ್ಯಗಳಾದರೂ ಸೀಮಿತವಾಗಿರಬೇಕು. ಹಾಗಂತ ತಂತ್ರಜ್ಞಾನದ ವೇಗದ ನಡೆಯನ್ನು ತಡೆಯಲಾದೀತೆ? ಇಂಟರ್‌ನೆಟ್ ಬಂತು, ಇ-ಮೇಲ್ ಬಂತು, ಇಂಟರ್‌ನೆಟ್‌ನಿಂದ ಇ-ವಾಣಿಜ್ಯ ಬಂತು, ಇ-ಆಡಳಿತ ಬಂತು! ನಮ್ಮ ದೈನಂದಿನ ಬದುಕಿನ ಬಹುಭಾಗವನ್ನ ಇದೇ ಆವರಿಸಿರುವುದರಿಂದ ಕನ್ನಡ ಉಳಿಯಬೇಕಾದರೆ ತಂತ್ರಜ್ಞಾನದ ಅಬ್ಬರದ ನಡೆಯ ಭಾರವನ್ನು ನಿಭಾಯಿಸಲೇಬೇಕು. ಈಗ ಕನ್ನಡ ಹಿಂದೆ ಬಿದ್ದು ಇಂಗ್ಲಿಷ್ ಮುಂದಾದರೆ ಕನ್ನಡಕ್ಕೆ ಭವಿಷ್ಯವೆಂಬುದು ಇರುವುದೇ ಇಲ್ಲ. ಇಲ್ಲಿ ಜಾಗೃತರಾಗಬೇಕಾದವರು ನಾಭಿಮೂಲದಿಂದ ಕನ್ನಡ ಮಾತಾಡುವ ಜನ; ಮತ್ತು ಸರಕಾರ, ಅಧಿಕಾರಿಗಳಲ್ಲ.ಅಂತರ್ಜಾಲದ ಮೂಲಕ ವ್ಯವಹಾರಗಳನ್ನ ರವಾನಿಸುವುದು ಸುರುವಾದೊಡನೆ ಫಾಂಟ್‌ಗಳಿಗೆ ಏಕರೂಪ ಬೇಕೆಂಬ ಅಗತ್ಯ ಕಂಡುಬಂತು, ತಂತ್ರಾಂಶಕ್ಕೆ ಏಕರೂಪದ ಮಾನದಂಡವನ್ನ ನಿಗದಿಪಡಿಸುವ ಜವಾಬ್ದಾರಿಯನ್ನ ಸರಕಾರ ಕನ್ನಡ ಗಣಕ ಪರಿಷತ್ತಿಗೆ ವಹಿಸಿಕೊಟ್ಟಿತು ನೋಡು: ಕರ್ನಾಟಕದಲ್ಲಿರುವ ಎಲ್ಲಾ ಕಂಪನಿಗಳ ತಂತ್ರಾಂಶವೂ ಇಸ್ಕಿ ಮಾನದಂಡವನ್ನ ಅನುಸರಿಸತಕ್ಕದ್ದು ಎಂಬಂಥ ಮತಲಬಿ ಆದೇಶಗಳು ಬರತೊಡಗಿದವು! ಕನ್ನಡ ತಂತ್ರಾಂಶದ ಪ್ರತಿಭಾವಂತ ಕಂಪನಿಗಳೆಲ್ಲ ಬಾಗಿಲು ಮುಚ್ಚಿ ಎತ್ತಂಗಡಿ ಮಾಡಿ ಬೇರೆ ರಾಜ್ಯಗಳಿಗೆ ಗುಳೆ ಹೋದರು.ಇದೂ ಸಾಲದೆಂದು ಇಸ್ಕಿ ಮಾನದಂಡವನ್ನಾದರೂ ಬಳಸುತ್ತಿಲ್ಲವೆಂದು ತಮಗೆ ತಾವೇ ಹೇಳಿಕೊಂಡು ಇನ್ನು ಮುಂದೆ ಎಲ್ಲಾ ಸರಕಾರೀ ಕಛೇರಿಗಳೂ ಗಣಕ ಪರಿಷತ್ತಿನ ತಂತ್ರಾಂಶವನ್ನೇ ಬಳಸತಕ್ಕದ್ದು ಎಂಬೊಂದು ಸರಕಾರೀ ಆಜ್ಞೆಯೂ ಬಂತು. ಇದರಿಂದಂತೂ ಅಳಿದುಳಿದ ಒಂದೆರಡು ಕಂಪನಿಗಳೂ ಹಾಸಿಗೆ ಹಿಡಿದವು. ‘ಈ ಆಜ್ಞೆ ಹೊರಡಿಸಿದ ಅಧಿಕಾರಿ ಶ್ರೀ ವಿವೇಕ ಕುಲಕರ್ಣಿ ಅವರು ಸದರಿ ಕಾನೂನು ಜಾರಿ ಮಾಡುವ ಮೊದಲು ಗಣಕ ಪರಿಷತ್ತಿನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ “ಈ ಕಾನೂನು ತಂದ ಕೂಡಲೇ ಕನ್ನಡ ಸಾಫ್ಟ್‌ವೇರ್ ಕಂಪನಿಗಳೆಲ್ಲಾ ಬಾಗಿಲು ಮುಚ್ಚಿಕೊಳ್ಳುತ್ತವೆ. ಅನಂತರ ಇಡೀ ಕರ್ನಾಟಕಕ್ಕೆ ನೀವೇ ಕನ್ನಡ ತಂತ್ರಾಂಶಗಳನ್ನು ಸರಬರಾಜು ಮಾಡಬೇಕಾಗುವುದರಿಂದ ಸರ್ಕಾರದಿಂದ ಹೆಚ್ಚು ಹಣ ಕೇಳಿ’ ಎಂದು ಬರೆದಿದ್ದಾರೆ. (ತೇಜಸ್ವಿ: ಪ್ರಜಾವಾಣಿ 06.08.2004 ಈ ಅವನತಿಗೆ ಕಾರಣ ಯಾರು? ಪು. 2).ನುಡಿ ತಂತ್ರಾಂಶವನ್ನು ಗಣಕ ಪರಿಷತ್ತು ಸರಕಾರಕ್ಕೆ ಮಾರಿದೆ. ತಾನೇ ಮಾರಿದ್ದನ್ನು ನಾಡಿಗೆ ಪರಿಷತ್ತಿಗೇ ಹ್ಯಾಗೆ ಸರಬರಾಜು ಮಾಡುತ್ತದೆ? ಈ ಪ್ರಶ್ನೆಯನ್ನೂ ತೇಜಸ್ವಿಯವರೇ ಕೇಳಿದ್ದರು.ಈ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ನನ್ನ ಪ್ರವೇಶವಾಯಿತು. ನಾನಾಗ ಶಾಸಕನಾಗಿದ್ದೆ. ಇಷ್ಟರಲ್ಲಾಗಲೇ ತಂತ್ರಾಂಶದ ಈ ಗೊಂದಲಗಳ ಬಗ್ಗೆ ಲಿಂಗದೇವರು ಹಳೇಮನೆ ಮೈಸೂರಿನಲ್ಲೊಂದು ಸಭೆ ಕರೆದು, ಅದರಲ್ಲಿ ತೇಜಸ್ವಿ, ಪವನಜ, ಸತ್ಯನಾರಾಯಣ, ಕುಮಾರಸ್ವಾಮಿ ಮುಂತಾದವರು ಭಾಗವಹಿಸಿ ಚರ್ಚಿಸಿದ್ದರು. ಆಮೇಲೆ ಬೆಂಗಳೂರಿನಲ್ಲೂ ಒಂದು ಸಭೆ ಕರೆದರು. ಅದರಲ್ಲಿ ಜಿ. ವೆಂಕಟಸುಬ್ಬಯ್ಯ, ಹನುಮಂತಯ್ಯ, ಕುಮಾರಸ್ವಾಮಿ, ತೇಜಸ್ವಿ, ಲಿಂಗದೇವರು ಹಳೇಮನೆ ಮುಂತಾದವರಿದ್ದು ತೇಜಸ್ವಿ ಮತ್ತು ಹಳೇಮನೆಯವರು ಮಾತಾಡಿದರು.ನಮಗೂ ಮುಖ್ಯವಾಗಿ ಶ್ರೀ ಜಿ.ವೆಂಕಟಸುಬ್ಬಯ್ಯನವರಿಗೆ ಖಾತ್ರಿಯಾಗಿ ಇದನ್ನು ಸರಿಪಡಿಸಲೇಬೇಕೆಂದು ಹೇಳಿದರು. ಈ ವಿಷಯವಾಗಿ ಮೇಲ್ಮನೆಯಲ್ಲಿ ನಾನು ಮಾತಾಡಿದೆ. ಬಿ.ಕೆ. ಚಂದ್ರಶೇಖರ ಅವರಿಂದಲೂ ಬೆಂಬಲ ಸಿಕ್ಕಿತು. ಅಂದಿನ ಕಾಂಗ್ರೆಸ್ ನೇತಾರರಾಗಿದ್ದ ಶ್ರೀ ಖರ್ಗೆಯವರು ಮುಂದೆ ನಾವೇನು ಮಾಡಬೇಕೆಂದು ಕೇಳಿದ್ದರು. ಅವರಿಗಾಗಿ ಮತ್ತು ಮುಖ್ಯಮಂತ್ರಿಗಳಾದಿಯಾಗಿ ಗಣ್ಯರಿಗೆ ಕಾಗದ ಬರೆದು ಪರಿಸ್ಥಿತಿಯನ್ನು ಸುಧಾರಿಸಲು ಮನವಿ ಮಾಡಿಕೊಂಡೆವು. ಮಂತ್ರಿಗಳನ್ನು ಹಾಗೂ ಗಣ್ಯರನ್ನು ನೋಡಲು ನನ್ನೊಂದಿಗೆ ತೇಜಸ್ವಿ ಕೂಡ ಬಂದಿದ್ದರು. ಅನೇಕರು ನಮ್ಮನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಪೋಟೋ ಹಿಡಿಸಿಕೊಂಡು ಕಳಿಸಿದರೇ ವಿನಾ ಬೇರೇನೂ ಮಾಡಲಿಲ್ಲ.ಈ ಮಧ್ಯೆ ಸರಕಾರ ಮೈಕ್ರೊಸಾಫ್ಟ್‌ನೊಂದಿಗೆ ‘ಪ್ರಾಜೆಕ್ಟ್ ಶಿಕ್ಷಾ’ ಕಾರ್ಯಕ್ರಮದ ಒಪ್ಪಂದವೊಂದನ್ನು ಮಾಡಿಕೊಂಡು ಅದಕ್ಕೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಸಹಿ ಹಾಕಿದ್ದರು. ನುಡಿ ತಂತ್ರಾಂಶವನ್ನು ಕೊಳ್ಳುವಾಗ ಯಾವುದೇ ತಂತ್ರಾಂಶವನ್ನು ಮಾರಾಟ ಮಾಡುವವರು ಸೋರ್ಸ್‌ಕೋಡ್ ಸಮೇತ ಕೊಡಬೇಕೆಂದು ನಿಬಂಧನೆ ಹಾಕಿದ್ದರು.ಆದರೆ ಮೈಕ್ರೊಸಾಫ್ಟ್‌ನೊಂದಿಗೆ ವ್ಯವಹರಿಸುವಾಗ ಸದರಿ ನಿಬಂಧನೆಗೆ ವಿನಾಯಿತಿ ಕೊಟ್ಟಿದ್ದರು! ಇಲ್ಲಿ ಕೆಲವು ಪ್ರಶ್ನೆಗಳಿವೆ: ಸೋರ್ಸ್‌ಕೋಡ್ ಕೊಡದೆ ತನ್ನ ದೇಶದಿಂದಲೇ ಬಹಿಷ್ಕೃತಗೊಂಡಿದ್ದ ಮೈಕ್ರೊಸಾಫ್ಟ್ ಸಂಸ್ಥೆಯೊಂದಿಗೆ ಕರ್ನಟಕ ಸರಕಾರ ವ್ಯವಹಾರ ಮಾಡುತ್ತಿದೆಯಲ್ಲ, ಯಾಕೆ? ತಾನೇ ಕಸದ ಬುಟ್ಟಿಗೆ ಬಿಸಾಕಲಿದ್ದ ವಿಂಡೊ 98ನ್ನು ಉಪಯೋಗಿಸಿ ಕೋಟ್ಯಾಂತರ ರೂಪಾಯಿ ಸರಕಾರೀ ವೆಚ್ಚದಲ್ಲಿ ಕನ್ನಡಿಗರಿಗೆ ತರಬೇತಿ ಕೊಡುತ್ತೇನೆನ್ನುವ ಮೈಕ್ರೊಸಾಫ್ಟ್‌ನ ಉದ್ದೇಶ ನಮ್ಮ ಅಧಿಕಾರಿಗೆ ತಿಳಿಯಲಿಲ್ಲವೆಂದರೆ ಹ್ಯಾಗೆ ನಂಬುವುದು? ಸರಕಾರೀ ಸ್ವಾಮ್ಯದ ನುಡಿ ತಂತ್ರಾಂಶವೇ ಇನ್ನೂ ಸೋರ್ಸ್‌ಕೋಡ್‌ನ್ನು ಕೊಟ್ಟಿಲ್ಲವೆಂದು ತೇಜಸ್ವಿ ಪರಿಪರಿಯಾಗಿ ಕೇಳಿಕೊಂಡರೂ ಅದೆಲ್ಲ ವ್ಯರ್ಥವಾಯಿತಲ್ಲ, ಯಾಕೆ? ಸೋರ್ಸ್‌ಕೋಡ್ ಕೊಡದ್ದರಿಂದಲೇ ಯಾವ ಬಿಲ್‌ಗೇಟ್ ಮಹಾಶಯನಿಗೆ ನಮ್ಮ ರಾಷ್ಟ್ರಾಧ್ಯಕ್ಷರಾದ ಅಬುಲ್‌ಕಲಾಂ ಅವರು ಸಂದರ್ಶನ ನಿರಾಕರಿಸಿದರೋ ಅಂಥಾ ಮಹಾಶಯನಿಗೆ ನಮ್ಮ ಸರಕಾರದ ಕಾರ್ಯದರ್ಶಿಗಳು ಅನುಗ್ರಹ ಮಾಡಿದರಲ್ಲಾ, ಯಾಕೆ? ಈ ಬಗ್ಗೆ ಮೇಲ್ಮನೆಯಲ್ಲೂ ಪ್ರಸ್ತಾಪಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ, ಮುಖ್ಯಮಂತ್ರಿಗಳು ಕೂಡಲೇ ಕ್ರಮಕೈಗೊಳ್ಳಲು ಬರೆದು ಕಳಿಸಿದರೂ ಕಾರ್ಯದರ್ಶಿಗಳು ನಿರ್ಲಕ್ಷ್ಯ ತಾಳಿದರಲ್ಲಾ! ಇದು ಆಶ್ಚರ್ಯಕರವಲ್ಲವೆ?ಇಷ್ಟೆಲ್ಲಾ ನಿರಾಸೆಗಳಾದ ಮೇಲೆ ಸನ್ಮಾನ್ಯ ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದೊಡನೆ ದೃಶ್ಯ ಬದಲಾವಣೆಯಾಯಿತು. ತಂತ್ರಾಂಶದ ಬಗ್ಗೆಯೇ ನಾನು ಹತಾಶನಾಗಿ ಅವರೊಂದಿಗೆ ಮಾತಾಡಿದಾಗ ಸನ್ಮಾನ್ಯ ವಿ.ಎಸ್. ಆಚಾರ್ಯ ಅವರೂ ಅವರೊಂದಿಗಿದ್ದರು. ಅವರಿಬ್ಬರಿಗೂ ನಾನು ಹೇಳಿದ್ದು ಖಾತ್ರಿಯಾಗಿ ಪೂರಕ ಬಜೆಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿ ತೆಗೆದಿಟ್ಟರಲ್ಲದೆ ಡಾ. ಚಿದಾನಂದಗೌಡರ ನೇತೃತ್ವದಲ್ಲಿ ‘ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ’ಯನ್ನು ರಚಿಸಿ ವರದಿ ಸಲ್ಲಿಸುವಂತೆ ಕೇಳಿದರು. ಸದರಿ ಸಮಿತಿ ವ್ಯಾಪಕವಾದ ಒಂದು ವರದಿಯನ್ನು ಸರಕಾರಕ್ಕೆ ಕೊಟ್ಟಾಗಿದೆ, ಅದನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರಕಾರದ ಮೇಲೇ ಇದೆ. ಆ ಜವಾಬ್ದಾರಿಯನ್ನೂ ಸದರಿ ತಂತ್ರಾಂಶ ಅಭಿವೃದ್ಧಿ ಸಮಿತಿಗೇ ವಹಿಸಿಕೊಡುವಂತೆ ಕೇಳಿದ್ದೇನೆ. ಇದು ಕಾರ್ಯರೂಪಕ್ಕೆ ಬಂದರೆ ಕನ್ನಡಕ್ಕೆ ಉಸಿರಾಡುವಷ್ಟಾದರೂ ಜೀವ ಬಂದೀತೆಂದು, ತೇಜಸ್ವಿ ಅವರ ಆತ್ಮಕ್ಕೆ ಕೊಂಚವಾದರೂ ಶಾಂತಿ ಲಭಿಸೀತೆಂದು ನಂಬಿದ್ದೇನೆ.ತಮಿಳರು ಪ್ರತಿವರ್ಷ ವಿಶ್ವತಮಿಳು ಸಮ್ಮೇಳನಗಳನ್ನು ಮಾಡುತ್ತಾರೆ. ಇತ್ತೀಚಿನ ಸಮ್ಮೇಳನದಲ್ಲಿ ತಂತ್ರಾಂಶ ಅಭಿವೃದ್ಧಿಯನ್ನು ಕುರಿತೇ 140 ಪ್ರಬಂಧಗಳು ಮಂಡನೆಯಾಗಿದ್ದವು! ಒಂದನೇ ದಿನದ ಸಭೆಯಲ್ಲಿ ತಂತ್ರಾಂಶ ಪರಿಣತರು ಇಟ್ಟ ಬೇಡಿಕೆಗಳನ್ನು ಮೂರನೇ ದಿನದ ಸಭೆಯಲ್ಲಿ ಸರಕಾರ ಈಡೇರಿಸಿದ ಆದೇಶಗಳನ್ನು ಹೊರಡಿಸಿ ಪವಾಡ ಮಾಡಿತ್ತು! ಅಂಥದೊಂದು ಪವಾಡವನ್ನ ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನದಲ್ಲಿ ನಾವು ನಿರೀಕ್ಷಿಸಬಹುದೆ?


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry